

ಮಾಗಡಿ: ಪುರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್‌ನ ರಮ್ಯಾ ನರಸಿಂಹಮೂರ್ತಿ, ಉಪಾದ್ಯಕ್ಷರಾಗಿ ರಿಯಾಜ್ ಅಹಮದ್ ಚುನಾಯಿತರಾಗಿದ್ದಾರೆ.
ಬುಧವಾರ ನಿಗದಿಯಾಗಿದ್ದ ಪುರಸಭೆಗೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ರಮ್ಯಾ ನರಸಿಂಹಮೂರ್ತಿ, ಉಪಾಧ್ಯಕ್ಷ ಸ್ಥಾನಕ್ಕೆ ರಿಯಾಜ್ ಅಹಮದ್ ಹಾಗೂ ಜೆಡಿಎಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ನಾಗರತ್ನಮ್ಮ, ಉಪಾಧ್ಯಕ್ಷ ಸ್ಥಾನಕ್ಕೆ ಅಶ್ವತ್ಥ್ ನಾಮಪತ್ರ ಸಲ್ಲಿಸಿದರು. ಚುನಾವಣೆಯಲ್ಲಿ ರಮ್ಯಾ ಹಾಗೂ ರಿಯಾಜ್ ಆಹಮದ್ ಪರವಾಗಿ ಶಾಸಕ ಎಚ್.ಸಿ.ಬಾಲಕೃಷ್ಣ ಸೇರಿ 11 ಮಂದಿ ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿರು. ಚುನಾವಣಾಧಿಕಾರಿ ಶರತ್ ಕುಮಾರ್ ಲಿತಾಂಶ ಘೋಷಿಸಿದರು.
ಜೆಡಿಎಸ್‌ನ 12 ಮಂದಿ ಸದಸ್ಯರಿದ್ದರೂ 8 ಮಂದಿ ಕೈಎತ್ತುವ ಮೂಲಕ ಜೆಡಿಎಸ್ ಅಧ್ಯಕ್ಷ, ಉಪಾಧ್ಯಕ್ಷರಿಗೆ ಬೆಂಬಲಸೂಚಿಸಿದರೆ, ವೆಂಕಟರಾಮು, ಕೆ.ಕೆ.ಕಾಂತರಾಜು, ಹೇಮಲತಾ ನಾಗರಾಜು, ರೆಹಮತ್ ತಟಸ್ಥರಾಗಿದ್ದರು. ಇದರಿಂದ ಜೆಡಿಎಸ್‌ಗೆ ಮುಖಭಂಗವಾಯಿತು. ಇದರ ನಡುವೆ ಬಿಜೆಪಿ ಏಕೈಕ ಸದಸ್ಯೆ ಭಾಗ್ಯಮ್ಮ ಚುನಾವಣೆಗೆ ಗೈರಾಗಿದ್ದರು.
ಕಾರಿನಲ್ಲಿ ಕರೆತಂದ ಶಾಸಕ:
ವೆಂಕಟರಾಮು, ಕೆ.ಕೆ.ಕಾಂತರಾಜು, ಹೇಮಲತಾ ನಾಗರಾಜು, ರೆಹಮತ್ ಅವರನ್ನು ಶಾಸಕ ಎಚ್.ಸಿ.ಬಾಲಕೃಷ್ಣ ಕಾರಿನಲ್ಲಿ ಮತ ಕೇಂದ್ರಕ್ಕೆ ಕರೆತಂದು ಚುನಾವಣೆ ವೇಳೆ ಕೈ ಎತ್ತದೆ ತಟಸ್ಥರಾಗುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು. ಅಂತೆಯೇ, ಚುನಾವಣೆ ಮುಗಿದ ನಂತರ 4 ಮಂದಿಯನ್ನೂ ಶಾಸಕರ ಕಾರಿನಲ್ಲೇ ಕಳುಹಿಸಿದ ಬಾಲಕೃಷ್ಣ ಬಳಿಕ ಅವರು ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಕಾರಿನಲ್ಲಿ ತೆರಳಿದರು.
ಜೆಡಿಎಸ್ ವಿಫಲ:
ಜೆಡಿಎಸ್ 12 ಸದಸ್ಯರು, ಒಬ್ಬ ಬಿಜೆಪಿ ಸದಸ್ಯೆ, ಸಂಸದರ ಮತ ಸೇರಿ 14 ಮತಗಳಿದ್ದವು. ಆದರೂ ಜೆಡಿಎಸ್ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆಮಾಡಿಕೊಳ್ಳುವಲ್ಲಿ ವಿಫಲವಾಯಿತು.
