'ಒಳ ಮೀಸಲಾತಿ ಜಾರಿ ಮಾಡಿ ಇಲ್ಲವೇ ರಾಜೀನಾಮೆ ನೀಡಿ'

Padayatre
Published on

ಶಿರಾ: ಪರಿಶಿಷ್ಟ ಜಾತಿಗಳಲ್ಲಿರುವ 101 ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಜಾರಿ ಮಾಡುವಂತೆ ಒತ್ತಾಯಿಸಿ ಹರಿಹರದ ಪ್ರೊ.ಬಿ.ಕೃಷ್ಣಪ್ಪ ಸಮಾಧಿ ಸ್ಥಳದಿಂದ ಕ್ರಾಂತಿಕಾರಿ ಪಾದಯಾತ್ರೆ ನಡೆಸುತ್ತಿರುವುದು ಕಾಂಗ್ರೆಸ ಸರ್ಕಾರಕ್ಕೆ ಕೊನೆಯ ಎಚ್ಚರಿಕೆ. ಒಳ ಮೀಸಲಾತಿ ಜಾರಿ ಮಾಡಿ ಇಲ್ಲವೇ ರಾಜೀನಾಮೆ ನೀಡಿ ಎಂದು ಸಮಾಜ ಕಲ್ಯಾಣ ಇಲಾಖೆ ಮಾಜಿ ಸಚಿವ ಎನ್​.ಮಹೇಶ್​ ಗುಡುಗಿದರು.

ಒಳಮೀಸಲಾತಿಗಾಗಿ ಒತ್ತಾಯಿಸಿ ಹರಿಹರ ಬಳಿಯ ಪ್ರೊ.ಬಿ.ಕೃಷ್ಣಪ್ಪ ಸಮಾಧಿ ಸ್ಥಳದಿಂದ ಮಾ 5.ಕ್ಕೆ ಆರಂಭವಾಗಿರುವ ಕ್ರಾಂತಿಕಾರಿ ಪಾದಯಾತ್ರೆ ಗುರುವಾರ ಜಿಲ್ಲೆಯ ಗಡಿ ಪ್ರವೇಶಿಸಿದ್ದ 2ನೇ ದಿನವಾದ ಶುಕ್ರವಾರ ಪಾದಯಾತ್ರೆ ತಾಲೂಕಿನ ದೊಡ್ಡ ಆಲದಮರದ ಸಮೀಪ ಬ್ರಹ್ಮಸಂದ್ರದಲ್ಲಿ ತಲುಪಿತು. ಅಂಬೇಡ್ಕರ್​ ಭವನದಲ್ಲಿ ಹೋರಾಟಗಾರರು ವಾಸ್ತವ್ಯ ಹೂಡಿದ್ದು ಶನಿವಾರ ತುಮಕೂರಿನತ್ತ ಹೆಜ್ಜೆ ಹಾಕಲಿದ್ದಾರೆ. ಗುರುವಾರ ಅಸ್ವಸ್ಥಗೊಂಡಿದ್ದ 4 ಮಂದಿ ಚೇತರಿಸಿಕೊಂಡಿದ್ದು ಪಾದಯಾತ್ರೆ ಕೂಡಿಕೊಳ್ಳಲಿದ್ದಾರೆ.

ಹೋರಾಟಗಾರರನ್ನು ಬೆಂಬಲಿಸಿ ಪಾದಯಾತ್ರೆ ಕೂಡಿಕೊಂಡ ಮಾಜಿ ಸಚಿವ ಮಹೇಶ್​, ದೇಶದಲ್ಲಿ ಕಾಂಗ್ರೆಸ ಪಕ್ಷ 1950 ರಿಂದ ಇಲ್ಲಿಯರೆಗೆ ಸಂವಿಧಾನದ ಪರವಾಗಿ ನಡೆದುಕೊಂಡಿಲ್ಲ. ಸಂವಿಧಾನಕ್ಕೆ ದೊಡ್ಡ ಅಪಚಾರ ಮಾಡಿರುವುದು ಕಾಂಗ್ರೆಸ ಪಕ್ಷ. ಇಷ್ಟೊಂದು ಉರಿ ಬಿಸಿಲಿನಲ್ಲಿ ಹೋರಾಟಾರರು ಪಾದಯಾತ್ರೆ ಮಾಡುತ್ತಿದ್ದಾರೆ. ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ 4 ಮಂದಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಆದರೂ, ಈ ಕಾಂಗ್ರೆಸ್​ ಸರ್ಕಾರಕ್ಕೆ ಸ್ವಲ್ಪವು ಕಾಳಜಿ ಇಲ್ಲ, ಮಾನವೀಯತೆ ಇಲ್ಲ. ಇದೊಂದು ಅಮಾನವೀಯ ಸರ್ಕಾರ ಎಂದು ಹರಿಹಾಯ್ದರು.

