ಮೇಲುಕೋಟೆಗೆ ಬಂದು ಹರಕೆ ತೀರಿಸಿದ ಮಧ್ಯಪ್ರದೇಶ ಸಿಎಂ: ಏನದು ಹರಕೆ?

MADHYAPRADESH CM
Published on

ಮೇಲುಕೋಟೆ: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಅವರು ಕುಟುಂಬ ಸಮೇತ ಶುಕ್ರವಾರ ಇಲ್ಲಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಚಲುವನಾರಾಯಣಸ್ವಾಮಿಗೆ ಬೆಳ್ಳಿಯ ಪುಟ್ಟ ರಥ ನಿರ್ಮಿಸಿಕೊಡುವುದಾಗಿ ಕ್ಷೇತ್ರದ ಪದಾಧಿಕಾರಿಗಳಿಗೆ ಭರವಸೆ ನೀಡಿದರು.

ಈ ಹಿಂದೆ ಅಧಿಕಾರ ಕಳೆದುಕೊಂಡಿದ್ದಾಗ ಶಿವರಾಜ್ ಸಿಂಗ್ ಕ್ಷೇತ್ರಕ್ಕೆ ಆಗಮಿಸಿ ಚಲುವನಾರಾಯಣಸ್ವಾಮಿಗೆ ಪೂಜೆ ಸಲ್ಲಿಸಿದ್ದರು. ‘‘ಮತ್ತೆ ಅಧಿಕಾರ ಸಿಕ್ಕರೆ ಪುನಃ ಕ್ಷೇತ್ರಕ್ಕೆ ಬಂದು ಪೂಜೆ ಸಲ್ಲಿಸುತ್ತೇನೆ’’ ಎಂದು ಹರಕೆ ಹೊತ್ತಿದ್ದರು. ಈಗ ಅದರಂತೆ ನಡೆದುಕೊಂಡಿದ್ದಾರೆ. ಶಿವರಾಜ್‌ಸಿಂಗ್ ಸುಮಾರು ಹೊತ್ತು ದೇವಸ್ಥಾನದಲ್ಲಿಯೇ ಕಾಲ ಕಳೆದರು. ಪೂಜೆ ಬಳಿಕ ಬೆಟ್ಟದ ಯೋಗಾನರಸಿಂಹ ಸ್ವಾಮಿ ದರ್ಶನಕ್ಕಾಗಿ 265 ಮೆಟ್ಟಿಲುಗಳನ್ನು ಹತ್ತಿದರು.

ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘‘ಮಧ್ಯಪ್ರದೇಶದ ಅಭಿವೃದ್ಧಿ, ಜತೆಗೆ ಜನರ ಕಲ್ಯಾಣಕ್ಕೆ ಮೇಲುಕೋಟೆಯಲ್ಲಿ ಪೂಜೆ ಸಲ್ಲಿಸಿದ್ದೇನೆ’’ ಎಂದರು. ಶಿವರಾಜ್‌ಸಿಂಗ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಸ್ವಾಗತಿಸಿದರು. ಅವರ ಭೇಟಿ ಹಿನ್ನೆಲೆಯಲ್ಲಿ 150ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಇದಲ್ಲದೆ, ಶಿವರಾಜ್‌ಸಿಂಗ್ ಅವರ ಕಡೆಯ ಭದ್ರತಾ ಸಿಬ್ಬಂದಿಯೂ ಇದ್ದರು. ನಂತರ ಅವರು ಮೈಸೂರಿನತ್ತ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net