ಮಾಗಡಿ ಅಭಿವೃದ್ಧಿಗೆ ಸರ್ಕಾರದ ಸಹಾಯ ಹಸ್ತ

MA
Published on

ಮಾಗಡಿ : ಬೆಂಗಳೂರು ನಿರ್ಮಾತೃ ಕೆಂಪೇಗೌಡರ ನೆಲೆಯಾದ ಮಾಗಡಿ ಅಭಿವೃದ್ಧಿಗೆ ಸರ್ಕಾರ ಸಹಕಾರ ಕೊಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಪಟ್ಟಣದಲ್ಲಿ ಶುಕ್ರವಾರ 70 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಮಾಗಡಿ ಕೆಂಪೇಗೌಡರ ರಾಜಧಾನಿಯಾಗಿದ್ದ ನಗರ. ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ಕೆಂಪೇಗೌಡರ ಜಯಂತಿ ಆಚರಣೆಗೆ ತಂದು ಪ್ರಾಧಿಕಾರವನ್ನೂ ರಚನೆ ಮಾಡಲಾಯಿತು. ಇದರ ಉದ್ದೇಶ ಕೆಂಪೇಗೌಡರನ್ನು ಎಲ್ಲರೂ ಸ್ಮರಿಸಬೇಕು ಎನ್ನುವುದಾಗಿತ್ತು. ಆದರೆ, ಒಕ್ಕಲಿಗರ ನಾಯಕರು ಎಂದು ಹೇಳಿಕೊಳ್ಳುವವರು ಇದನ್ನು ಮಾಡಲಿಲ್ಲ ಎಂದರು.

ಕ್ಷೇತ್ರದ ಶಾಸಕ ಬಾಲಕೃಷ್ಣ ಅವರಿಗೆ ಸಚಿವರಾಗುವ ಅರ್ಹತೆ ಇದೆ. ಆದರೆ, ಮುಖ್ಯಮಂತ್ರಿ ಸೇರಿ 32 ಮಂದಿಗಷ್ಟೇ ಸಂಪುಟದಲ್ಲಿ ಅವಕಾಶವಿದೆ. ಸಚಿವನಾಗಲಿಲ್ಲ ಎಂದು ಬಾಲಕೃಷ್ಣ ವ್ಯಥೆಪಡದೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಬಾಲಕೃಷ್ಣ ಅವರ ತಂದೆ ಚನ್ನಪ್ಪ ಅವರು ಬೊಮ್ಮಾಯಿ ಸರ್ಕಾರದಲ್ಲಿ ಸಚಿವರಾಗಿದ್ದರು. ಅವರೂ ನನಗೆ ಆತ್ಮೀಯರಾಗಿದ್ದರು. ಹಾಗಾಗಿ ಬಾಲಕೃಷ್ಣ ಅವರನ್ನು ಚನ್ನಪ್ಪ ಎಂದೇ ಕರೆಯುತ್ತೇನೆ. ಅಭಿವೃದ್ಧಿ ಬಗ್ಗೆ ಕಳಕಳಿ ಇರುವ ಬಾಲಕೃಷ್ಣ ಅವರಂತಹವರು ಸಾರ್ವಜನಿಕ ಜೀವನದಲ್ಲಿ ಇರಬೇಕು. ಅಂತಹ ಜನಪ್ರತಿನಿಧಿಯನ್ನು ಮಾಗಡಿ ಜತೆ ಆಯ್ಕೆ ಮಾಡಿಕೊಂಡಿದ್ದಾರೆ ಎಂದರು.

ಮೋದಿಗೆ ಮತ ಎಂದು ಏಕೆ ಹೇಳ್ತೀರಿ? :
ಮಾಜಿ ಪ್ರಧಾನಿಗಳಾದ ನೆಹರು, ಇಂದಿರಾಗಾಂಧಿ, ನರಸಿಂಹರಾವ್, ಲಾಲಬಹದೂರ್ ಶಾಸ್ತ್ರಿ, ಮನಮೋಹನ್ ಸಿಂಗ್ ಈ ದೇಶ ಉಳಿಸಲಿಲ್ಲವೇ?, ಕಾಂಗ್ರೆಸ್ ನಾಯಕ ರಾಹುಲ್ ದೇಶದ ಪರ ಕೆಲಸ ಮಾಡುತ್ತಿಲ್ಲವೇ?, ಈ ಸಲ ಬಿಟ್ಟು ಬಿಡಿ ಬಾಲಣ್ಣ, ಮೋದಿಗೆ ಮತ ಹಾಕುತ್ತೇವೆ ಎಂದು ಏಕೆ ಹೇಳುತ್ತೀರಿ?, ಸುಳ್ಳು ಹೇಳುತ್ತಾರೆಂದು ಅವರಿಗೆ ಮತ ಹಾಕುತ್ತೀರಾ?, ರೈತರ ಸಾಲದ ಬದಲು ಕಾರ್ಪೋರೇಟ್ ಕಂಪನಿಗಳ ಸಾಲ ಮನ್ನಾ ಮಾಡಿದ್ದಕ್ಕಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

