ಆಸೆಗಳ ಮಾಯಾ ಬಂಧನವೇ ಮಾನವ ಭ್ರಾಂತಿಗೆ ಮೂಲ

ಚಿಂತಾಮಣಿ ತಾಲೂಕಿನ ಕೈವಾರದ ಕಾಲಜ್ಞಾನಿ ಶ್ರೀ ಯೋಗಿ ನಾರೇಯಣ ತಾತಯ್ಯನವರ 189ನೇ ಜೀವಸಮಾಧಿ ಪರ್ವ ಆರಾಧನೋತ್ಸವದಲ್ಲಿ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಅವರು ಲೆಕ್ಕಪತ್ರಗಳನ್ನು ಅರ್ಪಿಸಿದರು.
9cmy6
ಚಿಂತಾಮಣಿ ತಾಲೂಕಿನ ಕೈವಾರದ ಕಾಲಜ್ಞಾನಿ ಶ್ರೀ ಯೋಗಿ ನಾರೇಯಣ ತಾತಯ್ಯನವರ 189ನೇ ಜೀವಸಮಾಧಿ ಪರ್ವ ಆರಾಧನೋತ್ಸವದಲ್ಲಿ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಅವರು ಲೆಕ್ಕಪತ್ರಗಳನ್ನು ಅರ್ಪಿಸಿದರು.
Published on


ಕೈವಾರ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಅಭಿಮತ- ತಾತಯ್ಯನವರ 189ನೇ ಆರಾಧನಾ ಮಹೋತ್ಸವ

ಚಿಂತಾಮಣಿ: ಆಸೆಗಳ ಮಾಯಾ ಬಂಧನವೇ ಮಾನವನ ಭ್ರಾಂತಿಗಳಿಗೆ ಮೂಲ. ಈ ಮಾಯೆಯ ಒಂದು ಬಯಕೆ ಈಡೇರುತ್ತಿದ್ದಂತೆ ಮತ್ತೊಂದು ಬಯಕೆ ಹುಟ್ಟಿಕೊಳ್ಳುತ್ತದೆ. ಈ ಬಯಕೆ, ಆಸೆಗಳಿಗೆ ಕೊನೆಯಿಲ್ಲ. ಒಂದಾದ ಮೇಲೊಂದರಂತೆ ಬರುತ್ತಿರುತ್ತವೆ. ಆದರೆ, ಯೋಗೀಶ್ವರನು ಮಾಯೆಗಳಿಂದ ನಿರ್ಲಿಪ್ತನಾಗಿರುತ್ತಾನೆ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಅಭಿಪ್ರಾಯಪಟ್ಟರು.
ತಾಲೂಕಿನ ಶ್ರೀಕ್ಷೇತ್ರ, ಕೈವಾರದ ಶ್ರೀ ಯೋಗಿನಾರೇಯಣ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಲಜ್ಞಾನಿ ಶ್ರೀ ಯೋಗಿ ನಾರೇಯಣ ತಾತಯ್ಯನವರ 189ನೇ ಜೀವಸಮಾಧಿ ಪ್ರವೇಶ ಪರ್ವ ಆರಾಧನಾ ಮಹೋತ್ಸವದಲ್ಲಿ ಮಾತನಾಡಿದ ಅವರು, ಆಸೆಗಳನ್ನು ಪೂರೈಸಬೇಕೆಂಬ ಬಯಕೆಯು ಮನಸ್ಸಿನಲ್ಲಿ ಯಾವಾಗಲೂ ಜಾಗೃತವಾಗಿರುತ್ತದೆ. ಇವುಗಳನ್ನು ಪೂರೈಸುವುದರಲ್ಲೇ ಜೀವನದ ಅಂತ್ಯ ಕಾಣಬೇಕಾಗುತ್ತದೆ. ಆಸೆಗಳನ್ನು ಪೂರೈಸಿಕೊಳ್ಳುವುದರಲ್ಲಿಯೇ ತೃಪ್ತನಾಗುತ್ತ, ಬದುಕಿನ ಗುರಿಯಾದ ಮೋಕ್ಷ ಸಂಪಾದನೆಯ ಕಡೆಗೆ ಗಮನ ಹೋಗುವುದಿಲ್ಲ. ಕೊರತೆಗಳು, ಬಯಕೆಗಳು ಮಾನವನ ಮನಸ್ಸಿನಲ್ಲಿ ಉತ್ಪತ್ತಿಯಾಗುತ್ತವೆ. ಮನುಷ್ಯ ಮಾಯೆಗೆ ಕಟ್ಟುಬಿದ್ದು ಅಜ್ಞಾನಿಯಾಗುತ್ತದೆ. ಮಾನವನ ಮನಸ್ಸು ಆಸೆಯೆಂಬ ಹಗ್ಗದಿಂದ ಬಂಧಿತವಾಗಿದೆ. ತೃಪ್ತವಾದ ಮನಸ್ಸನ್ನು ಹೊಂದುವುದು ಸಾಧ್ಯವಾಗುವುದಿಲ್ಲ. ಇದು ಸಾಮಾನ್ಯರ ಸ್ಥಿತಿ. ಆದರೆ, ಯೋಗೀಶ್ವರನು ಮಾಯೆಯಿಂದ ಬರುವ ಆಸೆಗಳನ್ನೆಲ್ಲವನ್ನೂ ಮನಸ್ಸೆಂಬ ಕತ್ತಿಯಿಂದ ಕಡಿದುಹಾಕಿ ನಿರ್ಲಿಪ್ತನಾಗಿರುತ್ತಾನೆ. ಯೋಗಿಯಲ್ಲಿ ಯಾವುದೇ ಆಸೆಗಳಿರುವುದಿಲ್ಲ. ಈ ಕಾರಣದಿಂದ ಇದೇ ನನ್ನ ಕಟ್ಟಕಡೆಯ ಜನ್ಮ, ಯೋಗಸಾಧನೆಯ ಮೂಲಕ ಸದ್ಗುರುವಿನಲ್ಲಿ ಐಕ್ಯವಾಗಿದ್ದೇನೆ ಎನ್ನುತ್ತಿದ್ದಾರೆ ತಾತಯ್ಯನವರು ಎಂದು ಗುರುಸಂದೇಶವನ್ನು ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಅರುಹಿದರು.

