

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಧಾರ್ಮಿಕ ಶಿಕ್ಷಣದ ಕೊರತೆ ಸಾಮಾಜಿಕ ಅಸ್ಥಿರತೆಗೆ ಕಾರಣವಾಗುತ್ತಿದೆ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ನುಡಿದರು.
ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆಯ ಅಂಗವಾಗಿ ಶುಕ್ರವಾರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಕುಟುಂಬ ವ್ಯವಸ್ಥೆಯಿಂದ ನಾವು ದೂರಾಗುತ್ತಿರುವುದರಿಂದ ನಮ್ಮ ಜೀವನದಲ್ಲೂ ಏರುಪೇರುಂಟಾಗತೊಡಗಿದೆ. ನಮ್ಮ ದೇಶದ ಪರಂಪರೆ, ಶ್ರೇಷ್ಠ ಶಿಕ್ಷಣ ವ್ಯವಸ್ಥೆ ಅನುಸರಿಸಲು ನಾವೆಲ್ಲರು ಮುಂದಾಗಬೇಕು. ಭಕ್ತಿಯ ಮೇರುವಾಗಿದ್ದ ಮದರು ಮಾತೆಗೆ ಒಲಿದ ಮಧೂರು ಮಹಾಗಣಪತಿ ಸಾನ್ನಿಧ್ಯ ಇಂದು ಸಕಲರ ಆರಾಧನಾಲಯವಾಗಿ ತುಳುನಾಡಿನಲ್ಲಿ ಮಹತ್ತರ ಸ್ಥಾನ ಪಡೆದು ಮೆರೆಯುತ್ತಿದೆ. ನಮ್ಮ ಗಳಿಕೆಯ ಒಂದಂಶವನ್ನು ಬಡವರಿಗೆ ಹಾಗೂ ಧರ್ಮ ಕಾರ್ಯಗಳಿಗೆ ಮೀಸಲಿಟ್ಟಾಗ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು.
ಮಯಂಗರ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಟ್ರಸ್ಟಿ ಬಿ.ವಿ.ಕಕ್ಕಿಲ್ಲಾಯ ಅಧ್ಯಕ್ಷತೆ ವಹಿಸಿದ್ದರು. ಕಾವು ಮಠದ ವಿಷ್ಣುಪ್ರಕಾಶ್ ಪಟ್ಟೇರಿ, ಕಣಿಪುರ ಶ್ರೀಗೋಪಾಲಕೃಷ್ಣ ದೇವಸ್ಥಾನದ ಪವಿತ್ರಪಾಣಿ ಡಾ.ವಿಕ್ರಂ ಇರ್ನಿರಾಯ, ಕೆ.ಎಸ್.ಬಿ.ನಿರ್ದೇಶಕ ಸುರೇಂದ್ರ ಕೆ.ಕೂಡ್ಲು ಶ್ರೀ ಗೋಪಾಲಕೃಷ್ಣ ದೇವಾಲಯ ಆಡಳಿತ ಮೊಕ್ತೇಸರ ಕೆ.ಜಿ.ಶಾನುಭಾಗ್, ಮುಳಿಯಾರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮೊಕ್ತೇಸರ ಸೀತಾರಾಮ ಬಳ್ಳುಳ್ಳಾಯ, ಐಲ ಬೋವಿ ಶಾಲೆಯ ಅಧ್ಯಕ್ಷ ಆನಂದ ಕೋಟ್ಲು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಅಶೋಕ್ ರೈ ಕೂಡ್ಲು, ಸತ್ಯನಾರಾಯಣ ತಂತ್ರಿ, ರಾಜೇಶ್ ಮಾಸ್ಟರ್ ಅಗಲ್ಪಾಡಿ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಕೃಷ್ಣಪ್ರಸಾದ ಕೋಟೆಕಣಿ ಸ್ವಾಗತಿಸಿದರು. ರಾಮ್ ಎಲ್ಲಂಗಳ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಡಿ.ದಾಮೋದರ ವಂದಿಸಿದರು.