

ಮೇಲುಕೋಟೆ: ಮೈಸೂರು ದೊರೆ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಅವರ ಜನ್ಮನಕ್ಷತ್ರದ ಶುಭದಿನವಾದ ಶನಿವಾರ ಮೂಲಮೂರ್ತಿ ಚೆಲ್ವ ತಿರುನಾರಾಯಣಸ್ವಾಮಿಗೆ ವೇದಮಂತ್ರಗಳೊಂದಿಗೆ ಮಹಾಭಿಷೇಕ ನೆರವೇರಿತು.
ಆಷಾಢ ಬಹುಳ ಉತ್ತರಾಷಾಢ ನಕ್ಷತ್ರಕೂಡಿದ ದಿವ್ಯಶುಭಗಳಿಗೆಯಲ್ಲಿ ಸ್ವಾಮಿಗೆ ಮಹಾಭಿಷೇಕ ನೆರವೇರಿಸಿ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು. ವೇದ ಮಂತ್ರಗಳೊಂದಿಗೆ ಹಾಲು, ಮೊಸರು, ಜೇನು, ಗಂಧ, ಎಳನೀರು ಕುಂಭಾಭಿಷೇಕದೊಂದಿಗೆ ನಡೆದ ಮಹಾಭಿಷೇಕದ ವೈಭವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಪತ್ನಿ ಧನಲಕ್ಷ್ಮಿ, ರಾಜ್ಯಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕಾಡೇನಹಳ್ಳಿ ನಾಗಣ್ಣಗೌಡ, ಹುಬ್ಬಳ್ಳಿ ಶಾಸಕಮಹೇಶ್ ಟೆಂಗಿನಕಾಯಿ, ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಸೇರಿದಂತೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
ಮಹಾಭಿಷೇಕ ನಡೆಯುತ್ತಿದ್ದ ವೇಳೆ ನಾಡಿನ ವಿವಿಧ ಭಾಗಗಳಿಂದ ಬಂದಿದ್ದ ಸಹಸ್ರಾರು ಭಕ್ತರಿಗೆ ನಿರಾಶೆಯಾಗದಂತೆ ದೇವರದರ್ಶನಕ್ಕೆ ವ್ಯವಸ್ಥೆಮಾಡಲಾಗಿತ್ತು.
ಮಹಾಭಿಷೇಕದ ನಂತರ ಸಂಜೆ ಪಾಂತಾಳಾಂಕಣದಲ್ಲಿರುವ ಕೃಷ್ಣರಾಜ ಒಡೆಯರ್ ಮತ್ತು ರಾಣಿಯರ ಭಕ್ತವಿಗ್ರಹಕ್ಕೆ ಚೆಲುವನಾರಾಯಣಸ್ವಾಮಿಯ ಪಾದುಕೆ ಮತ್ತು ಮಾಲೆಯನ್ನು ಭಕ್ತಿಪೂರ್ವಕವಾಗಿ ಅರ್ಪಿಸಲಾಯಿತು. ನಂತರ ವಿಶ್ವಕ್ಸೇನರ ಉತ್ಸವ ನಡೆದು ಚೆಲುವನಾರಾಯಣಸ್ವಾಮಿಗೆ ಅಮ್ಮನವರಸನ್ನಿಧಿಯ ಬಳಿ ಕಲ್ಯಾಣೋತ್ಸವ ನೆರವೇರಿತು. ಸಮನ್ಮಾಲೆ, ಲಾಜಹೋಮದೊಂದಿಗೆ ವೈಭವಯುತವಾಗಿ ಚೆಲುವನಾರಾಯಣಸ್ವಾಮಿ-ಕಲ್ಯಾಣನಾಯಕಿಗೆ ಕಲ್ಯಾಣೋತ್ಸವ ನೆರವೇರಿತು. ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ವರ್ಧಂತಿಯಿಂದ ಆರಂಭವಾಗಿ ರೋಹಿಣಿಯವರೆಗೆ ಹತ್ತು ದಿನಗಳ ಬ್ರಹ್ಮೋತ್ಸವ ನಡೆಯುತ್ತದೆ.
