ಸಂಕಷ್ಟ ಪರಿಹರಿಸುವ ಮಹಾಗಣಪತಿ

ಸಂಕಷ್ಟ ಪರಿಹರಿಸುವ ಮಹಾಗಣಪತಿ
Published on

ಹಿರಿಕರ ರವಿ ಸೋಮವಾರಪೇಟೆ
ಸಮೀಪದ ಹಾನಗಲ್ಲು ಗ್ರಾಮದಲ್ಲಿರುವ ಸಂಕಷ್ಟಹಾರ ಮಹಾಗಣಪತಿ ನಂಬಿದ ಭಕ್ತರ ಸಂಕಷ್ಟವನ್ನು ಪರಿಹರಿಸುತ್ತಾನೆ ಎಂಬ ನಂಬಿಕೆ ಭಕ್ತವಲ್ಲಿದೆ.
ತಾಕೇರಿ, ತಲ್ತಾರೆಶೆಟ್ಟಳಿ ಹಾಗು ಹಾನಗಲ್ಲು ಗ್ರಾಮಗಳ ರಸ್ತೆಗಳು ಒಂದೆಡೆ ಸೇರುವ ಜಾಗದಲ್ಲಿ ಒಂದೇ ದಿನದಲ್ಲಿ ನಿರ್ಮಾಣವಾಗಿರುವ ಮಹಾಗಣಪತಿ ದೇವಾಲಯ ವಿಶೇಷತೆ ಹೊಂದಿದೆ.

1986ರಲ್ಲಿ ಹಾನಗಲ್ಲು ಗ್ರಾಮದ ನಂಜಪ್ಪಗೌಡ ಅವರು ಅಧ್ಯಕ್ಷರಾಗಿದ್ದ ಸಂದರ್ಭ ದೇವಾಲಯಕ್ಕೆ ಭೂಮಿ ಪೂಜೆ ಮಾಡಲಾಯಿತು. 2005ರಲ್ಲಿ ಜೀರ್ಣೋದ್ಧಾರ ಮಾಡಲಾಗಿತ್ತು. 2014ರಲ್ಲಿ ಎಚ್.ಆರ್.ರಮೇಶ್ ಅಧ್ಯಕ್ಷರಾಗಿದ್ದಾಗ ಗ್ರಾಮಸ್ಥರ ಸಹಕಾರದೊಂದಿಗೆ ನೂತನ ದೇವಾಲಯ ಕಟ್ಟಿ ಸಂಕಷ್ಟಹರ ಮಹಾಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.

ಅಂದಿನಿಂದ ಇಂದಿನವರೆಗೂ ದೇವಾಲಯದ ಮುಂದೆ ಜನರು ತಮ್ಮ ವಾಹನ ನಿಲ್ಲಿಸಿ, ಕೈಮುಗಿದು ಮುಂದೆ ಹೋಗುತ್ತಾರೆ. ಶ್ರೀ ಗಣಪತಿ ಆಶೀರ್ವಾದದಿಂದ ನಮ್ಮ ಕೆಲಸ ಕಾರ್ಯಗಳು ನಿಗದಿತ ಸಮಯದಲ್ಲಿ ಆಗುತ್ತವೆ ಎಂಬ ನಂಬಿಕೆ ಜನರಲ್ಲಿದೆ. ಶಾಲಾ ಮಕ್ಕಳು ಪರೀಕ್ಷೆ ಬರೆಯುವಾಗ, ಫಲಿತಾಂಶ ನೋಡಲು ಗಣಪತಿಯ ಆಶೀರ್ವಾದ ಪಡೆದೇ ಹೋಗುತ್ತಾರೆ.

ಸುತ್ತಮುತ್ತಲ ಗ್ರಾಮದ ಕೃಷಿಕರು ಮಳೆಯನ್ನೇ ನಂಬಿ ಕೃಷಿ ಮಾಡುತ್ತಿದ್ದಾರೆ. ಸೋಮವಾರಪೇಟೆ ತಾಲೂಕಿನಲ್ಲಿ ಹೆಚ್ಚು ಅರೇಬಿಕಾ ಕಾಫಿ ಬೆಳೆಯಲಾಗುತ್ತದೆ. ಮಾರ್ಚ್ ಕೊನೆ ಅಥವಾ ಏಪ್ರಿಲ್ ತಿಂಗಳಲ್ಲಿ ಹೂಮಳೆ ಸುರಿದರೆ ಮಾತ್ರ ಕಾಫಿ ಫಸಲು ಸಾಧ್ಯ. ಮಳೆ ವಿಳಂಬವಾದರೆ ಫಸಲು ನಷ್ಟವಾಗುತ್ತದೆ.

ಇಂತಹ ಸಂದರ್ಭದಲ್ಲಿ ರೈತಾಪಿ ವರ್ಗ ಮಹಾಗಣಪತಿ ದೇವಾಲಯ ಹಾಗೂ ದುದ್ದಗಲ್ಲು ಮಲ್ಲಿಕಾರ್ಜುನ ದೇವಾಲಯಲ್ಲಿ ಸಾಮೂಹಿಕ ಪೂಜೆ ಸಲ್ಲಿಸಿದರೆ ಮಳೆ ಬೀಳುತ್ತದೆ ಎಂಬ ಪ್ರತೀತಿ ಇವತ್ತಿಗೂ ಇದೆ. ಮುಂದಿನ ವಾರದಲ್ಲಿ ಮಳೆ ಕರೆಯುವ ಪೂಜೆ ಸಲ್ಲಿಸಲು ಗ್ರಾಮಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ.
ಮದುವೆ, ಸಂತಾನ ಭಾಗ್ಯಕ್ಕೂ ಮಹಾಗಣಪತಿಯಲ್ಲಿ ಹರಕೆ ಹೊರುತ್ತಾರೆ. ಕಾಲಕ್ಕೆ ಸರಿಯಾಗಿ ಮಳೆ ಬೀಳುವುದು, ಉತ್ತಮ ಕೃಷಿ ಫಸಲು ಕೈಸೇರುವುದು ಗಣಪತಿಯ ಅಗೋಚರ ಶಕ್ತಿಯಿಂದ ಎಂಬ ನಂಬಿಕೆಯಿದೆ.

ಹಾನಗಲ್ಲು ಗ್ರಾಮದಲ್ಲಿ 50 ಕುಟುಂಬಗಳಿದ್ದು ಕೃಷಿಕರಾಗಿದ್ದಾರೆ. ಗ್ರಾಮದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯಬೇಕಾದರೂ ದೇವರ ಸನ್ನಿಧಿಯಲ್ಲಿ ಪೂಜೆ ನಡೆಸಿ, ಆಶೀರ್ವಾದ ಪಡೆದ ನಂತರವೇ ಕಾರ್ಯಕ್ರಮ ಮಾಡುತ್ತಾರೆ. ಪ್ರತಿವರ್ಷ ಮಹಾಪೂಜೆಯನ್ನು, ಗಣಪತಿ ಹೋಮವನ್ನು ಶ್ರದ್ಧಾಭಕ್ತಿಯಿಂದ ಮಾಡಲಾಗುತ್ತದೆ. ಸಂಕಷ್ಟಿಯಲ್ಲಿ ವಿಶೇಷ ಪೂಜೆ ಪೂಜೆ, ಅನ್ನದಾನ ಏರ್ಪಡಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net