ಸಾಮಾಜಿಕ ಪರಿವರ್ತನೆಗೆ ಮಾಚಿದೇವರ ಕೊಡುಗೆ ಅಪಾರ

ಸಾಮಾಜಿಕ ಪರಿವರ್ತನೆಗೆ ಮಾಚಿದೇವರ ಕೊಡುಗೆ ಅಪಾರ
Published on

ಪಿರಿಯಾಪಟ್ಟಣ: ಸಾಮಾಜಿಕ ಪರಿವರ್ತನೆ ಮತ್ತು ಸಾಹಿತ್ಯದ ಪರಿವರ್ತನೆಗೆ ಮಡಿವಾಳ ಮಾಚಿದೇವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಉಪನ್ಯಾಸಕ ಪುಟ್ಟಮಾದಯ್ಯ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಾತಿ, ಮತ, ಲಿಂಗಗಳ ಭೇದವನ್ನು ತಿರಸ್ಕರಿಸಿದ ಬಸವಣ್ಣನವರ ಸಾಮಾಜಿಕ ಕ್ರಾಂತಿಗೆ ತಮ್ಮನ್ನು ತೊಡಗಿಸಿಕೊಂಡು ಮಡಿವಾಳ ಮಾಚಿದೇವರು ಕ್ರಾಂತಿಯೋಗಿಯಾಗಿ ಸಮಾಜದ ಬದಲಾವಣೆಗಾಗಿ ತೊಡಗಿಸಿಕೊಂಡರು ಎಂದರು.

ಸಾಮಾಜಿಕ ಕ್ರಾಂತಿಯ ದಾರ್ಶನಿಕರಲ್ಲಿ ಮಡಿವಾಳ ಮಾಚಿದೇವರ ಕಾಯಕನಿಷ್ಠೆ ಮಹತ್ವದ್ದಾಗಿದ್ದು, ವಚನ ಸಾಹಿತ್ಯದ ಹಸ್ತ ಪ್ರತಿಗಳನ್ನು ರಕ್ಷಣೆ ಮಾಡುವ ಜವಾಬ್ದಾರಿಯನ್ನು ಹೊಂದಿದ್ದ ಇವರು ಬಸವಣ್ಣನವರು ನಿರ್ಮಿಸಿದ್ದ ಅನುಭವ ಮಂಟಪದಲ್ಲಿಯೂ ಕೂಡ ಪ್ರಮುಖ ಪಾತ್ರವಹಿಸಿದ್ದರು ಎಂದರು. ಕ್ರಾಂತಿಯೋಗಿ ಬಸವಣ್ಣ ಅವರ ಅನುಭವ ಮಂಟಪವೇ ಇಂದಿನ ಪಾರ್ಲಿಮೆಂಟರಿ ಪದ್ಧತಿಯನ್ನು ಹೊಂದಿತ್ತು ಎಂದರೆ ತಪ್ಪಾಗಲಾರದು, ಪ್ರತಿಯೊಬ್ಬರೂ ಮಡಿವಾಳ ಮಾಚಿದೇವರ ತತ್ವ ಆದರ್ಶಗಳನ್ನು ಪಾಲಿಸಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಪ್ರಸನ್ನ ಮಾತನಾಡಿ, ಸಮಾಜದ ಸುಧಾರಣೆಗೆ ಶ್ರಮಿಸಿದ ಪ್ರತಿಯೊಬ್ಬ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾದಲ್ಲಿ ಮಾತ್ರ ಸಾಮಾಜಿಕ ಸುಧಾರಣೆ ಸಾಧ್ಯ ಎಂದರು. ಪ್ರತಿಯೊಬ್ಬರಿಗೂ ಶಿಕ್ಷಣದ ಅನಿವಾರ್ಯತೆ ಇದ್ದು ಉನ್ನತ ಮಟ್ಟದ ಶೈಕ್ಷಣಿಕ ತರಬೇತಿಗೆ ಮಕ್ಕಳನ್ನು ಸೇರಿಸಬೇಕು ಇದಕ್ಕಾಗಿ ಸರ್ಕಾರ ಸಾಕಷ್ಟು ಸಹಕಾರ ಮತ್ತು ಸವಲತ್ತುಗಳನ್ನು ನೀಡುತ್ತಿದೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಶಿರಸ್ತೆದಾರ್ ಶಕೀಲಾ ಬಾನು, ತಾಲೂಕು ಮಡಿವಾಳ ಸಮಾಜದ ಗೌರವಾಧ್ಯಕ್ಷ ಕೃಷ್ಣಶೆಟ್ಟಿ, ಅಧ್ಯಕ್ಷ ಮಾದೇಶ್ ಕುಮಾರ್, ಉಪಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ವೆಂಕಟೇಶ್, ಸಹ ಕಾರ್ಯದರ್ಶಿ ಕೆ.ಎಸ್.ಗಣೇಶ್, ಮುಖಂಡರಾದ ರಾಜ ಶೆಟ್ಟಿ, ಪ್ರದೀಪ್, ವಸಂತ, ಸುರೇಶ, ರಾಜೇಶ್, ಸ್ವಾಮಿ, ಶಿವಣ್ಣ ಶೆಟ್ಟಿ, ಪ್ರಸನ್ನ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net