ಇದೇ ವೇಳೆ ಮೇಲುಕೋಟೆ ಚೆಲುವನಾರಾಯಣಸ್ವಾಮಿಗೆ ಮೈಸೂರು ಅರಸರ ಪೈಕಿ ಮಹಾರಾಜ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ನೀಡಿದ ಕೊಡುಗೆಯನ್ನು ಸ್ಮರಿಸಿದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಮತ್ತು ವಿದ್ವಾನ್ ಆನಂದಾಳ್ವಾರ್ ಮಹಾರಾಜ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಹೆಸರಲ್ಲೇ ಆಷಾಢಮಾಸದಲ್ಲಿ ಬ್ರಹ್ಮೋತ್ಸವ ನಡೆಯುತ್ತದೆ ಬ್ರಹ್ಮೋತ್ಸವದ ನಾಲ್ಕನೇ ದಿನ ಅಲಂಕಾರಕ್ಕಾಗಿ ಅಪೂರ್ವ ವಜ್ರಖಚಿತ ಕೃಷ್ಣರಾಜಮುಡಿ ಕಿರೀಟ ಮತ್ತು ರಾಜಲಾಂಛನ ಗಂಡಬೇರುಂಡ ಪದಕ ಇತರ ಆಭರಣಗಳನ್ನು ನೀಡಿದ್ದಾರೆ ಎಂದು ಸ್ಮರಿಸಿದರು.
ಕಲ್ಯಾಣಿಯ ಸಮುಚ್ಚಯವನ್ನು ಜೀರ್ಣೋದ್ಧಾರ ಮಾಡಿ ಭೂಮಿಯ ಪ್ರಾತಿನಿಧ್ಯವನ್ನು ಬಿಂಬಿಸುವ ಅತ್ಯಪೂರ್ವ 16ಕಂಬಗಳ ಭವ್ಯಸ್ಮಾರ ಭುವನೇಶ್ವರಿ ಮಂಟಪವನ್ನು ನಿರ್ಮಿಸಿ, ಕಲ್ಯಾಣಿಯ ಸಮುಚ್ಛಯಕ್ಕೆ ವಿಶೇಷ ಆಕರ್ಷಣೆ ತಂದುಕೊಟ್ಟಿದ್ದಾರೆ. ಆಷಾಢ ಜಾತ್ರೆಗೆ ರಥಸಹ ಕೊಡುಗೆ ನೀಡಿ ನೆಲೆಗಾಗಿ ಮಂಟಪ ನಿರ್ಮಿಸಲಾಗಿತ್ತು. ಇದರ ಜತೆಗೆ ಚೆಲುವನಾರಾಯಣನಿಗೆ ಹಲವಾರು ಮುತ್ತಿನ ಆಭರಣಗಳನ್ನು ನೀಡಿದ್ದಾರೆ. ಯೋಗನರಸಿಂಹಸ್ವಾಮಿಗೆ ಬಂಗಾರದ ಕಿರೀಟವನ್ನು ಅರ್ಪಿಸಿದ್ದಾರೆ ಒಡೆಯರ್ ಮೇಲುಕೋಟೆಯಲ್ಲಿ ಹಲವು ಕೊಳಗಳು ಮಂಟಪಗಳು ಹಾಗೂ ತೋಟಗಳನ್ನು ನಿರ್ಮಾಣಮಾಡಿ ದೇವಾಲಯ ನಿರ್ವಹಣೆಗೆ ನೂರಾರು ಎಕರೆ ಜಮೀನನ್ನು ದತ್ತಿಬಿಟ್ಟಿದ್ದರು. ಇಂತಹ ಸೇವೆಗಾಗಿಯೇ ದೇವಾಲಯದಲ್ಲಿರುವ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಭಕ್ತವಿಗ್ರಹಕ್ಕೆ ಪ್ರತಿದಿನ ಎರಡೂ ವೇಳೆ ವಿಶೇಷಪೂಜೆ ಗೌರ ಅರ್ಪಿಸುವ ಮೂಲಕ ದಿನ ನಿತ್ಯ ನೆನಪಿಸಿಕೊಳ್ಳುತ್ತೇವೆ ಎಂದರು.