ಮಹಾಬಲೇಶ್ವರ ಮಹಾರಥೋತ್ಸವ ಸಂಭ್ರಮ

28gkn1-b- teru
Published on

ಗೋಕರ್ಣ: ಇಲ್ಲಿನ ಪುರಾಣ ಖ್ಯಾತ ಆತ್ಮಲಿಂಗ ಸನ್ನಿಧಿ ಶ್ರೀ ಮಹಾಬಲೇಶ್ವರ ಮಂದಿರದ ವತಿಯಿಂದ ನಡೆದ ಮಹಾಶಿವರಾತ್ರಿ ಆಗಮೋತ್ಸವದ ಪ್ರಧಾನ ಕಾರ್ಯಕ್ರಮವಾದ ಶ್ರೀ ಮಹಾಬಲೇಶ್ವರ ಮಹಾರಥೋತ್ಸವ ಪ್ರಧಾನ ಅರ್ಚಕ ವೇ. ಅಮೃತೇಶ ಹಿರೇ ನೇತೃತ್ವದಲ್ಲಿ ಶುಕ್ರವಾರ ಮಧ್ಯಾಹ್ನ ಅಪಾರ ಭಕ್ತರ ಜೈಕಾರದ ನಡುವೆ ವಿಜೃಂಭಣೆಯಿಂದ ಸಂಪನ್ನವಾಯಿತು.

ಬೆಳಗ್ಗೆಯಿಂದಲೇ ಮಂದಿರದ ಯಾಗಶಾಲೆಯಲ್ಲಿ ಪ್ರಧಾನ ಅರ್ಚಕರು ಮತ್ತು ಉಪಾಧಿವಂತ ವೈದಿಕರ ಸಹಕಾರದಲ್ಲಿ ವಿವಿಧ ಧಾರ್ವಿುಕ ಕಾರ್ಯ ನಡೆಸಲಾಯಿತು. ಮಧ್ಯಾಹ್ನ ಎರಡು ಗಂಟೆಯಿಂದ ಭೂತಬಲಿ ನಡೆದು, ಆ ತರುವಾಯ ಶ್ರೀ ದೇವರ ಉತ್ಸವವು ವಿಶೇಷ ಮಂಗಳವಾದ್ಯದೊಂದಿಗೆ ರಥದ ಮನೆಗೆ ಆಗಮಿಸಿ ಶ್ರೀ ದೇವರ ಉತ್ಸವಮೂರ್ತಿ ಮಹಾರಥದಲ್ಲಿ ವಿರಾಜಮಾನವಾಯಿತು.

ಕ್ಷೇತ್ರ ಪದ್ಧತಿಯಂತೆ ವಿವಿಧ ಅರ್ಚಕರು, ಉಪಾಧಿವಂತರು, ವೈದಿಕರು ಮತ್ತು ಮಂದಿರಕ್ಕೆ ಸಂಬಂಧಿಸಿದ ಪಂಚ ಪ್ರಮುಖ ಮನೆತನದವರಿಂದ ಸಾಂಪ್ರದಾಯಿಕ ರಥ ಕಾಣಿಕೆಯನ್ನು ಶ್ರೀ ದೇವರಿಗೆ ಸಮರ್ಪಿಸಲಾಯಿತು. ಈ ವೇಳೆ ಇಲ್ಲಿನ ಶ್ರೀ ಕೈವಲ್ಯ(ಕವಳೆ) ಮಠಾಧೀಶರಾದ ಶ್ರೀ ಶಿವಾನಂದ ಸರಸ್ವತಿ ಮಹಾಸ್ವಾಮೀಜಿ ಅವರು ರಥ ಕಾಣಿಕೆ ಅರ್ಪಿಸಿದರು .ನಂತರ ಪ್ರಾರಂಭವಾದ ಮಹಾರಥೋತ್ಸವ ರಥದ ಮನೆಯಿಂದ ಶ್ರೀ ಲಕ್ಷ್ಮೀವೆಂಕಟೇಶ ಮಂದಿರದ ತನಕ ಸಾಗಿ ಒಂದು ಗಂಟೆಯೊಳಗೆ ತಿರುಗಿ ಸ್ವಸ್ಥಾನಕ್ಕೆ ಆಗಮಿಸಿತು.

ಮಹಾರಥೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರದ ರಥಬೀದಿ ಸೇರಿ ಎರಡು ಕಿ.ಮಿ ಉದ್ದದ ಮುಖ್ಯ ರಸ್ತೆಯಲ್ಲಿ ಅಪಾರ ಭಕ್ತ ದಟ್ಟಣೆ ಉಂಟಾಯಿತು. ಎಸ್​ಪಿ ಎಂ. ನಾರಾಯಣ, ಪಿಎಸ್​ಐ ಖಾದರ್ ಬಾಷಾ, ಪಿಎಸ್​ಐ ಶಶಿಧರ ಮತ್ತು ಸ್ಥಳೀಯ ಸಿಬ್ಬಂದಿ ಬಂದೋಬಸ್ತ್ ನೋಡಿಕೊಂಡರು.

ಮಹಾರಥೋತ್ಸವದಲ್ಲಿ ಮಂದಿರ ಸಮಿತಿ ಸದಸ್ಯರಾದ ವೇ. ಸುಬ್ರಹ್ಮಣ್ಯ ಅಡಿ, ವೇ. ಪರಮೇಶ್ವರ ಪ್ರಸಾದ, ಮಹೇಶ ಹಿರೇಗಂಗೆ ಹಾಜರಿದ್ದರು. ಸ್ಥಳೀಯ ವಿವಿಧ ಸಂಘಟನೆಗಳ ವತಿಯಿಂದ ಮಹಾರಥೋತ್ಸವದಲ್ಲಿ ಭಾಗವಹಿಸಿದ ಭಕ್ತರಿಗೆ ತಂಪು ಪಾನೀಯ ವಿತರಿಸಲಾಯಿತು. ಮಾ.1ರಂದು ನಡೆಯುವ ಅವಭೃತ ಉತ್ಸವ ಮತ್ತು ಆತ್ಮಲಿಂಗಕ್ಕೆ ಅಂಕುರ ಸಮರ್ಪಣೆಯೊಂದಿಗೆ ಒಂಭತ್ತು ದಿನಗಳ ಮಹಾಶಿವರಾತ್ರಿ ಉತ್ಸವ ಮಂಗಳವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net