

ಬೆಂಗಳೂರು: ಜ್ಞಾನಭಾರತಿ ಸಮೀಪ ಮನೆಯೊಂದರಲ್ಲಿ ಅಡುಗೆ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ.
ಉಲ್ಲಾಳದ ಮುನೇಶ್ವರನಗರ ನಿವಾಸಿ ಮನೋಜ್ ಕುಮಾರ್ (20) ಮತ್ತು ನಾಗರಾಜ್ (60) ಗಾಯಾಳು. ಇಬ್ಬರಿಗೆ ಕೈ ಮತ್ತು ಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜ್ಞಾನಭಾರತಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಆಗಿದ್ದೇನು?: ಕೆನರಾ ಬ್ಯಾಂಕ್ ನೌಕರರಾದ ರವಿ ಎಂಬುವರು ಕುಟುಂಬದ ಜತೆ ಉಲ್ಲಾಳದ ಮುನೇಶ್ವರನಗರದಲ್ಲಿನ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಮನೆಯ ಮುಂದೆ ಮೆಟ್ಟಿಲು ಕೆಳಭಾಗದಲ್ಲಿ ಅಡುಗೆ ಸಿಲಿಂಡರ್ ಇಟ್ಟಿದ್ದರು. ಮಂಗಳವಾರ ಬೆಳಗ್ಗೆ 10 ಗಂಟೆಯಲ್ಲಿ ಅಡುಗೆ ಸಿಲಿಂಡರ್ ಸೋರಿಕೆಯಾಗಿರುವುದು ಕಂಡು ಬಂದಿತ್ತು. ಇದನ್ನು ಗಮನಿಸಿದ ನಾಗರಾಜ್ ಅವರು ಸಿಲಿಂಡರ್ ಹೊರತೆಗೆದು, ಸರಿಪಡಿಸಲು ಮುಂದಾಗಿದ್ದರು. ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಗಾಬರಿಗೊಂಡು ಅಲ್ಲಿಂದ ಓಡಿದ್ದಾರೆ. ಇದೇ ವೇಳೆ ಸಿಲಿಂಡರ್ ಸ್ಪೋಟಿಸಿದೆ.
ಸ್ಥಳದಲ್ಲಿದ್ದ ನಾಗರಾಜ್ ಮತ್ತು ಮನೋಜ್ ಕುಮಾರ್ ಗಾಯಗೊಂಡಿದ್ದಾರೆ. ಸ್ಪೋಟದ ರಭಸಕ್ಕೆ ಮನೆ ಮುಂದೆ ಬೆಂಕಿ ಹೊತ್ತಿಕೊಂಡಿದೆ. ಈ ಬಗ್ಗೆ ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಅಗ್ನಿ ಅವಘಡದಿಂದ ದ್ವಿಚಕ್ರ ವಾಹನ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಮನೆಯ ಕಿಟಕಿ, ಬಾಗಿಲು ಜಖಂಗೊಂಡಿವೆ. ಹೆಚ್ಚಿನ ಜನರು ಇಲ್ಲದಿದ್ದರಿಂದ ದೊಡ್ಡ ದುರಂತವೊಂದು ತಪ್ಪಿದೆ. ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ಅವಘಡಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.