ಮಾಚಿಮಂಡ ಒಕ್ಕ ಚಾಂಪಿಯನ್

ಮಾಚಿಮಂಡ ಒಕ್ಕ ಚಾಂಪಿಯನ್
Published on

ವಿರಾಜಪೇಟೆ: ಅರಮೇರಿಯ ಎಸ್‌ಎಂಎಸ್ ವಿದ್ಯಾಪೀಠದ ಶಾಲಾ ಮೈದಾನದಲ್ಲಿ ಬಾಳೆ ಕುಟ್ಟಿರ ಕುಟುಂಬದ ವತಿಯಿಂದ ಆಯೋಜಿಸಿದ್ದ 4ನೇ ವರ್ಷದ ಕೊಡವ ಕುಟುಂಬಗಳ ನಡುವಿನ ಕೇರ್‌ಬಲಿ ನಮ್ಮೆಯಲ್ಲಿ ಕಾವಾಡಿಯ ಮಾಚಿಮಂಡ ಒಕ್ಕ ಚಾಂಪಿಯನ್ ತಂಡವಾಗಿ ಹೊರಹೊಮ್ಮುವ ಮೂಲಕ 50 ಸಾವಿರ ರೂ. ನಗದು ಹಾಗೂ ಟ್ರೋಫಿ ಮುಡಿಗೇರಿಸಿಕೊಂಡಿತು.

ಅಜ್ಜಮಾಡ ಒಕ್ಕ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡು 40 ಸಾವಿರ ರೂ. ನಗದು ಹಾಗೂ ಟ್ರೋಫಿಯನ್ನು ಪಡೆದುಕೊಂಡಿತು. ಅತಿ ರೋಚಕತೆಯಿಂದ ಕೂಡಿದ ಫೈನಲ್ ಪಂದ್ಯ ಹದಿನೈದು ನಿಮಿಷಗಳ ಕಾಲ ನಡೆದು ನೋಡುಗರ ಮೈನವಿರೇಳಿಸುವಂತೆ ಮಾಡಿತು.

ಚಿಯಕ್‌ಪೂವಂಡ ತಂಡ ತೃತೀಯ ಸ್ಥಾನ ಪಡೆದು 30 ಸಾವಿರ ರೂ. ನಗದು ಹಾಗೂ ಟ್ರೋಫಿ, ಚಂಗುಲಂಡ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡು 20 ಸಾವಿರ ರೂ. ನಗದು, ಟ್ರೋಫಿಗೆ ತೃಪ್ತಿ ಪಡಬೇಕಾಯಿತು.

ಮಹಿಳೆಯರ ವಿಭಾಗದಲ್ಲಿ ಕಾಂಡಂಡ ಒಕ್ಕವು ಪುದಿಯೊಕ್ಕಡ ಒಕ್ಕವನ್ನು ಮಣಿಸಿ 50 ಸಾವಿರ ರೂ. ನಗದು ಹಾಗೂ ಟ್ರೋಫಿಯನ್ನು ಪಡೆದುಕೊಂಡಿತು. ಪುಡಿಯೊಕ್ಕಡ ತಂಡ 40 ಸಾವಿರ ರೂ. ನಗದು ಹಾಗೂ ಟ್ರೋಫಿಯೊಂದಿಗೆ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು. ತೃತಿಯ ಸ್ಥಾನವನ್ನು ಐಜೆಟ್ಟಿರ ಒಕ್ಕ ಪಡೆದುಕೊಂಡು 30 ಸಾವಿರ ರೂ. ನಗದು ಹಾಗೂ ಟ್ರೋಫಿ ಪಡೆಯಿತು. ನಾಲ್ಕನೆ ಸ್ಥಾನವನ್ನು ಕೊಚ್ಚೇರ ಒಕ್ಕ 20 ಸಾವಿರ ರೂ. ನಗದು ಹಾಗೂ ಟ್ರೋಫಿಗೆ ತೃಪ್ತಿ ಪಡಬೇಕಾಯಿತು.