ಪರಿಶಿಷ್ಟರಿಗೆ ಮೀಸಲಿಟ್ಟ ಹಣವನ್ನು ಅವರಿಗಾಗಿಯೇ ಖರ್ಚು ಮಾಡುತ್ತೇವೆ. ಬಿಜೆಪಿಯವರು ಎಸ್‌ಇಪಿ, ಟಿಎಸ್ಪಿ ಜಾರಿ ಮಾಡಿದ್ದಾರಾ?, ಮಾಡಲಿ ನೋಡೋಣ. ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಖರ್ಚು ಮಾಡುತ್ತಿದ್ದೇವೆ. ಈ ಸಲ 34 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ. ರೈತರ ಸಾಲ ಮನ್ನಾ ಮಾಡದೆ ಉದ್ಯಮಿಗಳ 16 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ ಬಿಜೆಪಿಯವರು ಯಾರ ಪರ?, ಮೋದಿ ಸಹಾಯ ಮಾಡದೇ ಅದಾನಿ ಮತ್ತು ಅಂಬಾನಿ ದೇಶದ ನಂಬರ್ ಒನ್ ಶ್ರೀಮಂತರಾದರೇ?, ಬಿಜೆಪಿ ನಾಯಕರು ಏನು ಮಾಡಿದ್ದಾರೆಂದು ಅವರಿಗೆ ಮತ ಹಾಕುತ್ತೀರಿ? ಸುಳ್ಳು ಹೇಳುವವರನ್ನು ನಂಬಬೇಡಿ. ನಾವು ಬಡವರ ಪರವಾಗಿದ್ದೇವೆ. ನಮಗೆ ಮತ ಹಾಕಿ. ಈ ದೇಶದಲ್ಲಿ ಸಮಾನತೆ ಬರಬೇಕಾದರೆ ಅಶಕ್ತರು ಹಾಗೂ ಶತಮಾನಗಳಿಂದ ಶೋಷಣೆಗೆ ಒಳಗಾದವರಿಗೆ ಅವಕಾಶ ನೀಡಿ ಎಂದರು.

ನಾನು ಅಧಿಕಾರದಲ್ಲಿ ಇರುವುದೇ ಬಡವರಿಗಾಗಿ. ಯಾವ ಜಾತಿ ಅಥವಾ ಧರ್ಮದ ಪರವಾಗಿಲ್ಲ. ಇಡೀ ರಾಜ್ಯದ ಜನ ಹೇಳಿದರೆ ಹಾಲಿನ ದರ ಏರಿಕೆ ಮಾಡೋಣ. ಅದರ ಲಾಭವನ್ನು ರೈತರಿಗೆ ಕೊಡೊಣ ಎಂದರು.

ಸತ್ಯ ಹೇಳೋಕೆ ಏಕೆ ಭಯ? : ಗ್ಯಾರಂಟಿ ಯೋಜನೆ ಬಂದ ಮೇಲೆ ಅಭಿವೃದ್ಧಿ ಕೆಲಸಗಳಿಗೆ ದುಡ್ಡಿಲ್ಲ ಎಂದು ಪ್ರತಿ ಪಕ್ಷಗಳು ಕುಹಕವಾಡಿದವು.
ಆದರೆ, ಮಾಗಡಿ ತಾಲೂಕು ಒಂದಕ್ಕೆ ಈಗ 124 ಕೋಟಿ ರೂ. ಮೊತ್ತದ ಅಭಿವೃದ್ಧಿ ಕೆಲಸಕ್ಕೆ ಹಣ ಎಲ್ಲಿಂದ ಬಂತು?. ಆದರೆ, ಬಿಜೆಪಿಯವರು ಸುಳ್ಳನ್ನೇ ಎಲ್ಲ ಕಡೆ ಹೇಳಿಕೊಂಡು ಬರ್ತಾರೆ. ನಮ್ಮ ಕಾರ್ಯಕರ್ತರಿಗೆ ಸತ್ಯ ಹೇಳೋಕೆ ಏಕೆ ಭಯ ಎಂದು ಸಿಎಂ ಪ್ರಶ್ನಿಸಿದರು.

ಬಾಯ್ತಪ್ಪಿದ ಸಿದ್ದಣ್ಣ : ಗ್ಯಾರಂಟಿಗಳಿಂದ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 4 ರಿಂದ 5 ಕೋಟಿ ಹಣ ಸಿಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಯ್ತಪ್ಪಿ ಹೇಳಿದರು. ಈ ವೇಳೆ ಅದು 4ರಿಂದ 5 ಸಾವಿರ ಹಣ ಎಂದು ಶಾಸಕ ಬಾಲಕೃಷ್ಣ ಹೇಳಿದರು. ಮಾತು ಮುಂದುವರಿಸಿದ ಸಿಎಂ, ಶಕ್ತಿ ಯೋಜನೆ ಆರಂಭವಾದಾಗಿನಿಂದ 297ಕೋಟಿ ಜನ ಪ್ರಯಾಣ ಮಾಡಿದ್ದಾರೆ. ಉಚಿತವಾಗಿ ಅಕ್ಕಿ, ವಿದ್ಯುತ್ ಪೂರೈಕೆ ಮಾಡ್ತಿದ್ದೇವೆ. ಅಂಬೇಡ್ಕರ್ ಆಶಯದಂತೆ ಕೆಲಸ ಮಾಡ್ತಿದ್ದೇವೆ. ಒಂದು ಕುಟುಂಬಕ್ಕೆ ತಿಂಗಳಿಗೆ 5 ಸಾವಿರ ಹಣ ಸೇರುತ್ತಿದೆ. ಆದರೂ ಈ ಬಾರಿ ಮೋದಿಗೆ ಓಟ್ ಹಾಕುತ್ತೀನಿ ಅಂತಿರಾ ಎಂದು ಕೇಂದ್ರ ಸರ್ಕಾರದ ವಿರುದ್ಧ ಮಾತಿನ ಪ್ರಹಾರ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net