ಸಿದ್ಧಾರೂಢ ನೋಡುವ ಕಾತರದಲ್ಲಿ ಪುನೀತ್...; ಸಾಧು ಕೋಕಿಲ ನಿರ್ದೇಶನದ ಭಕ್ತಿ ಪ್ರಧಾನ ಸಿನಿಮಾ

Punith
Published on

ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೂ, ಡಾ.ರಾಜಕುಮಾರ್ ಕುಟುಂಬಕ್ಕೂ ಅವಿನಾಭಾವ ನಂಟು. ಹುಬ್ಬಳ್ಳಿ ಸುತ್ತಮುತ್ತ ಬಂದರೆ, ತಪ್ಪದೆ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದು ಬರುವುದು ಕುಟುಂಬದ ವಾಡಿಕೆ. ಇದೀಗ ಸಾಧು ಕೋಕಿಲ ನಿರ್ದೇಶನ ಮಾಡಿರುವ ‘ಮಹಾಯೋಗಿ ಸಿದ್ಧಾರೂಢ’ ಟ್ರೇಲರ್​ನ್ನು ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದಾರೆ. ಟ್ರೇಲರ್ ಬಿಡುಗಡೆ ಮಾಡುವ ಅವಕಾಶ ಸಿಕ್ಕಿದ್ದು ತಮ್ಮ ಪುಣ್ಯ ಎಂದಿದ್ದಾರೆ.

‘ನಮ್ಮ ಮನೆಗೂ, ಸಿದ್ಧಾರೂಢ ಮಠಕ್ಕೂ ಅವಿನಾಭಾವ ಸಂಬಧವಿದೆ. ನಮ್ಮ ಅಜ್ಜಿ ಕೆಲವು ದಿನಗಳ ಕಾಲ ಮಠದಲ್ಲೇ ಇದ್ದರು ಎಂದು ಅಪ್ಪಾಜಿ ಹೇಳುತ್ತಿದ್ದರು. ಈ ಚಿತ್ರದ ಟ್ರೇಲರ್ ಬಿಡುಗಡೆಗೆ ಬರಬೇಕೆಂದು ಸಾಧು ಕೋಕಿಲ ಅವರು ಕರೆದಾಗ ಬಹಳ ಸಂತೋಷವಾಯಿತು. ಟ್ರೇಲರ್ ತುಂಬಾ ಚೆನ್ನಾಗಿದೆ. ಸಿನಿಮಾ ನೋಡಲು ನಾನು ಕಾತುರನಾಗಿದ್ದೇನೆ’ ಎಂದರು ಪುನೀತ್.

ಇನ್ನು, ಇದೇ ಮೊದಲ ಬಾರಿಗೆ ಭಕ್ತಪ್ರಧಾನ ಚಿತ್ರ ನಿರ್ದೇಶನ ಮಾಡಿರುವ ಸಾಧು ಕೋಕಿಲ, ‘ಶರಣ ಶ್ರೇಷ್ಠರಾದ ಸಿದ್ಧಾರೂಢರ ಜೀವನಾಧಾರಿತ ಚಿತ್ರ ನಿರ್ದೇಶನ ಮಾಡಿದ್ದು ನನ್ನ ಪುಣ್ಯ. ಮಂಟೂರಿನ ನನ್ನ ಗುರುಗಳು ಕರೆದು ಈ ಚಿತ್ರ ಮಾಡಿಕೊಡಬೇಕೆಂದು ಕೇಳಿದರು. ಎಲ್ಲರಿಗೂ ಸಾಧು ಕೋಕಿಲ ಇಂತಹ ಚಿತ್ರ ಮಾಡಿದ್ದಾರಾ? ಎಂದು ಆಶ್ಚರ್ಯವಾಗಬಹುದು. ನನಗೂ ಮೊದಲು ಹಾಗೆಯೇ ಅನಿಸಿತು. ಈ ಚಿತ್ರದಲ್ಲಿ ಸಿದ್ಧಾರೂಢರ ಮಹಿಮೆಗಳನ್ನು ತೋರಿಸಲಾಗಿದೆ. ಮಂಟೂರು, ಹೖದರಾಬಾದ್, ಕಾಶ್ಮೀರ, ಸಕಲೇಶಪುರ ಮುಂತಾದ ಕಡೆ ಚಿತಿ್ರೕಕರಣ ನಡೆಸಲಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಈ ಚಿತ್ರ ನಿರ್ದೇಶನಕ್ಕೆ, ನನಗೆ ನನ್ನ ಮಗ ಸುರಾಗ್ ಸಹಾಯ ಮಾಡಿದ್ದಾನೆ. ನ.9ರಂದು ಮಂಟೂರಿನಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ. 55 ನಿವಿಷಗಳ ಅವಧಿಯ ಈ ಚಿತ್ರವು ಒಂದೇ ಚಿತ್ರಮಂದಿರದಲ್ಲಿ ನಿರಂತರವಾಗಿ ಪ್ರದರ್ಶನ ಕಾಣುತ್ತಿರುತ್ತದೆ’ ಎನ್ನುತ್ತಾರೆ ಸಾಧು. ಈ ಚಿತ್ರಕ್ಕೆ ಅವರದ್ದು ಬರೀ ನಿರ್ದೇಶನವಷ್ಟೇ ಅಲ್ಲ, ಸಂಗೀತ ನಿರ್ದೇಶನದ ಜವಾಬ್ದಾರಿಯೂ ಅವರದ್ದೇ. ಮುಧೋಳದ ಮಂಟೂರಿ ಶ್ರೀ ಸದಾನಂದ ಮಹಾಸ್ವಾಮಿಗಳು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ತೀರ್ಥೇಶ್, ಅರವಿಂದ್ ಕುಪ್ಳೀಕರ್ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಜೈ ಆನಂದ್ ಅವರ ಛಾಯಾಗ್ರಹಣವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net