

ಶ್ರವಣಬೆಳಗೊಳ: ದಶಲಕ್ಷಣ ಮಹಾಪರ್ವದ ಕಲ್ಪದ್ರುಮ ಮಹಾಪೂಜೆಯಲ್ಲಿ 24 ತೀರ್ಥಂಕರರಿಗೆ ಹಾಗೂ 1008 ಸಹಸ್ರಕೂಟ ಜಿನಬಿಂಬಗಳಿಗೆ ಏಕಕಾಲದಲ್ಲಿ ಅಭಿಷೇಕ ನಡೆಯುವುದು ಶ್ರವಣಬೆಳಗೊಳದಲ್ಲಿ ಮಾತ್ರ. ಇದನ್ನು 2002ರಲ್ಲಿ ನಮ್ಮ ಗುರುಗಳಾದ ಕರ್ಮಯೋಗಿ ಚಾರುಶ್ರೀ ಜಾರಿಗೆ ತಂದರು ಎಂದುಶ್ರೀ ದಿಗಂಬರ ಜೈನ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಆಚಾರ್ಯ ಶ್ರೀ ಸುವಿಧಿಸಾಗರ ಮಹಾರಾಜರು, ಆಚಾರ್ಯ ಶ್ರೀ ವರ್ಧಮಾನಸಾಗರ ಮಹಾರಾಜರು ಹಾಗೂ ಸಂಘಸ್ಥ ತ್ಯಾಗಿಗಳ ಸಾನ್ನಿಧ್ಯದಲ್ಲಿ ದಶಲಕ್ಷಣ ಮಹಾಪರ್ವದ ಕ್ಷಮಾವಾಣಿ ಹಾಗೂ ಅನಂತನೋಂಪಿ ಅಂಗವಾಗಿ ಸೋಮವಾರ ಶ್ರವಣಬೆಳಗೊಳದ ಚಾವುಂಡರಾಯ ಸಭಾಂಗಣದಲ್ಲಿ ಆಯೋಜಿಸಿದ್ದ ಸಹಸ್ರಕೂಟ ಜಿನಬಿಂಬಕ್ಕೆ ಮಹಾಭಿಷೇಕ ನೆರವೇರಿಸಿ ಆಶೀರ್ವಚನ ನೀಡಿದರು.
ದಶ ಧರ್ಮಗಳು ಕ್ರೋಧವನ್ನು ಮಾಡದೇ ಸರ್ವ ಜೀವಿಗಳಲ್ಲಿ ಕ್ಷಮೆಯನ್ನು ನೀಡುವುದೇ ಕ್ಷಮಾಧರ್ಮ, ಅಹಂಕಾರ ತ್ಯಜಿಸುವುದು ಮಾರ್ಧವಧರ್ಮ, ಮನ ವಚನ ಕಾಯಗಳಿಂದ ಮೋಸ ಮಾಡದಿರುವುದೇ ಆರ್ಜವಧರ್ಮ, ಅತಿಯಾಸೆಯನ್ನು ತ್ಯಜಿಸಿ ಪ್ರವೃತ್ತಿ ಬೆಳೆಸಿಕೊಳ್ಳುವುದೇ ಶೌಚ ಧರ್ಮ, ಹಿತಮಿತ ಪ್ರಿಯ ಸತ್ಯ ವಚನಗಳನ್ನಾಡುವುದು ಸತ್ಯಧರ್ಮ. ಇಂದ್ರಿಯ ಹಾಗೂ ಮನವನ್ನು ವಶದಲ್ಲಿ ಇಟ್ಟುಕೊಳ್ಳುವುದು ಸಂಯಮಧರ್ಮ, ಕರ್ಮಗಳ ನಿರ್ಜರೆಗಾಗಿ ಆತ್ಮನಲ್ಲಿ ಲೀನವಾಗುವುದು ತಪಧರ್ಮ, ಅಂತರಂಗ ಕಷಾಯಗಳನ್ನು ತ್ಯಜಿಸುವುದು ಮತ್ತು ನಾಲ್ಕು ಪ್ರಕಾರದ ದಾನಗಳನ್ನು ಮಾಡುವುದು ತ್ಯಾಗಧರ್ಮ, ಪರಿಗ್ರಹದ ತ್ಯಾಗ ಮಾಡುವುದೇ ಆಕಿಂಚನ್ಯಧರ್ಮ, ಇಂದ್ರಿಯಗಳ ವಿಜಯವನ್ನು ಸಾಧಿಸುವುದು ಬ್ರಹ್ಮಚರ್ಯಧರ್ಮ ಎಂದು ಹೇಳಿದರು.
ದಶಲಕ್ಷಣ ಮಹಾಪರ್ವದ ಕಲ್ಪದ್ರುಮ ಮಹಾಪೂಜೆಯ ಅಂಗವಾಗಿ ಭಂಡಾರಿ ಹುಳ್ಳ ನಿರ್ಮಿತ ಭವ್ಯ ಚೂಡಾಮಣಿ ಬಸದಿಯಲ್ಲಿ ಪ್ರತಿನಿತ್ಯ 24 ತೀರ್ಥಂಕರರಿಗೆ ಪೂಜಾ ವಿಧಿ-ವಿಧಾನ ಆರಂಭಗೊಂಡು, ಜಲ, ಎಳನೀರು, ಕಬ್ಬಿನಹಾಲು, ಕ್ಷೀರ, ಅರಿಶಿಣ, ರಕ್ತಚಂದನ, ಕಷಾಯ, ಅಷ್ಟಗಂಧ, ಪುಷ್ಪ್ಪವೃಷ್ಟಿಯೊಂದಿಗೆ ಅರ್ಘ್ಯ ಸಮರ್ಪಣೆ ಹಾಗೂ ಶಾಂತಿದಾರ ನೆರವೇರಿಸಲಾಯಿತು.
ನಂತರ ಸಮವಸರಣದಲ್ಲಿ ಜಿನವಾಣಿ ಪೂಜೆ, ತತ್ವರ್ಥಸೂತ್ರ ಪಠಣ ಮಾಡಲಾಯಿತು. ಸಂಜೆ ಆರತಿ ಕಾರ್ಯಕ್ರಮ, ರಸಪ್ರಶ್ನೆ ಹಾಗೂ ಮಹಾ ಮಂಗಳಾರತಿಯೊಂದಿಗೆ ಶ್ರೀಕ್ಷೇತ್ರದಲ್ಲಿ ಚಾತುರ್ಮಾಸ್ಯ ನಿರತ ತ್ಯಾಗಿಗಳು ಮತ್ತು ಪೂಜ್ಯ ಚಾರುಶ್ರೀಗಳವರಿಂದ ಮಂಗಳ ಪ್ರವಚನ ನೆರವೇರಿದವು. ಪೂಜಾ ವಿಧಿ-ವಿಧಾನಗಳ ನೇತೃತ್ವವನ್ನು ನಂದಕುಮಾರ್ ಶಾಸ್ತ್ರಿ ಹಾಗೂ ಪ್ರತಿಷ್ಠಾಚಾರ್ಯ ಜಿನೇಶ್ ಕುಮಾರ್ ವಹಿಸಿದ್ದರು.
.