ಸೊರಗುತ್ತಿದೆ ಮಾಗಡಿ ಸರ್ಕಾರಿ ಸಂಕೀರ್ಣ

web magadi3
Published on

ಎಂ.ಎಸ್.ಸಿದ್ದಲಿಂಗೇಶ್ವರ್ ಮಾಗಡಿ

ಪಟ್ಟಣದ ತಿರುಮಲೆ ಮಾಗಡಿ ರಸ್ತೆಯಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಕಚೇರಿಗಳ ಸಂಕೀರ್ಣ ನಿರ್ವಹಣೆ ಇಲ್ಲದೆ ಸೊರಗುತ್ತಿದ್ದು, ಭೂತ ಬಂಗಲೆಯಂತಾಗಿದೆ.

2006ರಲ್ಲಿ ನಿರ್ಮಾಣವಾಗಿರುವ ಸಂಕೀರ್ಣದಲ್ಲಿ ಉಪನೋಂದಣಾಧಿಕಾರಿಗಳ ಕಚೇರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಇಲಾಖೆ, ಸಮಾಜ ಕಲ್ಯಾಣ, ಮೀನುಗಾರಿಕೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಕಚೇರಿಗಳಿವೆ. ಕಚೇರಿಗಳ ಕಿಟಕಿಗಳು ಒಡೆದು ಹಾಳಾಗಿವೆ. ನೀರು ಹೊರಹರಿಯಲು ಅಳವಡಿಸಿರುವ ಪೈಪ್‌ಗಳು ಒಡೆದು ಗೋಡೆಗಳ ಮೇಲೆ ಹರಿಯುತ್ತಿದೆ. ಕಟ್ಟಡ ಮುಂಭಾಗ ಗಿಡ-ಗಂಟಿಗಳಿಂದ ಆವೃತವಾಗಿದೆ.

ಕಚೇರಿಗಳಿಗೆ ನೀರು ಪೂರೈಸಲು ಕಟ್ಟಡದ ಮೇಲೆ ಅಳವಡಿಸಿರುವ ಪೈಪ್‌ಗಳು ಒಡೆದು ನೀರು ನಿಂತಿದ್ದರೂ ಸರಿಪಡಿಸಲು ಸಂಬಂಧಪಟ್ಟವರು ಕ್ರಮ ಕೈಗೊಂಡಿಲ್ಲ. ಮಳೆ ಬಂದರೆ ಕಟ್ಟಡದ ನೆಲಮಹಡಿಯಲ್ಲಿ ಕೆರೆಯಂತೆ ನೀರು ನಿಲ್ಲುತ್ತದೆ. ಇದರಿಂದ ವಾಹನ ನಿಲುಗಡೆಗೆ ಸಮಸ್ಯೆಯಾಗುತ್ತದೆ ಎಂದು ಹೆಸರು ಹೇಳಲು ಇಚ್ಛಿಸದ ವಾಹನ ಚಾಲಕರು ಆರೋಪಿಸುತ್ತಾರೆ. ಈ ಕಟ್ಟಡ ತಾಲೂಕು ಪಂಚಾಯಿತಿಗೆ ಸೇರಿದ್ದು, ಸೌಲಭ್ಯ ಒದಗಿಸಲು ಆಡಳಿತ ನಿರ್ಲಕ್ಷ್ಯ ತೋರಿದೆ.

ಲಿಫ್ಟ್ ಬೇಕು

ಕಟ್ಟಡದ 2ನೇ ಮಹಡಿಯಲ್ಲಿ ಉಪನೋಂದಣಾಧಿಕಾರಿಗಳ ಕಚೇರಿ ಇದ್ದು, ಪ್ರತಿದಿನ ಸಾವಿರಾರು ಮಂದಿ ಕೆಲಸಕಾರ್ಯಗಳಿಗೆ ಬಂದು ಹೋಗುತ್ತಾರೆ. ಆದರೆ, ಲ್‌ಟಿ ವ್ಯವಸ್ಥೆ ಇಲ್ಲದ ಕಾರಣ ವೃದ್ಧರು, ಅಂಗವಿಕಲರಿಗೆ 2ನೇ ಮಹಡಿಗೆ ಹತ್ತಿ ಹೋಗುವುದು ಸಮಸ್ಯೆಯಾಗಿದೆ. ಇಲ್ಲಿರುವ ಎಲ್ಲ ಕಚೇರಿಗಳಿಗೆ ಪ್ರತಿದಿನ ಸಾವಿರಾರು ಮಂದಿ ಬರುತ್ತಾರೆ. ಇಲ್ಲಿಗೆ ಬರುವವರು ಕಾರು, ಬೈಕ್ ನಿಲ್ಲಿಸಲು ಪಾರ್ಕಿಂಗ್ ಇಲ್ಲದೆ ತಿರುಮಲೆಯ ಪ್ರಮುಖ ರಸ್ತೆಬದಿಗಳಲ್ಲಿ ನಿಲ್ಲಿಸುವುದರಿಂದ ಈ ರಸ್ತೆಯಲ್ಲಿ ಸಂಚಾರಕ್ಕೆ ಸಮಸ್ಯೆಯಾಗುತ್ತದೆ. ಅಪಘಾತಗಳಿಗೂ ಕಾರಣವಾಗುತ್ತಿದೆ. ಸಂಕೀರ್ಣಕ್ಕೆ ಕಾಯಕಲ್ಪ ನೀಡಲು ತಾಲೂಕು ಪಂಚಾಯಿತಿ ಮುಂದಾಗಲಿದೆಯೇ ಕಾದುನೋಡಬೇಕಿದೆ.

