

ಕೆ.ಆರ್.ಸಾಗರ: ಭಾನುವಾರ ಬೆಳಗೊಳ ಗ್ರಾಮದ ಬಳಿಯ ಇರುವ ವಿಶ್ವಮಂಗಳ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮಹಾ ಕುಂಭಾಭಿಷೇಕ ಹಾಗೂ ಮಹಾದ್ವಾರದ ಗೋಪುರ, ಪ್ರಾಕಾರಗಳ ಸ್ಥಾಪನೆ ಕಾರ್ಯಕ್ರಮ ಜರುಗಿತು.
ದೇವಸ್ಥಾನದ ಸಂಸ್ಥಾಪಕ ಆಚಾರ್ಯ ಲಕ್ಷ್ಮೀನಾರಾಯಣ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನೆರವೇರಿದವು. ಬೆಳಗ್ಗೆಯಿಂದಲೇ ಸುಮಾರು 200ಕ್ಕೂ ಹೆಚ್ಚು ವೈದಿಕರಿಂದ ಪೂಜಾ ವಿಧಿ ವಿಧಾನಗಳು ಪ್ರಾರಂಭಗೊಂಡು, ಸುಪ್ರಭಾತ, ನಿತ್ಯ ಹೋಮ, ದೇವತಾ ಹೋಮ, ಮಹಾಪೂರ್ಣಾವತಿ, ಕುಂಭ ಪ್ರದಕ್ಷಿಣೆ ಬಳಿಕ ಕುಂಭಾಭಿಷೇಕ ನಡೆಯಿತು.
ದೇವರಿಗೆ ವಿವಿಧ ರೀತಿಯ ನೈವೇದ್ಯ ಸೇವೆ ನಂತರ ಮಹಾಮಂಗಳಾರತಿ ಸಮರ್ಪಣೆ ಮಾಡಲಾಯಿತು.
ಶ್ರೀಕ್ಷೇತ್ರದಲ್ಲಿ ಲೋಕ ಕಲ್ಯಾಣಕ್ಕಾಗಿ ನಡೆಯುತ್ತಿರುವ ಸತತ 12 ವರ್ಷಗಳ ಕಾಲ ದೀರ್ಘ ಸತ್ರ ಮಹಾಯಾಗ ದೇಶದಲ್ಲಿ ಏಕೈಕ ಪುಣ್ಯಕ್ಷೇತ್ರ ಇದಾಗಿದ್ದು, 2022ರ ಮೇ 13ರಂದು ಫ್ರಾರಂಭವಾಗಿರುವ ಈ ಮಹಾಯಜ್ಞಕ್ಕೆ ಈಗ ಮೂರನೇ ವರ್ಷವಾಗಿದ್ದು, ಸುಮಾರು 164 ಹೋಮ ಕುಂಡಗಳಲ್ಲಿ ಶ್ರೀವಿಶ್ವ ಮಂಗಳ ವಿಶ್ವಕ್ಷೇಮ ವಿಶ್ವಶಾಂತಿ ಮಹಾಯಜ್ಞ ನಡೆಯುತ್ತಿದೆ.
ಸ್ಥಳೀಯರು ಸೇರಿದಂತೆ, ವಿವಿಧ ಜಿಲ್ಲೆಗಳು, ರಾಜ್ಯಗಳ ನೂರಾರು ಭಕ್ತರು ಆಗಮಿಸಿ ಶ್ರೀಲಕ್ಷ್ಮೀನರಸಿಂಹ ದೇವರ ದರ್ಶನ ಪಡೆದರು. ದೇವಾಲಯಕ್ಕೆ ಆಗಮಿಸಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.