ಮತಗಟ್ಟೆಗೆ ಆಗಮಿಸದ ಸಂಸದ
ಸಂಸದ ಡಾ.ಸಿ.ಎನ್.ಮಂಜುನಾಥ್ ಅವರಿಗೆ ಮತ ಚಲಾಯಿಸುವ ಹಕ್ಕಿದ್ದರೂ ಮತ ಗಟ್ಟೆಗೆ ಬಾರದೆ ಸೋಲಿನ ಮಾಹಿತಿ ಪಡೆದು ಅರ್ಧ ದಾರಿಯಿಂದ ವಾಪಸ್ ಆದರು ಎನ್ನಲಾಗಿದೆ.
ಅಭಿವೃದ್ಧಿ ಪರ್ವ ಶುರು
ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಜೆಡಿಎಸ್‌ನ ಆಂತರಿಕ ಭಿನ್ನಾಭಿಪ್ರಾಯದಿಂದ ನಮಗೆ ಅಧಿಕಾರ ಸಿಕ್ಕಿದ್ದು, 6 ತಿಂಗಳಲ್ಲಿ ಹಕ್ಕುಪತ್ರ ಸಮಸ್ಯೆ ಸೇರಿ ಎಲ್ಲ ಸಮಸ್ಯೆಗಳ ಬಗ್ಗೆ ಸದಸ್ಯರಿಂದ ಮಾಹಿತಿಪಡೆದು ಪರಿಶೀಲಿಸಿ ಪಟ್ಟಣ ಅಭಿವೃದ್ಧಿಯಲ್ಲಿ ಬದಲಾವಣೆ ತರಲಾಗುವುದು. ಪುರಸಭೆ ನಮ್ಮ ತೆಕ್ಕೆಗೆ ಬಂದಿದ್ದು, ಜವಾಬ್ದಾರಿ ಹೆಚ್ಚಿದೆ. ಶಾಸಕರು ಹಾಗೂ ಪುರಸಭೆ ಆಡಳಿತ ಒಂದೇ ಪಕ್ಷ ಆಗಿರುವುದರಿಂದ ಆಡಳಿತ ಚುರುಕುಗೊಳಿಸಲಾಗುವುದು. ಕಾರ್ಯನಿರ್ವಹಿಸದ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ಒಳಚರಂಡಿ ಸಮಸ್ಯೆ ಬಗೆಹರಿಸಲು 60 ಕೋಟಿ ರೂ. ಹೆಚ್ಚುವರಿಯಾಗಿ ಕೊಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪಟ್ಟಣದ ಪ್ರಮುಖ ರಸ್ತೆ ನಿರ್ಮಾಣಕ್ಕೆ 20 ಕೋಟಿ ರೂ. ಮಂಜೂರಾಗಿದ್ದು, ಪಟ್ಟಣದ ಒಳಗಿನ ರಸ್ತೆ ಅಭಿವೃದ್ಧಿಗೆ ವಿಶೇಷ ಅನುದಾನ ತಂದು ಅಭಿವೃದ್ಧಿಗೊಳಿಸಲಾಗುವುದು. ಕಸವಿಲೇವಾರಿಗೆ ಉಪಾಧ್ಯಕ್ಷರು ವಿಶೇಷವಾಗಿ ಜವಾಬ್ದಾರಿ ಹೊರುವಂತೆ ಸೂಚಿಸಲಾಗಿದೆ ಎಂದರು.
ಜೆಡಿಎಸ್ ನಾಯಕರು ಸೋಲುವ ವೇಳೆ ಒಬ್ಬರು, ಗೆಲ್ಲುವ ವೇಳೆ ಮತ್ತೊಬ್ಬರಿಗೆ ನಾಮಪತ್ರ ಸಲ್ಲಿಸುವಂತೆ ಸೂಚಿಸುತ್ತಾರೆ. ಸೋಲು ಖಚಿತವಾಗುವ ವೇಳೆ ಜೆಡಿಎಸ್‌ನ ನಾಗರತ್ನಮ್ಮ ಅವರಿಂದ ನಾಮಪತ್ರ ಸಲ್ಲಿಸಿ ಬಲಿಪಶು ಮಾಡಿದ್ದಾರೆ ಎಂದು ಶಾಸಕರು ಹೇಳಿದರು.
ಮಧ್ಯದಲ್ಲಿ ಬಿಟ್ಟು ಬಂದಿದ್ದರು!
