

ಮದ್ದೂರು: ಪಟ್ಟಣದ ಪುರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಬಜೆಜ್ ಪೂರ್ವಭಾವಿ ಸಭೆ ಪುರಸಭಾಧ್ಯಕ್ಷೆ ಕೋಕಿಲಾ ಅರುಣ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.
ಪುರಸಭಾ ಸದಸ್ಯೆ ಪ್ರಿಯಾಂಕ ಅಪ್ಪುಗೌಡ ಮಾತನಾಡಿ, ಪುರಸಭೆಯ ವ್ಯಾಪ್ತಿಯಲ್ಲಿನ ನಿವೇಶನಗಳ ಆಸ್ತಿ ತೆರಿಗೆಗಳನ್ನು ಸಮರ್ಪಕವಾಗಿ ಪಾವತಿಯಾಗುವಂತೆ ಮಾಡುವುದು ಸೇರಿದಂತೆ ವ್ಯಾಪಾರದ ಲೈಸೆನ್ಸ್‌ಗಳಿಂದ ಹಾಗೂ ಜಾಹೀರಾತು ಫಲಕಗಳನ್ನು ಹಾಕುವ ಸಂಸ್ಥೆಗಳಿಂದ ಶುಲ್ಕಗಳನ್ನು ನಿಗದಿ ಮಾಡುವುದರಿಂದ ಪುರಸಭೆಗೆ ಹೆಚ್ಚು ಆದಾಯ ಬರುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ರಾಮನಗರದಲ್ಲಿ ಚಾಮುಂಡಿ ಉತ್ಸವ ನಡೆಸುವ ಹಾಗೆ ಮದ್ದೂರಿನಲ್ಲಿಯೂ ಗ್ರಾಮದೇವತೆ ಶ್ರೀ ಮದ್ದೂರಮ್ಮನವರ ಹಬ್ಬದಲ್ಲಿ ಆದಾಯ ಕ್ರೋಡೀಕರಿಸಲು ಮದ್ದೂರು ಉತ್ಸವವನ್ನು ನಡೆಸಬೇಕು ಎಂದರು.
ವೈದ್ಯನಾಥಪುರದ ಗ್ರಾಮದ ಶ್ರೀ ವೈದ್ಯನಾಥಪುರ ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷ ವಿ.ಟಿ.ಶಿವರಾಜು ಮಾತನಾಡಿ, ಪಟ್ಟಣದ ಪುರಸಭಾ ವ್ಯಾಪ್ತಿಯ ಯುಜಿಡಿಯ ತ್ಯಾಜ್ಯ ನೀರನ್ನು ಶಿಂಷಾ ನದಿಗೆ ಸರಿಯಾಗಿ ಶುದ್ಧೀಕರಿಸದೆ ಬಿಡುತ್ತಿರುವುದರಿಂದ ದೇವಸ್ಥಾನಕ್ಕೆ ಬರುವ ಭಕ್ತರು ನದಿಯಲ್ಲಿ ಸ್ನಾನ ಮಾಡಲು ತೊಂದರೆಯಾಗುತ್ತಿದೆ ಎಂದರು. ಕೋಕಿಲಾ ಅರುಣ್ ಪ್ರತಿಕ್ರಿಯಿಸಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಪುರಸಭಾ ಮಾಜಿ ಸದಸ್ಯ ಮ.ನ.ಪ್ರಸನ್ನಕುಮಾರ್ ಮಾತನಾಡಿ, ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿನ ಕಂದಾಯ ನಿವೇಶನಗಳಿಗೆ ಸರ್ಕಾರದ ಆದೇಶದನ್ವಯ ಬಿ ಖಾತಾ ಮಾಡುವ ವಿಷಯದಲ್ಲಿ ಹೆಚ್ಚಿನ ಆದ್ಯತೆ ನೀಡುವುದರಿಂದ ಪುರಸಭೆಗೆ ಹೆಚ್ಚಿನ ವರಮಾನ ಬರುವಂತೆ ಕ್ರಮ ಕೈಗೊಳ್ಳಬೇಕು ಎಂದರು.
ಪುರಸಭೆಯು ವ್ಯವಹರಿಸುವ ಬ್ಯಾಂಕ್‌ಗಳಲ್ಲಿ ಸಾಲಸೌಲಭ್ಯಗಳನ್ನು ಪಡೆದು ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆಗಳ ಮೇಲೆ ಕಟ್ಟಡಗಳನ್ನು ನಿರ್ಮಾಣ ಮಾಡುವುದರಿಂದ ಪುರಸಭೆಗೆ ಆದಾಯ ಬಂದು ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಈ ಬಗ್ಗೆ ಪುರಸಭಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಪುರಸಭೆ ವಾಣಿಜ್ಯ ನಿವೇಶನಗಳಿಗೆ ಕೆಲವರು ಅತಿಕ್ರಮವಾಗಿ ಪ್ರವೇಶ ಮಾಡಿ ಪೆಟ್ಟಿ ಅಂಗಡಿ ಸೇರಿದಂತೆ ಇನ್ನಿತರ ಅಂಗಡಿಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಅಂತಹ ಸ್ಥಳಗಳಲ್ಲಿ ಪುರಸಭೆಯಿಂದಲೇ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿದರೆ ಪುರಸಭೆಗೆ ಹೆಚ್ಚಿನ ಅದಾಯ ಬರಲಿದೆ ಎಂದರು.
ಪುರಸಭಾ ವ್ಯಾಪ್ತಿಯಲ್ಲಿರುವ ಸ್ಮಶಾನಗಳ ಸ್ವಚ್ಛತೆ ಹಾಗೂ ಅಭಿವೃದ್ಧಿ, ಕೋಳಿ ಮತ್ತು ಮಾಂಸದ ತಾಜ್ಯಗಳ ಸಮರ್ಪಕ ವಿಲೇವಾರಿ, ಹೆದ್ದಾರಿ ಬದಿಯಲ್ಲಿ ಸ್ವಚ್ಛತೆಗೆ ಆದ್ಯತೆ, ಬೀದಿ ದೀಪಗಳ ನಿರ್ವಹಣೆ, ಒಳ ಚರಂಡಿ ಸಮಸ್ಯೆ ಸರಿಪಡಿಸಲು ಹೆಚ್ಚುವರಿ ವಾಹನ ಸೇರಿದಂತೆ ಇನ್ನಿತರರ ಅಭಿವೃದ್ಧಿ ಕಾರ್ಯಗಳಿಗೆ ಬಜೆಟ್‌ನಲ್ಲಿ ಹಣ ಮೀಸಲಿಡಬೇಕೆಂದು ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಸಲಹೆ ನೀಡಿದರು.
ಸಭೆಯಲ್ಲಿ ಪುರಸಭಾ ಉಪಾಧ್ಯಕ್ಷ ಪ್ರಸನ್ನ, ವ್ಯವಸ್ಥಾಪಕ ಶ್ರೀಧರ್, ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಸದಸ್ಯರು, ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಇದ್ದರು.