ಪರಮಾತ್ಮನಲ್ಲಿ ಐಕ್ಯವಾಗುವುದೇ ಜೀವಸಮಾಧಿ
ಭಕ್ತಿಯಿಂದ ಆರಂಭಗೊಳ್ಳುವ ಯೋಗದ ಪಯಣ ಕೊನೆಗೆ ಪರಮಾತ್ಮನಲ್ಲಿ ಐಕ್ಯವಾಗುವುದೇ ಜೀವಸಮಾಧಿ. ದೇಹದ ಬಗ್ಗೆ ಅಭಿಮಾನ ಬೆಳೆಸಿಕೊಂಡ ಅಜ್ಞಾನಿಗಳನ್ನು ಮಾತ್ರ ಕರ್ಮಫಲಗಳು ಕಟ್ಟಿಹಾಕುತ್ತವೆ. ಆಮೂಲಕ ಮತ್ತೇಮತ್ತೆ ಹುಟ್ಟು-ಸಾವುಗಳ ಚಕ್ರದಲ್ಲಿ ಸಿಕ್ಕಿಬೀಳಬೇಕಾಗುತ್ತದೆ. ಆದರೆ, ಯೋಗೀಶ್ವರನು ಮಾತ್ರ ದೇಹವು ನಾನಲ್ಲ, ಇಂದ್ರಿಯಗಳು ನಾನಲ್ಲ, ಶುದ್ಧ ಚೇತನ ಸ್ವರೂಪವಾದ ಪರಬ್ರಹ್ಮವೇ ನಾನು ಎಂದು ಅರಿತುಕೊಳ್ಳುತ್ತಾನೆ. ಇಂತಹ ಯೋಗಿಯು ದೇಹ ತ್ಯಾಗದ ಬಳಿಕ ಪರಬ್ರಹ್ಮ ತತ್ವದಲ್ಲಿ ಐಕ್ಯನಾಗುತ್ತಾನೆ. ಹಾಗಾಗಿ ನಾನು ಮತ್ತೆ ಈ ಭೂಮಂಡಲದಲ್ಲಿ ಹುಟ್ಟುವುದಿಲ್ಲ. ಸದ್ಗುರುವಾದ ಪರಮಾತ್ಮನಲ್ಲಿ ಐಕ್ಯವಾಗಿದ್ದೇನೆ. ನನ್ನಲ್ಲಿ ಯಾವುದೇ ಆಸೆಗಳಿಲ್ಲ. ಆಸೆಗಳೆಲ್ಲ ಇಂಗಿಹೋದ ನಮಗೆ ಇದೇ ಕಡೇ ಜನ್ಮ ಎಂದು ಯೋಗಿ ಸ್ವರೂಪಿ ಕೈವಾರದ ತಾತಯ್ಯನವರು ನುಡಿದಿದ್ದಾರೆ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಹೇಳಿದರು.

