

ಚಿಂತಾಮಣಿ: ನಗರದ ಎಂ.ಜಿ. ರಸ್ತೆಯ ಪಿಸಿಆರ್ ಕಾಂಪ್ಲೆಕ್ಸ್ ಎದುರು ಸೌಮ್ಯ ಟೆಕ್ಸ್‌ಟೈಲ್ಸ್, ಅಭಿಲಾಷ್ ಟ್ರೇಡರ್ಸ್ ಮತ್ತು ಸಿದ್ದಾರ್ಥ ಟೆಕ್ಸ್‌ಟೈಲ್ಸ್ ಮಳಿಗೆಗಳ ಮೇಲ್ಛಾವಣಿಗೆ ಅಳವಡಿಸಿದ್ದ ತಗಡಿನ ಶೀಟ್‌ಗಳನ್ನು ಕತ್ತರಿಸಿ ಕಳವು ಮಾಡಿರುವ ಘಟನೆ ಸೋಮವಾರ ರಾತಿರ ನಡೆದಿದೆ.
ಈ ಮೂರು ಅಂಗಡಿಗಳ ಮೇಲ್ಛಾವಣಿಯ ಶೀಟ್‌ಗಳನ್ನು ಕತ್ತರಿಸಿ ಒಳನುಗ್ಗಿರುವ ಕಳ್ಳರು, ಜಾಲಾಡಿ ಬಗ್ಗೆ ಮತ್ತಿತರ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದಲ್ಲದೇ ಅಂಗಡಿಯಲ್ಲಿದ್ದ ನಗದು, ಬಟ್ಟೆ ಮತ್ತು ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ ಎಂದು ಈ ಅಂಗಡಿಗಳ ಮಾಲೀಕರಾದ ಎನ್.ವಿ.ವೆಂಕಟೇಶ್, ಎಂ.ಅರ್.ರಾಜೇಂದ್ರಬಾಬು ಮತ್ತು ಕೆ.ವಿ. ಅಶ್ವತ್ಥನಾರಾಯಣಗುಪ್ತ ಎಂಬುವರು ನೀಡಿರುವ ದೂರಿನ ಆಧಾರದಲ್ಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜ.5ರಂದು ನಗರದ ಎನ್.ಆರ್. ಬಡಾವಣೆಯ ಮನೆಯೊಂದರ ಬೀಗ ಮುರಿದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿತ್ತು, ಜ.6ರಂದು 6ಕ್ಕೂ ಹೆಚ್ಚು ಅಂಗಡಿಗಳ ಶೆಟರ್ ಮುರಿದು ಕಳವು ಮಾಡಲಾಗಿತ್ತು, ಈಗ ಎಂ.ಜಿ. ರಸ್ತೆ ಮೂರು ಅಂಗಡಿಗಳಲ್ಲಿ ಕಳವು ನಡೆದಿದ್ದು, ಅಂಗಡಿಗಳ ಮಾಲೀಕರು ನಾಗರಿಕರ ಆತಂಕಕ್ಕೆ ಕಾರಣವಾಗಿದೆ.
ಇತ್ತೀಚೆಗೆ ನಗರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರಾದ್ಯಂತ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದು ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಳ್ಳರ ಪತ್ತೆಗೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆಯೇ ಕಾದುನೋಡಬೇಕಿದೆ.