ಶತಕೋಟಿ ಒಡೆಯ ಬಿಜೆಪಿಯ ಎಲ್.ಸಿ.ನಾಗರಾಜು

L.C.Nagraj
Published on

ತುಮಕೂರು: ಮಧುಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿರುವ ಎಲ್.ಸಿ.ನಾಗರಾಜು ಅಧಿಕೃತವಾಗಿ ಘೊಷಿಸಿಕೊಂಡಿರುವ ಕುಟುಂಬದ ಚರ-ಸ್ಥಿರಾಸ್ತಿಯ ಒಟ್ಟು ಮೌಲ್ಯ 117 ಕೋಟಿ ರೂ.,! ಐಎಂಎ ವಂಚನೆ ಪ್ರಕರಣದ ಆರೋಪಕ್ಕೆ ಗುರಿಯಾಗಿ ಅಮಾನತಿನಲ್ಲಿದ್ದ ಕೆಎಎಸ್ ಅಧಿಕಾರಿ ಎಲ್.ಸಿ.ನಾಗರಾಜು ತಮ್ಮ ಹುದ್ದೆಗೆ ನೀಡಿದ್ದ ರಾಜೀನಾಮೆಯನ್ನು ಇತ್ತೀಚೆಗೆ ಸರ್ಕಾರ ಅಂಗೀಕರಿಸಿದ ಹಿನ್ನೆಲೆಯಲ್ಲಿ ರಾಜಕೀಯ ರಂಗಕ್ಕೆ ಪ್ರವೇಶಿಸಿದ್ದಲ್ಲದೆ ಬಿಜೆಪಿ ಟಿಕೆಟ್ ಅನ್ನು ಗಿಟ್ಟಿಸಿಕೊಂಡಿದ್ದರು.

1998 ಕೆಎಎಸ್ ಶ್ರೇಣಿ ಅಧಿಕಾರಿ ಆಗಿದ್ದ ನಾಗರಾಜು ಆಸ್ತಿ ವಿವರದ ಅಫಿಡವಿಟ್‌ನಲ್ಲಿ ಒಟ್ಟು ಕುಟುಂಬದ ಆಸ್ತಿಯ ಮೌಲ್ಯ 117 ಕೋ.ರೂ., ಘೋಷಿಸಿದ್ದಾರೆ. ಎಲ್.ಸಿ.ನಾಗರಾಜು ಅವರ ಪತ್ನಿ ದಿವಂಗತ ನಾಗರತ್ನ, ಹೆಣ್ಣುಮಕ್ಕಳ ಹೆಸರಲ್ಲು ಚರ-ಸ್ಥಿರಾಸ್ತಿ ಇದೆ. ಕುಟುಂಬದ ಒಟ್ಟು ಚರಾಸ್ತಿಯ ಮೌಲ್ಯ 10,12,73,915 ರೂ., ನಷ್ಟಿದೆ. ಇತ್ತೀಚೆಗೆ ಖರಿದೀಸಿರುವ ಫಾರ್ಚೂನರ್ ಸಿಗ್ಮಾ ನಾಗರಾಜು ಹೆಸರಲ್ಲಿದೆ. ಇನ್ನುಳಿದಂತೆ ಪತ್ನಿ ಹೆಸರಲ್ಲಿ ಕಿಯಾ ಕಾರ್ನಿವಾಲ್, ಮಹೀಂದ್ರ ಥಾರ್, ಬಲೋನಾ, ಟಾಟಾ ಗೂಡ್ಸ್ ವಾಹನಗಳಿವೆ.

ಪತ್ನಿ ನಾಗರಾತ್ನ ಮೂಲತಃ ನೆಲಮಂಗಲ ತಾಲೂಕಿನವಾರಿದ್ದು ಮಲ್ಲರಬಾಣವಾಡಿ ಸುತ್ತಮುತ್ತ ಸಾಕಷ್ಟು ಕೃಷಿ ಭೂಮಿ ಹೊಂದಿದ್ದು ಇದರ ಮೌಲ್ಯ 20.76 ಕೋಟಿ. ಕೃಷಿ-ಕೃಷಿಯೇತರ ಭೂಮಿ, 78 ಕೋಟಿ ಮೌಲ್ಯದ ವಾಣಿಜ್ಯ ಕಟ್ಟಡಗಳು, 1.50 ಕೋಟಿ ಮೌಲ್ಯದ ವಾಸದ ಮನೆ ನಾಗರಾಜು ಹೊಂದಿದ್ದಾರೆ. ಪತ್ನಿ ಹೆಸರಲ್ಲಿ 4 ಕೋಟಿ ಮೌಲ್ಯದ ಮನೆ ಇದೆ.

27 ಕೋಟಿ ಸಾಲಗಾರ: ಇಷ್ಟೆಲ್ಲಾ ಆಸ್ತಿವಂತರಾದ ನಾಗರಾಜು ವಿವಿಧ ಬ್ಯಾಂಕ್, ಸಂಸ್ಥೆ ಸೇರಿ 27.84 ಕೋ.ರೂ., ಸಾಲದ ಹೊಣೆ ಹೊಂದಿದ್ದಾರೆ. ಪತ್ನಿ ಹೆಸರಲ್ಲು 5.37 ಕೋಟಿ ರೂ., ಸಾಲ ಮಾಡಿದ್ದಾರೆ. ಸಿಬಿಐ, ಎಸಿಬಿ, ಲೋಕಾಯುಕ್ತ ಅಲ್ಲದೆ, ಇಲಾಖೆ ವಿಚಾರಣೆ, ಜಂಟಿ ಇಲಾಖೆ ವಿಚಾರಣೆ ಸೇರಿ ಕ್ರಿಮಿನಲ್ ಪ್ರಕರಣಗಳು ನಾಗರಾಜು ವಿರುದ್ಧ ಇದ್ದು ಈ ಪ್ರಕರಣಗಳು ತನಿಖಾ ಹಂತದಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net