

ಮಾಗಡಿ
ಗವಿನಾಗಮಂಗಲ ಗ್ರಾಮದಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಲು ಚಿಂತಿಸಲಾಗಿದೆ ಎಂದು ಗ್ರಾಮದ ಮುಖಂಡ ಎಂ. ನಾಗೇಂದ್ರ ತಿಳಿಸಿದರು.
ತಾಲೂಕಿನ ಗವಿನಾಗಮಂಗಲ ಗ್ರಾಮದ ಸೂರ್ಯೋದಯ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಕೆಂಪೇಗೌಡ ಜಯಂತಿ ಉದ್ಘಾಟಿಸಿ ಮಾತನಾಡಿ, ಕೆಂಪೇಗೌಡರು ನಿರ್ಮಿಸಿರುವ ಕೆರೆ, ಕಟ್ಟೆ, ಕೋಟೆ, ದೇವಾಲಯಗಳು ಶಿಥಿಲವಾಗುತ್ತಿವೆ. ಅವುಗಳನ್ನು ಅಭಿವೃದ್ಧಿಗೊಳಿಸಿ ಕೆಂಪೇಗೌಡರ ಕಾಲದ ಗತವೈಭವ ಮರುಕಳಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು.
ಸರ್ಕಾರ ತಾಲೂಕಿನ ಕೆಂಪಾಪುರ ಗ್ರಾಮದ ಕೆಂಪೇಗೌಡರ ವೀರಸಮಾಧಿ ಅಭಿವೃದ್ಧಿಗೊಳಿಸಿ ವಿಶ್ವಪಾರಂಪರಿಕ ಪ್ರವಾಸಿ ತಾಣವನ್ನಾಗಿ ಮಾಡಬೇಕು. ಕೆಂಪೇಗೌಡರ ದೂರದೃಷ್ಟಿಯಿಂದ ನಿರ್ಮಾಣವಾದ ಬೆಂಗಳೂರು ನಗರ ಇಂದು ಬೃಹತ್ತಾಗಿ ಬೆಳೆದು ವಿಶ್ವ ಪ್ರಸಿದ್ಧಿ ಹೊಂದಿದೆ. ಕೆಂಪೇಗೌಡರ ಸೇವೆಯ ಪ್ರತೀಕವಾಗಿ ಜಯಂತಿ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಕೆಂಪೇಗೌಡರು ಒಂದು ಸಮುದಾಯಕ್ಕೆ ಮೀಸಲಾದವರಲ್ಲ, ಸರ್ಕಾರ ಕೆಂಪೇಗೌಡರ ಸಾಧನೆ ಕುರಿತು ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸ ಮಾಡಬೇಕು ಎಂದರು. ಜಯಂತಿ ಅಂಗವಾಗಿ ಸಾಮೂಹಿಕ ಅನ್ನಸಂತರ್ಪಣೆ ಮತ್ತು ಸಾಂಸ್ಕೃತಿಕ ಕಲಾ ತಂಡಗಳ ಮೆರವಣಿಗೆ ನಡೆಯಿತು.