ಪಂದ್ಯಾಟದ ನಿರ್ದೇಶಕರಾಗಿ ಪೊನ್ನೋಲತಂಡ ಕಿರಣ್ ಪೊನ್ನಪ್ಪ, ಉಪ ನಿರ್ದೇಶಕರಾಗಿ ಚಟ್ಟಂಗಡ ರವಿ ಸುಬ್ಬಯ್ಯ ತಾಂತ್ರಿಕ ನಿರ್ದೇಶಕರಾಗಿ ಕೊಣಿಯಂಡ ಮಂಜು ಮಾದಯ್ಯ, ತೀರ್ಪುಗಾರರಾಗಿ ಮುಂಡಚಾಡಿರ ಭರತ್, ಪೊನ್ನೊಲತಂಡ ಪ್ರತೀಶ್, ಉಳುವಂಗಡ ಲೋಹಿತ್ ಭೀಮಯ್ಯ ಜಮ್ಮಡ ಗಿಲ್, ಪೊನ್ನೊಲತಂಡ ಆರ್ಯನ್, ಕೊಣಿಯಂಡ ದೀಕ್ಷಿತ್, ಬೇರೆರ ಬೆಳ್ಳಿಯಪ್ಪ ಕಾರ್ಯ ನಿರ್ವಹಿಸಿದರು.

ಕೇರ್‌ಬಲಿ ನಮ್ಮೆಯಲ್ಲಿ 158 ಪುರುಷ ತಂಡ ಹಾಗೂ 124 ಮಹಿಳೆಯರ ತಂಡ ಸೇರಿ ಒಟ್ಟು 282 ಕೌಟುಂಬಿಕ ತಂಡಗಳು ಪಾಲ್ಗೊಂಡಿದ್ದು, ಮುಂದಿನ ಬಾರಿ ಚೀಯಕಪೂವಂಡ ಒಕ್ಕವು ನಾಪೋಕ್ಲುವಿನಲ್ಲಿ ಕ್ರೀಡಾಕೂಟ ನಡೆಸಲಿದೆ.

ಬಾಳೆಕುಟ್ಟಿರ ಕೇರ್ ಬಲಿ ನಮ್ಮೆಯಲ್ಲಿ ಒಟ್ಟು 282 ಒಕ್ಕಗಳು ಪಾಲ್ಗೊಂಡ ಹಿನ್ನೆಲೆಯಲ್ಲಿ ಹಗ್ಗಜಗ್ಗಾಟ ಕ್ರೀಡೆಯಲ್ಲಿ ಹೆಚ್ಚು ತಂಡಗಳು ಭಾಗಿ ಎಂದು ಕರ್ನಾಟಕ ಬುಕ್ ಆಫ್ ರೆಕಾರ್ಡ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೀರ್ ಅವರು ಬಾಳೆಕುಟ್ಟಿರ ಕೇರ್ ಬಲಿ ನಮ್ಮೆಯನ್ನು ಕರ್ನಾಟಕ ಬುಕ್‌ಆಫ್‌ರೆಕಾರ್ಡ್‌ಗೆ ಸೇರ್ಪಡೆಗೊಳಿಸಿದರು.

ಬಾಳೆಕುಟ್ಟಿರ ಕುಟುಂಬದ ಅಧ್ಯಕ್ಷ ಮಂದಣ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೊಡಗು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ದೇವಣಗೇರಿ ವಿಎಸ್‌ಎಸ್‌ಎನ್ ಅಧ್ಯಕ್ಷ ಮೂಕೊಂಡ ಶಕಿ ಸುಬ್ರಮಣಿ, ಹಗ್ಗಾಜಗ್ಗಾಟ ಆಕಾಡೆಮಿ ಅಧ್ಯಕ್ಷ ಪೊನ್ನೊಳತಂಡ ಕಿರಣ್ ಪೊನ್ನಪ್ಪ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಚೀಯಕಪೂವಂಡ ಅಪ್ಪಚ್ಚು, ಬಾಳೆಕುಟ್ಟಿರ ಅಯ್ಯಪ್ಪ, ಸಮಾಜ ಸೇವಕ ಬಾಳೆಕುಟ್ಟಿರ ನರಜಪ್ಪ, ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net