ಜೆಡಿಎಸ್‌ನ 4 ಮಂದಿ ಸದಸ್ಯರು ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಏಕೆ ನಡೆದುಕೊಂಡು ಹೋಗುತ್ತಿದ್ದೀರಾ ಎಂದು ಕೇಳಿದೆ. ನಮ್ಮನ್ನು ಜೆಡಿಎಸ್ ಕಚೇರಿ ಬಳಿ ಬಿಟ್ಟು ಹೋಗಿದ್ದಾರೆ. ನಮ್ಮನ್ನು ಕರೆದುಕೊಂಡು ಹೋಗಿ ಎಂದರು. ಹಾಗಾಗಿ ನನ್ನ ಕಾರಿನಲ್ಲಿ ಅವರನ್ನು ಕರೆತಂದು ಮತಗಟ್ಟೆಗೆ ಬಿಟ್ಟಿದ್ದೇನೆ. ಜೆಡಿಎಸ್‌ನ ಸದಸ್ಯರನ್ನು ನಾಯಕರು ಟೂರಿಗೆ ಕರೆದುಕೊಂಡು ಹೋಗಿ, 4 ಮಂದಿ ಸದಸ್ಯರನ್ನು ಮಧ್ಯದಲ್ಲಿ ಬಿಟ್ಟು ಬಂದಿದ್ದಾರೆ ಎಂದು ಶಾಸಕರು ಹೇಳಿದರು.
ಬಿಡದಿ ಪುರಸಭೆಗೂ ಚುನಾವಣೆ ನಿಗದಿಯಾಗಿದ್ದು, ಜೆಡಿಎಸ್ ಅಭ್ಯರ್ಥಿಗಳು ಕಿತ್ತಾಡಿಕೊಂಡು ತಟಸ್ಥರಾದರೆ ನಾವೇ ಗೆಲ್ಲುತ್ತೇವೆ ಎಂದರು.
ಡಿವೈಎಸ್‌ಪಿ ಪ್ರವೀಣ್, ಇನ್‌ಸ್ಪೆಕ್ಟರ್ ಜಿ.ವೈ. ಗಿರಿರಾಜು ಬಂದೋಬಸ್ತ್ ಕಲ್ಪಿಸಿದ್ದರು. ಸದಸ್ಯರಾದ ಎಚ್.ಜೆ. ಪುರುಷೋತ್ತಮ್, ಎಚ್.ಆರ್.ಶಿವಕುಮಾರ್, ರಂಗಹನುಮಯ್ಯ, ಕೆ.ಕೆ.ಕಾಂತರಾಜು, ಎಸ್. ಮಮತಾ, ನಾಗರತ್ನಮ್ಮ, ಅನಿಲ್ ಕುಮಾರ್, ಆಶಾ ರಾಣಿ, ಅಶ್ವತ್ಥ್, ಜಯರಾಮು, ವೆಂಕಟರಾಮು, ರೇಖಾ, ವಿಜಯರೂಪೇಶ್, ಹೇಮಲತಾ, ಎಂ.ಎನ್. ಮಂಜುನಾಥ್, ಶಿವರುದ್ರಮ್ಮ, ರೆಹಮತ್ ಇದ್ದರು.
"ನಾವು ಯಾವುದೇ ಆಪರೇಷನ್ ಮಾಡಿಲ್ಲ, ಜೆಡಿಎಸ್‌ನ ಸೈದ್ಧಾಂತಿಕ ವಿಚಾರದಲ್ಲಿ ಭಿನ್ನಾಭಿಪ್ರಾಯವಾಗಿದೆ. ನಾನು ಕ್ಷೇತ್ರದ ಶಾಸಕ, ಒಂದು ಪಕ್ಷದ ಶಾಸಕನಲ್ಲ, ತಟಸ್ಥರಾದ 4 ಮಂದಿ ಜೆಡಿಎಸ್ ಸದಸ್ಯರು ಹಾಗೂ ಯಾರೇ ಬಂದರೂ ಸೇರಿಸಿಕೊಂಡು ಅವರೊಂದಿಗೆ ಕೆಲಸ ಮಾಡುವುದು ನನ್ನ ಕರ್ತವ್ಯ. ಚುನಾವಣೆ ಮುಗಿಯುವವರೆಗೂ ಪಕ್ಷ. ನಂತರ ನಾವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದ್ದೇನೆ."
ಎಚ್.ಸಿ.ಬಾಲಕೃಷ್ಣ, ಶಾಸಕ