ಕಟ್ಟಡಕ್ಕೆ ಭದ್ರತೆ ಇಲ್ಲ

ಭದ್ರತೆ ಕಟ್ಟಡದಲ್ಲಿ ಬಹುತೇಕ ಪ್ರಮುಖ ಇಲಾಖೆಗಳ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಮಹತ್ವದ ದಾಖಲೆಗಳು ಇರುತ್ತವೆ. ಆದರೆ, ರಾತ್ರಿ ಹೊತ್ತಿನಲ್ಲಿ ಕಟ್ಟಡಕ್ಕೆ ಭದ್ರತೆ ಇಲ್ಲ. ಕಚೇರಿ ಎದುರು ಗೇಟ್‌ಗೆ ಬೀಗ ಹಾಕದ ಕಾರಣ ಕಟ್ಟಡದ ನೆಲಮಹಡಿ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಸಂಬಂಧಪಟ್ಟವರಿಗೆ ಇದು ತಿಳಿದಿದ್ದರೂ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ ಎನ್ನುವುದು ನಾಗರಿಕರ ಆರೋಪವಾಗಿದೆ.

ಬಯಲುಶೌಚ ಅನಿವಾರ್ಯ

ಕಟ್ಟಡದಲ್ಲಿ ಶಿಶುಪಾಲನಾ ಕೇಂದ್ರ ಇದ್ದು 30 ಮಕ್ಕಳಿದ್ದಾರೆ. ಆದರೆ, ಶೌಚಗೃಹ ಇಲ್ಲದೆ ಶೌಚಕ್ಕಾಗಿ ಬಯಲನ್ನೇ ಆಶ್ರಯಿಸಬೇಕಿದೆ. ಇನ್ನು ಕಚೇರಿ ಪಕ್ಕದಲ್ಲೇ ಶೌಚಗೃಹ ನಿರ್ಮಿಸಿದ್ದರೂ ನಿರ್ವಹಣೆ ಇಲ್ಲದೆ ಗಬ್ಬುನಾರುತ್ತಿದೆ.

ಕೋಟ್ಯಂತರ ರೂ. ವೆಚ್ಚದಲ್ಲಿ ಸರ್ಕಾರಿ ಕಚೇರಿಗಳ ಸಂಕೀರ್ಣ ನಿರ್ಮಾಣ ಮಾಡಲಾಗಿದೆ. ಆದರೆ ಈ ಕಟ್ಟಡ ನಿರ್ವಹಣಿಯಿಲ್ಲದೆ ಸೊರಗುತ್ತಿರುವುದು ಬೇಸರ ತರಿಸಿದೆ. ಕಟ್ಟಡವನ್ನು ಸುಸ್ಥಿತಿಯಲ್ಲಿಡುವ ಕೆಲಸವಾಗಬೇಕು.

ಜಯಕುಮಾರ್, ಸ್ಥಳೀಯ

ಕಟ್ಟಡದ ಸ್ವಚ್ಛತೆಗೆ ಇಬ್ಬರನ್ನು ನೇಮಿಸಲಾಗಿದೆ. ಈ ಮೊದಲು ಕಟ್ಟಡದ ನಿರ್ವಹಣೆ ಮಾಡಲಾಗುತ್ತಿತ್ತು. ಚುನಾಯಿತ ಪ್ರತಿನಿಧಿಗಳ ಆಡಳಿತ ಮಂಡಳಿ ಇಲ್ಲದ ಕಾರಣ ಈಗ ನಿರ್ವಹಣೆ ಸಮಸ್ಯೆಯಾಗಿದೆ. ಆಡಳಿತ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಸರಿಪಡಿಸಲಾಗುವುದು. ಅಧಿಕೃತವಾಗಿ ವಾಚ್‌ಮ್ಯಾನ್ ನೇಮಿಸಲಾಗುವುದು.

ಚಂದ್ರು, ತಾಲೂಕು ಪಂಚಾಯಿತಿ ಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net