

ಮಧುಗಿರಿ: ತಾಲೂಕಿನ ಚೆನ್ನಸಾಗರ ಗ್ರಾಮವು ಮಳೆ ನೀರಿನಿಂದ ಮುಳುಗಡೆಯಾಗಿದ್ದು ಅಲ್ಲಿ ಹರಿಯುತ್ತಿರುವ ಜಯಮಂಗಲಿ ನದಿ ನೀರು ಗ್ರಾಮಕ್ಕೆ ನುಗ್ಗಿ ಜನರು ಹೊರ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ.
ಉಪವಿಭಾಗಾಧಿಕಾರಿ ಸೋಮಪ್ಪಕಡಕೋಳ, ತಹಸೀಲ್ದಾರ್ ಸುರೇಶ್ ಆಚಾರ್ ತಂಡ ಭೇಟಿ ನೀಡಿ ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದಾರೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಸಿಇಒ ವಿದ್ಯಾಕುಮಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಕೊರಟಗೆರೆ ತಾಲ್ಲೂಕಿನ ತೀತಾ ಜಲಾಶಯ ತುಂಬಿದ ನಂತರ ಜಯಮಂಗಲಿ ನೀರು ವ್ಯಾಪಕವಾಗಿ ಹರಿದು ಬರುತ್ತಿದ್ದು ಜಯಮಂಗಲಿ ನದಿಯ ನೀರು ಚೆನ್ನಸಾ ಗರದ ಬಳಿ ಸೇತುವೆಯನ್ನು ಮೀರಿ ಅಪಾಯಮಟ್ಟದಲ್ಲಿ ಹರಿಯುತ್ತಿದೆ.
ಜಯಮಂಗಲಿ ನದಿ ಪಾತ್ರದಲ್ಲಿರುವ ಬಹುತೇಕ ಗ್ರಾಮಗಳು ಅಪಾಯದ ಅಂಚಿನಲ್ಲಿದ್ದು ತಾಲ್ಲೂಕು ಆಡಳಿತ ಸ್ಥಳಕ್ಕೆ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮವಹಿಸಿದೆ. ನೀರು ಸರಾಗವಾಗಿ ಹರಿಯುವಂತೆ ಜೆಸಿಬಿಗಳ ಮೂಲಕ ಹಳ್ಳಕೊಳ್ಳಗಳನ್ನು ತೆರವುಗೊಳಿಸಲಾಗುತ್ತಿದೆ.
ಜಯಮಂಗಲಿ ನದಿ ಹರಿಯುವ ಚೆನ್ನ ಸಾಗರ ನಂಜಾಪುರ, ಗಿಡ್ಡಯ್ಯನ ಪಾಳ್ಯ ಹಾಗೂ ಕೋಡಿಗೇನಹಳ್ಳಿ ಭಾಗದ ಜನರಲ್ಲಿ ಪ್ರವಾಹದ ರೀತಿಯಲ್ಲಿ ಹರಿಯುತ್ತಿದ್ದು ಜಲಪ್ರಳಯ ಉಂಟಾಗಿದೆ.
ಎಷ್ಟೋ ವರ್ಷಗಳ ನಂತರ ಮೈದುಂಬಿ ಹರಿಯುತ್ತಿರುವ ಜಯಮಂಗಲಿ ನದಿಯನ್ನು ಸಾರ್ವಜನಿಕರು ತಂಡೋಪತಂಡವಾಗಿ ವೀಕ್ಷಿಸುತ್ತಿದ್ದಾರೆ.