ಬಿಜೆಪಿ ಸರ್ಕಾರ 2022ರಲ್ಲಿ ಸಿಎಂ ಬವರಾಜ ಬೊಮ್ಮಾಯಿ ಅವರು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ನೇತೃತ್ವದ ಉಪಸಮಿತಿಯ ಶಿಫಾರಸಿನಂತೆ ಮಾದಿಗ ಸಂಬಂಧಿತ ಜಾತಿಗಳಿಗೆ ಶೇ. 6, ಹೊಲೆಯ ಜಾತಿಗಳಿಗೆ ಶೇ. 5.5 ಭೋವಿ, ಲಂಬಾಣಿ ಜಾತಿಗಳಿಗೆ ಶೇ. 4, ಅಲೆಮಾರಿ ಜಾಂಗಕ್ಕೆ ಶೇ. 1 ವೀಸಲಾತಿ ನೀಡಿ ಅದನ್ನು ಗೆಜೆಟ್​ ಆದೇಶ ಹೊರಡಿಸಿದ್ದಾರೆ. ಬಿಜೆಪಿ ಸರ್ಕಾರದ ಆದೇಶ ಸರಿಯಾಗಿದೆ. ಅದರ ಪ್ರಕಾರ ಕಾಂಗ್ರೆಸ್​ ಸರ್ಕಾರ ಒಳವೀಸಲಾತಿ ಜಾರಿ ಮಾಡಿ. ನ್ಯಾ.ನಾಗಮೋಹನ್​ ದಾಸ್​ ಆಯೋಗ ಮಧ್ಯಂತರ ಆದೇಶದಂತೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಿರುವ ವರದಿ ಅನುಸಾರ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಒತ್ತಾಯಿಸಿದರು.

ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬಂದರೆ ಒಳಮೀಸಲಾತಿ ಜಾರಿ ಮಾಡುವ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಒಳಮೀಸಲಾತಿ ಜಾರಿಗೆ ವೀನಾಮೇಷ ಎಣಿಸುತ್ತಿದ್ದು, ನೈತಿಕತೆ ಇದ್ದರೆ ಒಳಮೀಸಲಾತಿ ಜಾರಿ ಮಾಡಿ ಇಲ್ಲದಿದ್ದರೆ ರಾಜೀನಾಮೆ ನೀಡಿ ಎಂದು ದಲಿತ ಮುಖಂಡ ಜೆ.ಎನ್​.ರಾಜಸಿಂಹ ಹೇಳಿದರು.

ಮಾದಿಗ ಮಹಾಸಭಾದ ರಾಜ್ಯ ಸಂಚಾಲಕ ಎಸ್​.ಆರ್​.ರಂಗನಾಥ್​ ಮಾತನಾಡಿ, ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಹಮ್ಮಿಕೊಂಡಿರುವ ಕ್ರಾಂತಿಕಾರಿ ಪಾದಯಾತ್ರೆ ಮಾ. 21ರಂದು ಬೆಂಗಳೂರಿನಲ್ಲಿ ಬೃಹತ್​ ಸಮಾವೇಶ ಮಾಡಲಿದೆ. ಈ ಸಮಾವೇಶಕ್ಕು ಮುನ್ನ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿ ಮಾಡಬೇಕು. ಇಲ್ಲದಿದ್ದರೆ ಮುಂದೆ ನಡೆಯುವ ಅನಾಹುತಗಳಿಗೆ ಸರ್ಕಾರವೇ ಹೊಣೆ ಎಂದರು.

ಡಾ.ಬಿ.ಆರ್​. ಅಂಬೇಡ್ಕರ ದಂಡು ಜಿಲ್ಲಾಧ್ಯಕ್ಷ ಎನ್​.ಕುಮಾರ್​, ಪಾದಯಾತ್ರೆಯಲ್ಲಿ ಬಿ.ಆರ್​.ಭಾಸ್ಕರ ಪ್ರಸಾದ್​, ಕೊಟ್ಟ ಶಂಕರ್​, ದಸಂಸ ತಾಲೂಕು ಅಧ್ಯಕ್ಷ ಟೈರ್​ ರಂಗನಾಥ್​, ವಕೀಲ ರಂಗಧಾಮ, ಪಿ.ಬಿ.ನರಸಿಂಹಯ್ಯ, ಕೇಬಲ್​ ರಘುಕುಮಾರ್​, ಬಂಡೆ ಕುಮಾರ, ಕ್ಯಾತಸಂದ್ರ ಮೂರ್ತಿ, ಭರತ ಬೆಲ್ಲದಮಡು, ಗುಮ್ಮನಹಳ್ಳಿ ಮಂಜುನಾಥ್​, ಸಕ್ರ ನಾಗರಾಜು, ಜಯರಾಮಕೃಷ್ಣ, ರವಿಕುಮಾರ್​ ಮತ್ತಿತರರು ಇದ್ದರು.

ಕಾಂಗ್ರೆಸ್​ ಸರ್ಕಾರದ ಶ್ರಾದ್ಧಾಕಾರ್ಯ

ಒಳಮೀಸಲಾತಿ ಕ್ರಾಂತಿಕಾರಿ ಪಾದಯಾತ್ರೆ ವೇಳೆ ಹಿರಿಯೂರಿನಲ್ಲಿ ಕಾಂಗ್ರೆಸ್​ ಸರ್ಕಾರದ ಅಣಕು ಶವಯಾತ್ರೆ ಮಾಡಿದ್ದು, ಮೂರು ದಿನಗಳ ನಂತರ ಶುಕ್ರವಾರ ಕಾಂಗ್ರೆಸ್​ ಸರ್ಕಾರಕ್ಕೆ ಶ್ರಾದ್ಧಾಕಾರ್ಯ ಮಾಡಲಾಯಿತು. ಪಾದಯಾತ್ರೆಯಲ್ಲಿ ಭಾಗವಹಿಸಿರುವ ಹೋರಾಟಗಾರರು ಕೇಶ ಮುಂಡನ ಮಾಡಿಸಿಕೊಂಡು ಪ್ರತಿಭಟನೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net