ಸಾಮೂಹಿಕ ನಾಮ ಸಂಕೀರ್ತನೆ
ಆರಾಧನಾ ಮಹೋತ್ಸವದ ಅಂಗವಾಗಿ ಸದ್ಗುರು ಯೋಗಿ ನಾರೇಯಣ ತಾತಯ್ಯನವರ ಮೂಲ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸದ್ಗುರು ಯೋಗಿ ನಾರೇಯಣ ತಾತಯ್ಯನವರಿಗೆ ವಿಶೇಷ ಅಭಿಷೇಕ, ಅಷ್ಟಾವಧಾನ ಸೇವೆ, ಮಂಗಳಾರತಿ ನೆರವೇರಿಸಲಾಯಿತು. ಸಾಮೂಹಿಕ ನಾಮ ಸಂಕೀರ್ತನೆ ನಡೆಯಿತು. ನಂತರ ದೇವಾಲಯದಿಂದ ಅಲಂಕೃತ ಪಲ್ಲಕ್ಕಿಯಲ್ಲಿ ತಾತಯ್ಯನವರನ್ನು ಸಭಾಂಗಣಕ್ಕೆ ಭಜನಾ ಗಾಯನದೊಂದಿಗೆ ಕರೆತರಲಾಯಿತು. ಸದ್ಗುರುಗಳಿಗೆ ಷೋಡಶೋಪಚಾರ ಪೂಜಾ ಕೈಂಕರ್ಯ ನೆರವೇರಿಸಿ ಕಾರ್ಯಕ್ರಮ ಪ್ರಾರಂಭಿಸಲಾಯಿತು.

ತಾಳೆಗರಿಗಳಿಗೆ ವಿಶೇಷ ಪೂಜೆ
ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರು ರಚಿಸಿರುವ ತಾಳೆಗರಿಗಳನ್ನು ಉತ್ಸವದಲ್ಲಿ ಸಭಾಂಗಣದ ವೇದಿಕೆಗೆ ತಂದು ಪೀಠದಲ್ಲಿ ಇರಿಸಲಾಯಿತು. ತಾತಯ್ಯನವರು ನೀಡಿರುವ ಜ್ಞಾನ ಸಂಪತ್ತಾದ ತಾಳೆಗರಿಗಳನ್ನು ಪೂಜಿಸಲಾಯಿತು. ಸದ್ಗುರು ತಾತಯ್ಯನವರ 189ನೇ ಜೀವ ಸಮಾಧಿ ಮಹೋತ್ಸವದ ಅಂಗವಾಗಿ 2023-2024ನೇ ಸಾಲಿನ ಮಠದ ಅಭಿವೃದ್ಧಿ ಮತ್ತು ವಾರ್ಷಿಕ ಕಾರ್ಯಕ್ರಮಗಳ ವರದಿಯನ್ನು ತಾತಯ್ಯನವರಿಗೆ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಸಾವಿರಾರು ಸಾಧುಸತ್ಪುರುಷರಿಗೆ ಕಾಷಾಯ ವಸ್ತ್ರ ವಿತರಿಸಲಾಯಿತು. ಇಡೀ ರಾತ್ರಿ ಆಖಂಡ ಸಂಕೀರ್ತನೆ ನಡೆಯಿತು. ನೆರೆಯ ರಾಜ್ಯಗಳಾದ ಆಂಧ್ರ, ತಮಿಳುನಾಡು ಮತ್ತು ಕರ್ನಾಟಕದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು. ನಾದಸುಧಾರಸ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶ್ರೀ ಯೋಗಿನಾರೇಯಣ ಮಠದ ಟ್ರಸ್ಟ್ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ ಸತ್ಯನಾರಾಯಣ್, ಸದಸ್ಯರಾದ ಬಾಲಕೃಷ್ಣ ಭಾಗವತರ್, ಕೆ.ನರಸಿಂಹಪ್ಪ, ಗಣೇಶ್ ಚಂದ್ರಪ್ಪ, ಕೆ.ವಿ.ಸುರೇಶ್, ಕೆ.ಎಂ.ತ್ಯಾಗರಾಜ್ ಇತರರು ಇದ್ದರು. ವಾನರಾಶಿ ಬಾಲಕೃಷ್ಣ ಭಾಗವತರ್ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net