

*ನಿರಾಶ್ರಿತರ ಮೊಗದಲ್ಲಿ ಆಶಾಭಾವನೆ
*ಎರಡು ಕಡೆ ಸ್ಥಳ ಪರಿಶೀಲಿಸಿರುವ ಜಿಲ್ಲಾಧಿಕಾರಿ ಡಿಸಿ ಯಶವಂತ್ ವಿ. ಗುರುಕರ್
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಸೂರಿಲ್ಲದವರಿಗೆ ಸೂರು, ನೆಲೆ ಇಲ್ಲದವರಿಗೆ ನಿವೇಶನ ನೀಡುವ ಕಾರ್ಯಕ್ರಮಕ್ಕೆ ಅಧಿಕಾರಿಗಳು ಮುಂದಡಿ ಇಟ್ಟಿರುವ ಹಿನ್ನೆಲೆಯಲ್ಲಿ ನಿರಾಶ್ರಿತರ ಮೊಗದಲ್ಲಿ ಆಶಾಭಾವನೆ ಮೂಡಿದೆ.
ಹೌದು.., ತಾಲೂಕಿನ ಜನರ ಸಮಸ್ಯೆ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಜೂ.24 ರಿಂದ ಜು.3 ರವರೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತಾಲೂಕಿನ 9 ಸ್ಥಳಗಳಲ್ಲಿ ಬೃಹತ್ ಜನಸ್ಪಂದನ ಕಾರ್ಯಕ್ರಮ ನಡೆಸಿದ್ದರು. ಈ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಸೇರಿ ವಿಧಾನ ಪರಿಷತ್ ಸದಸ್ಯರು ಸಾಥ್ ನೀಡಿದರು. ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ಎಂಬ ೋಷವಾಕ್ಯದ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಅರ್ಜಿಗಳು ಸಲ್ಲಿಸಿದ್ದರು. ಅದರಲ್ಲಿ ನಿವೇಶನ ಹಾಗೂ ಮನೆಗೆ ಸಂಬಂಧಿಸಿದ ಅರ್ಜಿಗಳೇ ಹೆಚ್ಚಾಗಿದ್ದವು. ಈಗ ನಿವೇಶನ ನೀಡುವ ಸಲುವಾಗಿ ಆರಂಭಿಕ ಯೋಜನೆ ಪ್ರಾರಂಭವಾಗುತ್ತಿರುವುದು ಅರ್ಜಿದಾರರಲ್ಲಿ ಸಂತಸ ತರಿಸಿದೆ.
ತಾಲೂಕಿನ ಹುಣಸನಹಳ್ಳಿ, ಅಕ್ಕೂರು ಹೊಸಹಳ್ಳಿ, ಬೇವೂರು, ತಿಟ್ಟಮಾರನಹಳ್ಳಿ, ಮತ್ತೀಕೆರೆ, ಅರಳಾಳುಸಂದ್ರ, ಸುಣ್ಣಘಟ್ಟ ಹಾಗೂ ನಗರದ ಪ್ರದೇಶದ ಕೋಟೆ, ಪ್ಹರಾ ಶಾಲಾ ಆವರಣ ಸೇರಿ ಒಟ್ಟು 9 ಕಡೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಕಾರ್ಯಕ್ರಮದಲ್ಲಿ ಅಹವಾಲುಗಳ ಸುರಿಮಳೆಯೇ ಸುರಿದಿತ್ತು.
ತಾಲೂಕಿನ ಒಟ್ಟು 9 ಕಡೆ ನಡೆದ ಜನಸ್ಪಂದನ ಸಭೆಯಲ್ಲಿ ಒಟ್ಟು 22,098 ಅರ್ಜಿಗಳು ಸಲ್ಲಿಕೆಯಾಗಿದ್ದವು. ಜನಸ್ಪಂದನ ಸಭೆ ಮುಗಿದ ನಂತರವೂ ತಾಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಪ್ರತ್ಯೇಕವಾದ ಕೌಂಟರ್ ತೆರೆಯಲಾಗಿತ್ತು. ಈ ಅರ್ಜಿಗಳ ಪೈಕಿ ಬಹುತೇಕ ವಸತಿ ಹಾಗೂ ನಿವೇಶನ ಕೋರುವವರ ಅರ್ಜಿಯೇ ಹೆಚ್ಚು ಎಂಬುದು ವಿಶೇಷ. ನಮಗೆ ಮನೆ ಇಲ್ಲ ಹಾಗೂ ನಿವೇಶನ ಇಲ್ಲ ಎಂದು ನಗರ ಪ್ರದೇಶದಲ್ಲಿ 7,755 ಮಂದಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ 11,800 ಮಂದಿ ಅರ್ಜಿ ಸಲ್ಲಿಸಿದ್ದರು.
ಎಲ್ಲ ಸಭೆಗಳಲ್ಲೂ ಮನೆ ಹಾಗೂ ನಿವೇಶನದ ಬಗ್ಗೆ ಚರ್ಚೆಗಳು ಸಾಮಾನ್ಯವಾಗಿದ್ದವು.
