

ಮಾಗಡಿ
ಸರ್ಕಾರದ ಹಣ ದುರುಪಯೋಗಪಡಿಸಿಕೊಳ್ಳುತ್ತಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಳಪೆ ಕಾಮಗಾರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ತಾಲೂಕಿನ ಚಿಕ್ಕಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಿರ್ಮಾಣವಾದ ಗಂಗೋನಹಳ್ಳಿ&ಮಾಯಸಂದ್ರ ರಸ್ತೆ ಕಾಮಗಾರಿ ಕಳಪೆಯಾಗಿರುವುದೇ ಇದಕ್ಕೆ ಸಾಯಂತಿದೆ. ರಸ್ತೆ ಕಾಮಗಾರಿ ಪೂರ್ಣಗೊಂಡು 4 ತಿಂಗಳು ಕಳೆದಿದ್ದು, ಎಲ್ಲೆಂದರಲ್ಲಿ ಡಾಂಬರು ಕಿತ್ತು ಗುಂಡಿಗಳು ನಿರ್ಮಾಣವಾಗಿವೆ. ಈ ರಸ್ತೆಯಲ್ಲಿ ಓಡಾಡಲು ತೊಂದರೆ ಅನುಭವಿಸುವಂತಾಗಿದ್ದು, ಗುತ್ತಿಗೆದಾರ ಮತ್ತು ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಕೋಟಿ ರೂ. ವೆಚ್ಚದ ಕಾಮಗಾರಿ
ಗಂಗೋನಹಳ್ಳಿಯಿಂದ ತಾವರೆಕೆರೆ, ಚೆನ್ನಬೈರಪ್ಪನಪಾಳ್ಯ ಮಾರ್ಗವಾಗಿ ಮಾಯಸಂದ್ರವರೆಗೂ ನಿರ್ಮಾಣವಾಗಿರುವ ಮೂರೂವರೆ ಕಿಲೋಮೀಟರ್ ರಸ್ತೆಗೆ 189.73 ಲಕ್ಷ ರೂ. ವೆಚ್ಚ ಮಾಡಲಾಗಿದೆ. 2021ರ ಜೂನ್ನಲ್ಲಿ ಪ್ರಾರಂಭಿಸಬೇಕಿದ್ದ ಕಾಮಗಾರಿಯನ್ನು 2022ರ ಅಂತ್ಯದ ವೇಳೆಗೆ ತರಾತುರಿಯಿಂದ ಪೂರ್ಣಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ಯೋಜನೆಗೆ ಅನುದಾನ ನೀಡುವ ಜತೆಗೆ 2027ರವರೆಗೂ ರಸ್ತೆ ನಿರ್ವಹಣೆ ಮಾಡಲು 16.93 ಲಕ್ಷ ಹೆಚ್ಚುವರಿ ಹಣ ನೀಡಿದೆ.
ರಸ್ತೆಯಲ್ಲಿ ಗುಂಡಿಗಳ ನಿರ್ಮಾಣ
ರಸ್ತೆ ಕಾಮಗಾರಿಯು ಕಳಪೆಯಾಗಿದ್ದು, ಗಂಗೋನಹಳ್ಳಿ ಭಾಗದಿಂದ ಮಾಯಸಂದ್ರಕ್ಕೆ ಹೋಗುವ ದಾರಿಯಲ್ಲಿ ಹಲವು ಕಡೆ ರಸ್ತೆಯ ಅಂಚುಗಳು ಕಿತ್ತು ಬಂದಿವೆ. ಭಾರಿ ಗಾತ್ರದ ವಾಹನಗಳ ಓಡಾಟದಿಂದ ರಸ್ತೆ ಕುಸಿದು ಗುಂಡಿ ಬಿದ್ದಿದೆ. ಮಳೆ ಬಂದರೆ ಗುಂಡಿಗಳಲ್ಲಿ ನೀರು ತುಂಬುವುದರಿಂದ ಬೈಕ್ ಸವಾರರು ಬಿದ್ದು ಗಾಯಗೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಯಾಣಿಕರು ಅಳಲು ತೋಡಿಕೊಂಡಿದ್ದಾರೆ.
ಅಧಿಕಾರಿಗಳ ಒಳ ಒಪ್ಪಂದ?
ಗ್ರಾಮೀಣ ರಸ್ತೆಗಳಿಗೆ ಕೇಂದ್ರ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುತ್ತಿಗೆದಾರರ ಜತೆ ಒಳಒಪ್ಪಂದ ಮಾಡಿಕೊಂಡು ಕಾಮಗಾರಿ ಮಾಡುವ ಸ್ಥಳಕ್ಕೂ ಬಾರದೆ ಕೇವಲ ಫೋಟೋ ನೋಡಿ ಬಿಲ್ ಪಾವತಿಸುತ್ತಿದ್ದಾರೆ ಎಂಬ ಆರೋಪ ವ್ಯಾಪಕವಾಗಿದೆ.
ಇಂಜಿನಿಯರ್ಗಳ ಲೋಪ
ಕಳಪೆ ಕಾಮಗಾರಿಗೆ ಇಂಜಿನಿಯರ್ಗಳ ಬೇಜವಾಬ್ದಾರಿ ಹಾಗೂ ರ್ನಿಲಕ್ಷ$್ಯ ಕಾರಣವಾಗಿದೆ. ವಿಧಾನಸಭಾ ಚುನಾವಣೆಗೂ ಮುನ್ನ ೇತ್ರದಲ್ಲಿ ರಸ್ತೆ ಕಾಮಗಾರಿಗಳು ತರಾತುರಿಯಲ್ಲಿ ನಡೆದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಗುತ್ತಿಗೆದಾರ ಮತ್ತು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಗಂಗೋನಹಳ್ಳಿ ಮತ್ತು ತಾವರೆಕೆರೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯ ರಸ್ತೆ ಕಾಮಗಾರಿಯನ್ನು ಚುನಾವಣೆ ವೇಳೆ ತರಾತುರಿಯಲ್ಲಿ ಮಾಡಿರುವುದರಿಂದ ರಸ್ತೆಯಲ್ಲಿ ಟ್ರಾ$್ಯಕ್ಟರ್, ಲಾರಿಯಂತಹ ವಾಹನಗಳು ಓಡಾಡಿದರೆ ಡಾಂಬರು ಕಿತ್ತು ಬರುತ್ತಿದೆ. ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗಳು ಕಳಪೆಯಾಗಲು ಕಾರಣವಾದವರ ವಿರುದ್ಧ ಕ್ರಮಕೈಗೊಳ್ಳಲು ಶಾಸಕರು ಮುಂದಾಗಬೇಕು.
ಶಿವಪ್ರಸಾದ್, ಚಿಕ್ಕಹಳ್ಳಿ ಗ್ರಾಪಂ ಉಪಾಧ್ಯಕ್ಷ
ರಸ್ತೆ ಕಾಮಗಾರಿ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಕಾಮಗಾರಿ ಕಳಪೆಯಿಂದ ಕೂಡಿದರೆ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಸಂಬಂಧಪಟ್ಟವರಿಗೆ ಸೂಚಿಸಲಾಗುವುದು.
ಎಚ್.ಸಿ.ಬಾಲಕೃಷ್ಣ, ಶಾಸಕ