ಅ.7ರಂದು ಮಹರ್ಷಿ ವಾಲ್ಮೀಕಿ ಜಯಂತಿ ಅರ್ಥಪೂರ್ಣ ಆಚರಣೆ

28HDK03
Published on

ಎಚ್.ಡಿ.ಕೋಟೆ: ಪಟ್ಟಣದಲ್ಲಿ ಅ.7ರಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

ಪಟ್ಟಣದ ತಾಲೂಕು ಆಡಳಿತಸೌಧದ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಾತ್ಮರ ಜಯಂತಿ ಒಂದು ಸಮಾಜಕ್ಕಷ್ಟೇ ಸೀಮಿತವಾಗುತ್ತಿವೆ. ಮುಂದಿನ ದಿನಗಳಲ್ಲಿ ಅದಾಗದಂತೆ ನೋಡಿಕಳ್ಳಬೇಕು. ಅಲ್ಲದೆ ತಾಲೂಕಿನ ಎಲ್ಲ ಮುಖಂಡರನ್ನು ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದರು.

ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ವಾಲ್ಮೀಕಿ ಭವನದ ಉಳಿಕೆ ಕಾಮಗಾರಿಗಳಿಗೆ ಅನುದಾನದ ಅಗತ್ಯ ಇರುವುದರಿಂದ ಮುಖ್ಯಮಂತ್ರಿಯನ್ನು ಭೇಟಿ ಮಾಡಿ 2 ಕೋಟಿ ರೂ. ಮಂಜೂರು ಮಾಡಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ವಾಲ್ಮೀಕಿ ನಿಗಮದಲ್ಲಿನ ಗೊಂದಲದಿಂದಾಗಿ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿರಲಿಲ್ಲ. ಇದರಿಂದ ಕಾಮಗಾರಿಗಳು ಸ್ಥಗಿತಗೊಂಡಿದ್ದವು. ಈಗ ಮುಖ್ಯಮಂತ್ರಿಗಳು ಸಮುದಾಯದ ಅಭಿವೃದ್ಧಿಗೆ 70 ಕೋಟಿ ರೂ. ಬಿಡುಗಡೆ ಮಾಡುವ ಭರವಸೆ ನೀಡಿದ್ದು, ಎರಡು ಕೋಟಿ ಹಣವನ್ನು ಪಟ್ಟಣದ ವಾಲ್ಮೀಕಿ ಭವನಕ್ಕೆ ಮಂಜೂರು ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. 15 ದಿನದಲ್ಲಿ ಅನುದಾನ ಬಿಡುಗಡೆಯಾಗಲಿದ್ದು, ಮೂರ್ನಾಲ್ಕು ತಿಂಗಳೊಳಗೆ ವಾಲ್ಮೀಕಿ ಭವನದ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ಕುಲಶಾಸ್ತ್ರೀಯ ಅಧ್ಯಯನದ ಮೂಲಕ ಎಸ್‌ಟಿಗೆ ನಾಯಕ ಸಮಾಜವನ್ನು ಸೇರಿಸಲಾಗಿತ್ತು, ಅದೇ ರೀತಿ ಮತ್ತೊಮ್ಮೆ ಕುಲ ಶಾಸ್ತ್ರವನ್ನು ಅಧ್ಯಯನ ಮಾಡಿ ಮೀಸಲಾತಿಯನ್ನು ಹೆಚ್ಚಿಸಲು ಒತ್ತಡ ಹೇರಲಾಗುವುದು ಎಂದರು.

ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಮಾತನಾಡಿ, ಎಸ್‌ಟಿ ಮೀಸಲಾತಿಗೆ ಕುರುಬ ಸಮಾಜವನ್ನು ಸೇರಿಸಲು ಸರ್ಕಾರ ಮುಂದಾಗುತ್ತಿದ್ದು, ಇದನ್ನು ತಡೆಯಲು ಸಮುದಾಯದ ಶಾಸಕರು ಸಜ್ಜಾಗಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸಲಹೆ ನೀಡಿದರು.

ಕುರುಬ ಸಮಾಜವನ್ನು ಎಸ್‌ಟಿಗೆ ಸೇರಿಸಿದಲ್ಲಿ ಕುರುಬ ಸಮಾಜದೊಂದಿಗೆ ಮುಂದಿನ ಚುನಾವಣೆಗಳಲ್ಲಿ ನಮ್ಮ ಸಮುದಾಯ ಸ್ಪರ್ಧಿಸಲು ಅಸಾಧ್ಯ ಎಂದ ಅವರು, ತಾಲೂಕಿನಾದ್ಯಂತ ನಿರ್ಮಾಣವಾಗುತ್ತಿರುವ ವಾಲ್ಮೀಕಿ ಭವನಗಳನ್ನು ಪೂರ್ಣಗೊಳಿಸುವಂತೆ ಶಾಸಕರಿಗೆ ಸಲಹೆ ನೀಡಿದರು.

ಎಚ್.ಡಿ.ಕೋಟೆ ತಹಸೀಲ್ದಾರ್ ಶ್ರೀನಿವಾಸ್, ಸರಗೂರು ತಹಸೀಲ್ದಾರ್ ಮೋಹನ ಕುಮಾರಿ, ಎಚ್.ಡಿ.ಕೋಟೆ ತಾಲೂಕು ನಾಯಕ ಸಮುದಾಯದ ಅಧ್ಯಕ್ಷ ಎಂ.ಸಿ.ದೊಡ್ಡನಾಯಕ, ಸರಗೂರು ತಾಲೂಕು ನಾಯಕ ಸಮಾಜದ ಅಧ್ಯಕ್ಷ ಪುರದಕಟ್ಟೆ ಬಸವರಾಜು, ಮಾಜಿ ಅಧ್ಯಕ್ಷ ಶಂಭುಲಿಂಗನಾಯಕ, ಮುಖಂಡರಾದ ಕ್ಯಾತನಹಳ್ಳಿ ನಾಗರಾಜ್, ಜಯಪ್ರಕಾಶ್ ಚಿಕ್ಕಣ್ಣ, ಚಾಕಳ್ಳಿ ಕೃಷ್ಣ, ಅಂಕನಾಯಕ, ನಿಂಗರಾಜು, ರಾಜಣ್ಣ, ಮರಿತಿಮ್ಮ ನಾಯಕ, ನಾಗನಾಯಕ, ಕಾಂತನಾಯಕ, ರಾಜನಾಯಕ, ದೇವನಾಯಕ, ಗಣೇಶ್, ಬೆಟ್ಟನಾಯಕ,ರವಿ, ಸೂರಿ, ನಿಂಗನಾಯಕ, ಚನ್ನನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net