ಮಧುಗಿರಿ ಕರ್ನಾಟಕಕ್ಕೇ ಮಾದರಿ!: ಸೋಂಕಿತ ಶಿಕ್ಷಕರಿಗೆ ಆತ್ಮಸ್ಥೈರ್ಯ ತುಂಬಲು ಯತ್ನ, ವೆಬಿನಾರ್​ನಲ್ಲಿ ಜಾಗೃತಿ

webinar
Published on

| ವಿಲಾಸ ಮೇಲಗಿರಿ ಬೆಂಗಳೂರು

ಕೋವಿಡ್ ಸೋಂಕಿನಿಂದ ನೂರಾರು ಶಿಕ್ಷಕರು ಮೃತಪಟ್ಟಿದ್ದಾರೆ. ಅನೇಕ ಶಿಕ್ಷಕರ ಸಾವಿಗೆ ಆತ್ಮಸ್ಥೈರ್ಯದ ಕೊರತೆ, ಸೋಂಕಿನ ಬಗ್ಗೆ ತೋರಿದ ಅಸಡ್ಡೆ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದು, ಸಕಾಲಿಕವಾಗಿ ಚಿಕಿತ್ಸೆ ಪಡೆಯದಿರುವುದು, ಸೂಕ್ತ ಚಿಕಿತ್ಸೆ ದೊರೆಯದಿರುವುದು ಕೂಡ ಶಿಕ್ಷಕರ ಸಾವಿಗೆ ಪ್ರಮುಖ ಕಾರಣವಾಗಿವೆ. ಇಂತಹ ಸಂದರ್ಭಗಳನ್ನು ಎದುರಿಸಲು ಮಧುಗಿರಿ ಶೈಕ್ಷಣಿಕ ಜಿಲ್ಲೆ ವಿನೂತನ ಕಾರ್ಯಕ್ರಮ ರೂಪಿಸಿ ಯಶಸ್ಸಿನತ್ತ ದಾಪುಗಾಲಿಟ್ಟಿದೆ.

ಏನಿದು ಕಾರ್ಯಕ್ರಮ?: ಶಿರಾದಲ್ಲಿ ‘ಸ್ಪೂರ್ತಿ’, ಕೊರಟಗೆರೆಯಲ್ಲಿ ’ಶುಭನುಡಿ’, ಮಧುಗಿರಿಯಲ್ಲಿ ‘ಜಾಗೃತಿ’, ಪಾವಗಡದಲ್ಲಿ ‘ಆತ್ಮಬಲ’ ಎಂಬ ಹೆಸರನ್ನಿಟ್ಟುಕೊಂಡು ವೆಬಿನಾರ್ ಮೂಲಕ ಕರೊನಾ ಸೋಂಕಿತ ಶಿಕ್ಷಕ ಮತ್ತು ಅವರ ಕುಟುಂಬಗಳಲ್ಲಿ ಕ್ಷೇತ್ರ ಶಿಕ್ಷಾಧಿಕಾರಿಗಳ ಸಾರಥ್ಯದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಕೋವಿಡ್ ಸೋಂಕಿತರು ಹಾಗೂ ರೋಗದಿಂದ ಗುಣಮುಖರಾದ ಶಿಕ್ಷಕರು, ಈ ವೆಬಿನಾರ್​ನಲ್ಲಿ ನೇರವಾಗಿ ಭಾಗವಹಿಸಿ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ. ಚಿಕಿತ್ಸೆ ಪಡೆಯುವ ಸೋಂಕಿತರು ಆಸ್ಪತ್ರೆ/ಹೋಮ್ ಐಸೋಲೇಷನ್​ನಲ್ಲಿ ಸಮಸ್ಯೆ ಎದುರಿಸುತ್ತಿದ್ದರೆ ತಾಲೂಕು ಮಟ್ಟದಲ್ಲಿ ಬಿಇಒಗಳು, ಜಿಲ್ಲಾ ಮಟ್ಟದಲ್ಲಿ ಪರಿಹಾರ ದೊರಕುವ ಸಮಸ್ಯೆಗಳಾದರೆ ಡಿಡಿಪಿಐ ಸಂಬಂಧಿಸಿದ ಇಲಾಖೆ ಮುಖ್ಯಸ್ಥರ ಗಮನಕ್ಕೆ ತಂದು ಪರಿಹಾರ ಕಲ್ಪಿಸಿಕೊಡುತ್ತಿದ್ದಾರೆ.

ಚಿಕಿತ್ಸೆ ಪಡೆಯುತ್ತಿರುವ ಕುಟುಂಬದವರೂ ಕೂಡ ಈ ವೆಬಿನಾರ್​ನಲ್ಲಿ ಭಾಗವಹಿಸುವುದರಿಂದ ರೋಗಿಯ ಸ್ಥಿತಿಗತಿ ತಿಳಿಯಲು ಸಹಕಾರಿಯಾಗಿದೆ. ಎಂಬಿಬಿಎಸ್, ಎಂಡಿ ಪದವಿ ಪಡೆದಿರುವ ಮತ್ತು ಪಡೆಯುತ್ತಿರುವ ಶಿಕ್ಷಕರ ಮಕ್ಕಳು ಸಹ ಈ ವೆಬಿನಾರ್​ನಲ್ಲಿ ಪಾಲ್ಗೊಂಡು ಚಿಕಿತ್ಸಾ ಪದ್ಧತಿ ಬಗ್ಗೆ ಮಾಹಿತಿ ನೀಡುತ್ತಾರೆ.

