ಜಾನುವಾರುಗಳಿಗೆ ‘ಚರ್ಮಗಂಟು’ ಕಾಟ

10-10-bidadi-1
Published on

ಚೇತನ್ ಚಕ್ಕೆರೆ ಬಿಡದಿ

ಜಾನುವಾರುಗಳಿಗೆ ಸಿಂಹಸ್ವಪ್ನದಂತೆ ಕಾಡಿದ್ದ ಚರ್ಮಗಂಟು ರೋಗ ಮತ್ತೆ ಕಾಣಿಸಿಕೊಂಡಿದೆ. ಒಂದು ಕಡೆ ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ಈ ರೋಗ ವ್ಯಾಪಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೆಳೆಗಳ ಇಳುವರಿ ಕಡಿಮೆಯಾಗಿರುವುದರ ಜತೆಗೆ ಹೈನುಗಾರಿಕೆಗೂ ಹಿನ್ನಡೆಯಾಗುವ ಆತಂಕ ರೈತರದ್ದಾಗಿದೆ.

ಕಳೆದ ವರ್ಷ ರಾಮನಗರ ಜಿಲ್ಲೆಯಲ್ಲೇ ಮೊದಲ ಬಾರಿಗೆ ಬಿಡದಿಯ ಗಾಣಕಲ್ ಗ್ರಾಮದಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿತ್ತು. ಇದೀಗ ಮತ್ತೆ ಬಿಡದಿಯ ಬಾನಂದೂರು ಗೊಲ್ಲಹಳ್ಳಿಯಲ್ಲಿ ಎರಡು ರಾಸುಗಳಲ್ಲಿ ಈ ಮಾರಕ ರೋಗ ಪತ್ತೆಯಾಗಿದೆ. ಕಳೆದ ವರ್ಷ ಈ ರೋಗಕ್ಕೆ ನೂರಾರು ಜಾನುವಾರುಗಳು ಮೃತಪಟ್ಟಿದ್ದವು. ತದನಂತರ ಕ್ರಮೇಣ ರೋಗ ನಿಯಂತ್ರಣಕ್ಕೆ ಬಂದಿತ್ತು. ಆದರೆ ಮತ್ತೆ ರೋಗ ಕಾಣಿಸಿಕೊಂಡಿರುವುದು ರೈತರ ನಿದ್ದೆ ಗೆಡಿಸಿದೆ. ಮನುಷ್ಯರಿಗೆ ಕರೋನಾ ವೈರಸ್ ಕಾಡಿದಂತೆ ಚರ್ಮಗಂಟು ಜಾನುವಾರುಗಳನ್ನು ಬಿಟ್ಟು ಬಿಡದೆ ಬಾಧಿಸುತ್ತಿದೆ.

ಸಾಂಕ್ರಾಮಿಕ ರೋಗ

ಚರ್ಮಗಂಟು ರೋಗ ಜಾನುವಾರುಗಳಲ್ಲಿ ಸಾಂಕ್ರಾಮಿಕವಾಗಿದೆ. ರೋಗ ತಗುಲಿದ ಜಾನುವಾರುಗಳನ್ನು ಕಚ್ಚಿದ ಸೊಳ್ಳೆ, ಉಣ್ಣೆ, ನೊಣ ಹಾಗೂ ವಿವಿಧ ಕೀಟಗಳು ಆರೋಗ್ಯವಂತ ಜಾನುವಾರುಗಳನ್ನು ಕಚ್ಚಿದರೆ ಅವುಗಳಿಗೂ ರೋಗ ಹರಡುತ್ತದೆ. ಹಾಗಾಗಿ ರೋಗ ಕಾಣಿಸಿಕೊಂಡಿರುವ ಗೊಲ್ಲಹಳ್ಳಿಯಲ್ಲೂ ರೋಗ ತಗುಲಬಹುದೆಂಬ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ.

ಎರಡು ರಾಸುಗಳಲ್ಲಿ ಪತ್ತೆ

ಬಾನಂದೂರು ಗೊಲ್ಲಹಳ್ಳಿ ಗ್ರಾಮದಲ್ಲಿ ಎರಡು ಸೀಮೆ ಹಸುಗಳಲ್ಲಿ ಈ ರೋಗ ಪತ್ತೆಯಾಗಿದೆ. ಬಮುಲ್ ವೈದ್ಯರಿಂದ ನಿರಂತರವಾಗಿ ರೋಗಪೀಡಿತ ಹಸುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ಹಸುಗಳ ಮೈಯಲ್ಲಿ ಸಣ್ಣ ಸಣ್ಣ ಗಂಟುಗಳು ಕಾಣಿಸಿಕೊಂಡಿವೆ. ರೋಗ ಕಾಣಿಸಿಕೊಳ್ಳುತ್ತಿದ್ದಂತೆ ರಾಸುಗಳ ಮಾಲೀಕರು ವೈದ್ಯರನ್ನು ಸಂಪರ್ಕ ಮಾಡಿದ್ದು ಚಿಕಿತ್ಸೆ ಕೊಡಿಸಿದ್ದಾರೆ.

ಕಳೆದ ವರ್ಷ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡು ನೂರಾರು ರಾಸುಗಳು ಮೃತಪಟ್ಟಿದ್ದವು. ಕಾಲಕ್ರಮೆಣ ಈ ರೋಗ ನಿಯಂತ್ರಣಕ್ಕೆ ಬಂದಿತ್ತು. ಆದರೆ ಈಗ ಮತ್ತೆ ಕಾಣಿಸಿಕೊಳ್ಳುತ್ತಿದೆ. ರೋಗಪೀಡಿತ ಹಸುವನ್ನು ಕಾಪಾಡಿಕೊಳ್ಳುವುದು ಕಷ್ಟದ ಕೆಲಸವಾಗಿದೆ. ಅದರಲ್ಲೂ ಸೀಮೆ ಹಸುಗಳಿಗೆ ಬಹು ಬೇಗ ರೋಗ ತಗಲುತ್ತಿದೆ. ಕೂಡಲೇ ಪಶು ವೈದ್ಯ ಇಲಾಖೆ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು.

ನಂಜುಂಡಿ, ಬಾನಂದೂರು

ಇಟ್ಟಮಡು ಪಶು ವೈದ್ಯಕೀಯ ಆಸ್ಪತ್ರೆ ಮಿತಿಯಲ್ಲಿನ ಯಾವುದೇ ಗ್ರಾಮಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿರುವ ಮಾಹಿತಿ ಇಲ್ಲ. ಕಳೆದ ವರ್ಷ ಕಾಣಿಸಿಕೊಂಡಿತ್ತು. ಲಸಿಕೆ ಹಾಕಲಾಗಿತ್ತು. ಗೊಲ್ಲಹಳ್ಳಿಯಲ್ಲಿ ರೋಗ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುವುದು.ಡಾ.ಪ್ರವೀಣ್, ಪಶು ವೈದ್ಯ, ಇಟ್ಟಮಡು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net