ಎಂ.ಶಿವರ ಪಿಎಸಿಸಿಎಸ್ ಆಡಳಿತ ಜೆಡಿಎಸ್ ತೆಕ್ಕೆಗೆ

20 CRP-2 A.
Published on

ಚನ್ನರಾಯಪಟ್ಟಣ: ತಾಲೂಕಿನ ಬಾಗೂರು ಹೋಬಳಿ, ಎಂ.ಶಿವರ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ 11 ನಿರ್ದೇಶಕ ಸ್ಥಾನದ ಪೈಕಿ 9 ಕ್ಷೇತ್ರಗಳಲ್ಲಿ ಜೆಡಿಎಸ್ ಬೆಂಬಲಿತರು ಗೆಲ್ಲುವ ಮೂಲಕ ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ.


ಎಂ.ಶಿವರ ಕೃಷಿಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಹಕಾರ ಇಲಾಖೆ ಭಾನುವಾರ ಚುನಾವಣೆ ನಡೆಸಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತರು ಚುನಾವಣೆ ಆಖಾಡದಲ್ಲಿದ್ದು, 11 ನಿರ್ದೇಶಕರ ಸ್ಥಾನಗಳ ಪೈಕಿ ಸಾಲಗಾರರಲ್ಲದ ಒಂದು ಕ್ಷೇತ್ರ, ಸಾಲಗಾರರ ಕ್ಷೇತ್ರದಿಂದ 10 ನಿರ್ದೇಶಕರ ಆಯ್ಕೆಗೆ ನಡೆದ ಚುನಾವಣೆ ಜಿದ್ದಾಜಿದ್ದಿಯಿಂದ ಕೂಡಿತ್ತು. ಭಾನುವಾರ ಚುನಾವಣೆ ನಡೆದು, ಅಂದೇ ಹೊರಬಿದ್ದ ಫಲಿತಾಂಶದಲ್ಲಿ ಸಾಲಗಾರರಲ್ಲದ ಕ್ಷೇತ್ರದಿಂದ ಸಂಘದ ಹಾಲಿ ಅಧ್ಯಕ್ಷ ಅನಿಲ್‌ಕುಮಾರ್ ಅವರು ತಮ್ಮ ಪ್ರತಿಸ್ಪರ್ಧಿ ಮಂಜೇಗೌಡರ ವಿರುದ್ಧ ಗೆದ್ದು ಬೀಗಿದರೆ, ಜೆಡಿಎಸ್ ಬೆಂಬಲಿತರಾಗಿ ವೆಂಕಟರಾಮು, ಪುರುಷೋತ್ತಮ, ಶಂಕರೇಗೌಡ, ರಾಮಕೃಷ್ಣ, ರಮೇಶ್, ಶಂಕರಯ್ಯ, ಜಯಮ್ಮ ಮತ್ತು ಸರೋಜಮ್ಮ ಚುನಾಯಿತರಾದರು.


ಕಾಂಗ್ರೆಸ್ 2 ಸ್ಥಾನಗಳಲ್ಲಿ ರವಿ ಹಾಗೂ ಬೆಂಬಲಿತ ಇಂದಿರಾ ಕ್ಯಾಂಟೀನ್ ಗುತ್ತೀಗೆದಾರ ತಿಮ್ಮೇಗೌಡ 1 ಮತಗಳ ಅಂತರದಿಂದ ಗೆದ್ದು ನಿರ್ದೇಶಕರಾದದ್ದು ವಿಶೇಷ.


ಚುನಾವಣಾಧಿಕಾರಿಯಾಗಿ ವಾಸಿಂ ಕರ್ತವ್ಯ ನಿರ್ವಹಿಸಿದರು.
ಆಡಳಿತದ ಚುಕ್ಕಾಣಿ ಇಡಿಯಲಿರುವ ಜೆಡಿಎಸ್ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸತತ 4ನೇ ಬಾರಿಗೆ ನಿರ್ದೇಶರಾಗಿ ಆಯ್ಕೆಯಾಗಿರುವ ಸಾಲಗಾರರಲ್ಲದ ಕ್ಷೇತ್ರದ ಅಭ್ಯರ್ಥಿ ಅನಿಲ್‌ಕುಮಾರ್ ಅವರನ್ನು ಅವರ ಅಭಿಮಾನಿಗಳು, ಸ್ನೇಹಿತರು, ಷೇರುದಾರರು ಹೊತ್ತು ಕುಣಿದು ಸಂಭ್ರಮ ಆಚರಿಸಿದರು.


ನೂತನ ನಿರ್ದೇಶಕ ಅನಿಲ್‌ಕುಮಾರ್ ಮಾತನಾಡಿ, ಸೊಸೈಟಿಯಿಂದ ಎಂ.ಶಿವರ ಭಾಗದ ಸುತ್ತಮುತ್ತಲ ರೈತರ ಹಿತ ಕಾಯುವ ಕೆಲಸವನ್ನು ಕ್ಷೇತ್ರದ ಶಾಸಕರಾದ ಬಾಲಕೃಷ್ಣ ಅವರ ನೇತೃತ್ವದಲ್ಲಿ ಮಾಡುತ್ತಿದ್ದು, ಸೊಸೈಟಿಯಿಂದ ಇದುವರೆವಿಗೂ 975 ಷೇರುದಾರರಿಗೆ 9 ಕೋಟಿ ರೂ.ಸಾಲ ನೀಡಲಾಗಿದೆ. ಇದರೊಂದಿಗೆ 1.5 ಕೋಟಿ ರೂ.ಗಳ ಮಧ್ಯಮಾವಧಿ ಸಾಲ, ಸ್ತ್ರೀ ಶಕ್ತಿ ಗುಂಪುಗಳಿಗೆ 2 ಕೋಟಿ ರು.ಸಾಲ ನೀಡುವ ಮೂಲಕ ಜನರ ಕಷ್ಟ, ನೋವುಗಳಿಗೆ ಸ್ಪಂದಿಸಲಾಗಿದೆ ಎಂದರು.


ಇದೇ ವೇಳೆ ಎಲ್ಲ ನಿರ್ದೇಶಕರ ಗೆಲುವಿಗೆ ಕಾರಣಕರ್ತರಾದ ಶಾಸಕ ಸಿ.ಎನ್.ಬಾಲಕೃಷ್ಣರ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net