ಈ ವಿಚಾರವನ್ನು ಮನಗಂಡ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಗ್ರಾಮಗಳಲ್ಲೂ ಸರ್ಕಾರಿ ಜಮೀನು ಗುರುತಿಸಿ ನಿವೇಶನ ಹಾಗೂ ಮನೆ ನೀಡುವ ಭರವಸೆ ನೀಡಿದರು. ಸರ್ಕಾರಿ ಜಮೀನು ಇಲ್ಲದ ಕಡೆ ಖಾಸಗಿ ಜಮೀನು ಖರೀದಿಸಲು ಅಧಿಕಾರಿಗಳಿಗೆ ಸೂಚಿಸಿದರು. ಎಲ್ಲ ಸಭೆಗಳಲ್ಲೂ ನಿವೇಶನ ನೀಡುವ ವಾಗ್ದಾನ ನೀಡಿದ್ದರು. ಇದು ವ್ಯಾಪಕ ಟೀಕೆಗೂ ಕಾರಣವಾಗಿತ್ತು. ಕೇವಲ ಉಪಚುನಾವಣೆಗಾಗಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ಟೀಕೆ ಕೇಳಿಬಂದಿತು.
ಜನಸ್ಪಂದನ ಸಭೆಗಳಲ್ಲಿ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿಗೆ ಈಗಾಗಲೇ ಹಲವು ಸಭೆಗಳು ನಡೆಯುತ್ತಿದ್ದು, ಇದರ ಮಧ್ಯೆ ಗ್ರಾಮಗಳ ಸಮೀಪವಿರುವ ಸರ್ಕಾರಿ ಜಮೀನುಗಳನ್ನು ಗುರುತಿಸುವ ಕೆಲಸವನ್ನು ತಾಲೂಕು ಆಡಳಿತ ಆರಂಭಿಸಿತ್ತು. ನಿವೇಶನ ಹಂಚಿಕೆ ವಿಚಾರವಾಗಿ ಬುಧವಾರ ನೂತನ ಡಿಸಿ ಯಶವಂತ್ ವಿ. ಗುರುಕರ್ ಎರಡು ಕಡೆ ಸ್ಥಳ ಪರಿಶೀಲನೆ ನಡೆಸಿರುವುದು ಅರ್ಜಿದಾರರಲ್ಲಿ ಹೊಸ ಆಶಾಭಾವನೆ ಮೂಡಲು ಕಾರಣವಾಗಿದೆ.
ತಾಲೂಕಿನ ತಗಚಗೆರೆ ಗ್ರಾಮದ ಸರ್ವೇ ನಂ. 124 ಹಾಗೂ ಕೋಡಿಪುರ ಗ್ರಾಮದ ಸರ್ವೇ ನಂ. 24ರ ಸರ್ಕಾರಿ ಗೋಮಾಳದ ಜಾಗವನ್ನು ಪರಿಶೀಲಿಸಿದ್ದು, ಎರಡು ಕಡೆ ತಲಾ 10 ಎಕರೆ ಇರುವ ಈ ಜಾಗದಲ್ಲಿ ಬಡಾವಣೆ ನಿರ್ಮಿಸಲು ಅಗತ್ಯಕ್ರಮ ಪ್ರಾರಂಭಿಸಿದ್ದಾರೆ. ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ, ಎಡಿಸಿ ಡಿ. ಚಂದ್ರಯ್ಯ, ಎಸಿ ಬಿನೋಯ್ ಸೇರಿ ಹಲವು ಅಧಿಕಾರಿಗಳ ಜತೆ ಜಾಗವನ್ನು ಪರಿಶೀಲಿಸಿದ ಅವರು, ಆದಷ್ಟು ಬೇಗ ಬಡಾವಣೆ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಇದರೊಂದಿಗೆ, ಉಳಿದ ಗ್ರಾಮಗಳ ಸಮೀಪವಿರುವ ಭೂಮಿ ಗುರುತಿಸಲು ಆದೇಶಿಸಿದ್ದಾರೆ.
ಜನಸ್ಪಂದನ ಸಭೆಯಲ್ಲಿ ನಿವೇಶನ ಕೋರಿ ಅರ್ಜಿ ಸಲ್ಲಿಸಿದವರಿಗೆ ಪ್ರಾರಂಭಿಕ ಹಂತವಾಗಿ 2 ಕಡೆ ನಿವೇಶನ ಕಲ್ಪಿಸಿಕೊಡಲು ಸರ್ಕಾರದ ಸೂಚನೆಯಂತೆ ಅಧಿಕಾರಿಗಳು ಕಾರ್ಯಾರಂಭ ಮಾಡಿರುವುದು ಅರ್ಜಿದಾರರ ಆಸೆ ಚಿಗುರೊಡೆಯಲು ಕಾರಣವಾಗಿದೆ. ರಾಜಕೀಯ ಟೀಕೆಗಳಿಗೆ ಪ್ರತ್ಯುತ್ತರ ನೀಡುವ ಸಲುವಾಗಿ ಪ್ರಾರಂಭಿಕವಾಗಿ ಕೆಲವು ಕಡೆ ನಿವೇಶನದ ಹಕ್ಕುಪತ್ರ ನೀಡಲು ಡಿಸಿಎಂ ಯೋಜನೆ ರೂಪಿಸಿದ್ದು, ಅದಕ್ಕಾಗಿ ಅಧಿಕಾರಿ ವರ್ಗಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಉಪಚುನಾವಣೆ ಒಳಗೆ ಕೆಲವು ಕಡೆ ನಿವೇಶನ ನೀಡುವ ಮೂಲಕ ಜನರ ಮನಸ್ಸು ಗೆಲ್ಲುವುದು ಡಿಸಿಎಂ ಡಿಕೆಶಿ ಆಶಯವಾಗಿದೆ.