7,408 ಶಿಕ್ಷಕರಿಗೆ ಪ್ರಯೋಜನ: ಈ ಶೈಕ್ಷಣಿಕ ಜಿಲ್ಲೆಯಲ್ಲಿ 756 ಪ್ರಾಥಮಿಕ, 681 ಹಿರಿಯ ಪ್ರಾಥಮಿಕ, 291 ಪ್ರೌಢಶಾಲೆ ಸೇರಿ ಒಟ್ಟು 1,728 ಶಾಲೆಗಳಿದ್ದು, 7,408 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅವರು ಹಾಗೂ ಅವರ ಕುಟುಂಬಕ್ಕೂ ವೆಬಿನಾರ್ ಪ್ರಯೋಜನ ದೊರೆಯಲಿದೆ.

ಯೋಗ, ಪ್ರಾಣಾಯಾಮ ಪಾಠ: ಕರೊನಾ ಸೋಂಕಿತರು ಹಾಗೂ ಸೋಂಕಿನಿಂದ ಗುಣಮುಖ ರಾದವರಿಗೆ ಹಾಗೂ ಇತರ ಎಲ್ಲರಿಗೂ ಯೋಗ, ಪ್ರಾಣಾಯಾಮ, ಆಹಾರ ಪದ್ಧತಿ ಹೇಳಿಕೊಡಲಾಗುತ್ತದೆ.

ಪರಿಕಲ್ಪನೆ ರೂಪುಗೊಂಡಿದ್ದು ಹೇಗೆ?: ದಿನ ನಿತ್ಯ ಶಿಕ್ಷಕರ ಸಾವು ಕಚೇರಿ ಕದ ತಟ್ಟುವುದು, ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗದಿರುವುದು, ಶಿಕ್ಷಕರಲ್ಲಿರುವ ಕಾಯಿಲೆ ಬಗ್ಗೆ ತಪ್ಪು ಗ್ರಹಿಕೆಗಳನ್ನು ಮನಗಂಡ ಕೊರಟಗೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾಕರ್ ಇದಕ್ಕೊಂದು ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಿದ್ದಾರೆ. ಇದರ ಯಶಸ್ಸನ್ನು ಮನಗಂಡ ಡಿಡಿಪಿಐ ರೇವಣಸಿದ್ದಪ್ಪ ಮಾರ್ಗದರ್ಶನದಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಎಲ್ಲ ತಾಲೂಕಿನಲ್ಲೂ ಒಂದೊಂದು ಹೆಸರಿನಲ್ಲಿ ಈ ಕಾರ್ಯಕ್ರಮ ನಡೆದುಕೊಂಡು ಬರುತ್ತಿದೆ.

ಕೋವಿಡ್ ಸೋಂಕಿನಿಂದ ಶಿಕ್ಷಕರು ಮರಣ ಹೊಂದುತ್ತಿರುವುದು ನೋವಿನ ಸಂಗತಿ. ಶಿಕ್ಷಕರಿಗೆ ಧೈರ್ಯ ತುಂಬುವ, ಅವರಿಗೆ ಸಹಾಯ ಮಾಡುವ ಮತ್ತು ಉತ್ತಮ ಚಿಕಿತ್ಸೆ ದೊರೆಯುವಂತೆ ಮಾಡುವುದು ತುರ್ತು ಅಗತ್ಯ. ಈ ನಿಟ್ಟಿನಲ್ಲಿ ವೆಬಿನಾರ್ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಹತ್ವದ ಮೈಲಿಗಲ್ಲು. ಇತರ ಜಿಲ್ಲೆಗಳಿಗೂ ಇದು ಮಾದರಿ.

| ಎಂ. ರೇವಣಸಿದ್ದಪ್ಪ ಡಿಡಿಪಿಐ, ಮಧುಗಿರಿ

ನಾನು ಕೂಡ ಮೊದಲ ಅಲೆಯಲ್ಲಿ ಕರೊನಾ ಸೋಂಕಿತನಾಗಿದ್ದೆ. ಆಗ ಅನುಭವಿಸಿದ ಆತಂಕ, ದುಗುಡ ಬೇರೆ ಶಿಕ್ಷಕರು ಅನುಭವಿಸಬಾರದು. ಮೇಲಧಿಕಾರಿಗಳ ನೇತೃತ್ವದಲ್ಲಿ ಇಂತಹ ಕಾರ್ಯಕ್ರಮ ನಡೆದರೆ ಶಿಕ್ಷಕರ ಸಮಸ್ಯೆಗಳು ಪರಿಹಾರ ಕಾಣುತ್ತವೆ ಎಂಬ ದೃಷ್ಟಿ ಇಟ್ಟುಕೊಂಡು ಈ ವೆಬಿನಾರ್ ರೂಪುಗೊಳಿಸಲಾಗಿದೆ.

| ಸುಧಾಕರ್ ಬಿಇಒ, ಕೊರಟಗೆರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net