

ಬೆಳಗಾವಿ: ಇಲ್ಲಿನ ಲೋಕಸಭಾ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರಿಗೆ ಸೋಮವಾರ ಕರೊನಾ ಸೋಂಕು ದೃಢವಾಗಿದೆ. ಯಾವುದೇ ರೋಗ ಲಕ್ಷಣವಿಲ್ಲದೆ ಹಿನ್ನೆಲೆಯಲ್ಲಿ ಅವರು ಮನೆಯಲ್ಲೇ ಕ್ವಾರಂಟೈನ್ ಆಗಿರುವುದಾಗಿ ತಿಳಿಸಲಾಗಿದೆ.
ಈ ವಿಚಾರವಾಗಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕೋವಿಡ್ ತಪಾಸಣೆಗೆ ಒಳಪಟ್ಟಾಗ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ಆದರೆ ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ವೈದ್ಯರ ಸಲಹೆ ಮೇರೆಗೆ ಹೋಂ ಕ್ವಾರೈಂಟೈನ್ ಆಗುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಅವರ ಜತೆ ಸಂಪರ್ಕದಲ್ಲಿದ್ದವರಿಗೆ ಕರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆಯೂ ತಿಳಿಸಿದ್ದಾರೆ.
ಕಳೆದ ವರ್ಷ ಮಂಗಳಾ ಅವರ ಪತಿ, ಕೇಂದ್ರ ಸಚಿವ ಸುರೇಶ್ ಅಂಗಡಿಯವರು ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಕರೊನಾ ಸೋಂಕಿನಿಂದಾಗಿ ಕೊನೆಯುಸಿರೆಳೆದಿದ್ದರು. ಅದಾದ ನಂತರ ಬೆಳಗಾವಿ ಲೋಕಸಭಾ ಕ್ಷೇತ್ರ ಖಾಲಿ ಉಳಿದಿತ್ತು. ಇತ್ತೀಚೆಗಷ್ಟೇ ಕ್ಷೇತ್ರದ ಚುನಾವಣೆ ನಡೆದಿದ್ದು, ಅದರಲ್ಲಿ ಮಂಗಳಾ ಬಿಜೆಪಿ ಪರವಾಗಿ ಕಣಕ್ಕಿಳಿದಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. (ಏಜೆನ್ಸೀಸ್)