

ಕಾರವಾರ: ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ಮುಂದುವರಿಯಬೇಕು ಎಂದು ಪ್ರಾರ್ಥಿಸಿ ಸೆಪ್ಟೆಂಬರ್ 27 ರಿಂದ 29ರ ವರೆಗೆ ಗೋಕರ್ಣದಲ್ಲಿ ಮಹಾರುದ್ರ ಯಾಗ ನಡೆಸಲಾಗುವುದು ಎಂದು ಅನಂತಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅನಂತಮೂರ್ತಿ ಹೆಗಡೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಪುನೀತ ರಾಜಕುಮಾರ ಅವರು ಪ್ರೇರಣೆಯಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದೇನೆ. ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ನಮಗೆ ಆದರ್ಶ. ಟ್ರಸ್ಟ್ ಸ್ಥಾಪಿಸಿ ಸಮಾಜಕ್ಕೆ ಕೆಲಸ ಮಾಡುತ್ತಿದ್ದೇನೆ. ಅನಂತಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್ ಜಿಲ್ಲೆಯಲ್ಲಿ ಸಾಮಾಜಿಕ ಕಾರ್ಯಗಳನ್ನು ಜಿಲ್ಲಾದ್ಯಂತ ನಡೆಸಿಕೊಂಡು ಬಂದಿದೆ ಎಂದರು.
ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ದೇಶದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಭಾರತ ವಿಶ್ವಗುರುವಾಗಲು ನರೇಂದ್ರ ಮೋದಿ ಅವರ ನಾಯಕತ್ವ ಇನ್ನಷ್ಟು ವರ್ಷ ಬೇಕಿದೆ. ಹಾಗಾಗಿ ಅವರಿಗೆ ಉತ್ತಮ ಆರೋಗ್ಯ ಪ್ರಾಪ್ತಿಯಾಗುವ ಜತೆಗೆ ಅವರ ಆಯಸ್ಸು ವೃದ್ಧಿಸಬೇಕು ಎಂಬ ಅಭಿಲಾಷೆಯಲ್ಲಿ ಯಾಗ ನಡೆಸಲಾಗುತ್ತಿದೆ ಎಂದರು.
ಮೋದಿ ಅವರ ಮೇಲೆ ಅಪಾರ ಭಕ್ತಿ ಇದೆ. ಅವರ ಮೇಲಿನ ಅಭಿಮಾನದಿಂದ ಈ ಕೆಲಸ ಮಾಡಲಾಗುತ್ತಿದೆ. ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ' ಎಂದು ಸ್ಪಷ್ಟಪಡಿಸಿದರು. ಸೆ.27 ರಿಂದ ಮೂರು ದಿನ ನೂರಾರು ವೈದಿಕರು ಪಾಲ್ಗೊಂಡು ಯಾಗವನ್ನು ಸಮರ್ಪಕವಾಗಿ ನಡೆಸಿಕೊಡುವರು ಎಂದರು. ಸಂತೋಷ ನಾಯ್ಕ ಬ್ಯಾಗದ್ದೆ ಸುದ್ದಿಗೋಷ್ಠಿಯಲ್ಲಿದ್ದರು.