ಎಫ್​ಐಆರ್ ದಾಖಲಿಸುವುದಕ್ಕಿಂತ ಅಪರಾಧ ತಡೆಯುವುದು ಮುಖ್ಯ ಎಂದ ಹೈಕೋರ್ಟ್

High court logo 2
Published on

ಬೆಂಗಳೂರು: ಸಂಭವಿಸಬಹುದಾದ ಅಪರಾಧದ ಬಗ್ಗೆ ರಹಸ್ಯ ಮಾಹಿತಿ ದೊರೆತಾಗ ಪೊಲೀಸರು ಆ ಅಪರಾಧ ತಡೆಯುವ ಕೆಲಸ ಮಾಡುವುದು ಮುಖ್ಯವೇ ಹೊರತು ಎಫ್​ಐಆರ್ ದಾಖಲಿಸುವುದಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕೇರಳದ ಕಣ್ಣೂರು ಮೂಲದ ತಸ್ಲೀಮ್, ಹಸೀಬ್ ಹಾಗೂ ರಸೀಕ್ ಅಲಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ವೇಳೆ ಈ ರೀತಿ ಅಭಿಪ್ರಾಯಪಟ್ಟಿರುವ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಪೀಠ, ಮೂವರೂ ಆರೋಪಿಗಳ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಕಾನೂನುಬಾಹಿರ ದಾಳಿ ಎಂದ ಆರೋಪಿಗಳು: ಆರೋಪಿಗಳ ಪರ ವಕೀಲರು, ಪೊಲೀಸರು ತಮಗೆ ದೊರೆತ ಮಾಹಿತಿ ಆಧರಿಸಿ ದಾಳಿ ನಡೆಸಿರುವುದಾಗಿ ಹೇಳಿದ್ದಾರೆ. ಮಾಹಿತಿ ಸಿಕ್ಕ ಕೂಡಲೇ ಎಫ್​ಐಆರ್ ದಾಖಲಿಸಬೇಕಿತ್ತು. ಆದರೆ, ಎಫ್​ಐಆರ್ ದಾಖಲಿಸದೇ ದಾಳಿ ನಡೆಸಿದ್ದಾರೆ. ಇದು ಕಾನೂನು ಬಾಹಿರ ಕ್ರಮವಾಗಿದೆ. ದಾಳಿ ಸಂದರ್ಭದಲ್ಲಿ ಯಾವುದೇ ಮಾದಕ ವಸ್ತು ಸಹ ಪತ್ತೆಯಾಗಿಲ್ಲ. ನಿಯಮಗಳ ಪ್ರಕಾರ ವಶಪಡಿಸಿಕೊಳ್ಳಲಾದ ವಸ್ತುಗಳ ಗುಣಲಕ್ಷಣ ಹಾಗೂ ಪ್ರಮಾಣದ ಬಗ್ಗೆ 15 ದಿನಗಳ ಒಳಗೆ ವಿಧಿವಿಜ್ಞಾನ ಪ್ರಯೋಗಾಲಯದಿಂದ ವರದಿ ಪಡೆದಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿದಾರರಿಗೆ ಎನ್‌ಡಿಪಿಎಸ್ ಕಾಯ್ದೆ ಅನ್ವಯಿಸುವುದಿಲ್ಲ. ಆದ್ದರಿಂದ, ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು.

ಪೊಲೀಸರ ಪರ ಸರ್ಕಾರಿ ವಕೀಲೆ ಕೆ.ಪಿ. ಯಶೋಧಾ ವಾದ ಮಂಡಿಸಿ, ದಾಳಿ ವೇಳೆ ಆರೋಪಿಗಳ ಮನೆಯಲ್ಲಿ ಮಾದಕ ವಸ್ತು ಪತ್ತೆಯಾಗಿದೆ. ಜಪ್ತಿ ಸೇರಿ ಎಲ್ಲ ಪ್ರಕ್ರಿಯೆಗಳನ್ನೂ ಕಾನೂನು ಪ್ರಕಾರವೇ ನಡೆಸಲಾಗಿದೆ. ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ನಿಗದಿತ ಅವಧಿಯೊಳಗೆ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆಯಾದರೂ, ಕರೊನಾ ಕಾರಣದಿಂದ ವರದಿ ಸಿಗುವುದು ವಿಳಂಬವಾಗಿದೆ. ಪ್ರಕರಣವಿನ್ನೂ ತನಿಖಾ ಹಂತದಲ್ಲಿದೆ. ಆದ್ದರಿಂದ, ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಬೇಕೆಂದು ಮನವಿ ಮಾಡಿದ್ದರು.

ಕೋರ್ಟ್ ಹೇಳಿದ್ದೇನು?: ಈಗಾಗಲೇ ನಡೆದು ಹೋಗಿರುವ ಅಪರಾಧದ ಕುರಿತು ಮಾಹಿತಿ ಸಿಕ್ಕರೆ ತಕ್ಷಣವೇ  ಎಫ್​ಐಆರ್ ದಾಖಲಿಸುವುದು ಪೊಲೀಸರ ಕರ್ತವ್ಯ. ಆದರೆ, ಅಪರಾಧ ಕೃತ್ಯವೊಂದು ನಡೆಯುತ್ತಿದೆ ಅಥವಾ ನಡೆಯಲಿದೆ ಎಂಬ ಖಚಿತ ಹಾಗೂ ರಹಸ್ಯ ಮಾಹಿತಿ ಸಿಕ್ಕರೆ, ಸಂಭವಿಸಬಹುದಾದ ಕೃತ್ಯವನ್ನು ತಡೆಯುವುದು ಮುಖ್ಯವಾಗುತ್ತದೆ. ಅಂಥ ಸಂದರ್ಭದಲ್ಲಿ ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸುವುದು, ಸಾಕ್ಷ್ಯ ಸಂಗ್ರಹಿಸುವುದು ಪೊಲೀಸರ ಮೊದಲ ಕರ್ತವ್ಯವಾಗುತ್ತದೆಯೇ ಹೊರತು ಎಫ್​ಐಆರ್ ದಾಖಲಿಸುತ್ತ ಕೂರುವುದಲ್ಲ. ಆದ್ದರಿಂದ, ಈ ಪ್ರಕರಣದಲ್ಲಿ ಮಾಹಿತಿ ದೊರೆತ ಕೂಡಲೇ ಎಫ್​ಐಆರ್ ದಾಖಲಿಸದೆ ದಾಳಿ ನಡೆಸಿ, ಮಾದಕ ವಸ್ತು ವಶಪಡಿಸಿಕೊಂಡಿರುವ ಕ್ರಮದಲ್ಲಿ ಯಾವುದೇ ಲೋಪ ಕಂಡು ಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಮೂವರೂ ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿದೆ.

ಏನಿದು ಪ್ರಕರಣ?: ಡ್ರಗ್ಸ್ ಮಾರಾಟದ ಬಗ್ಗೆ ದೊರೆತ ರಹಸ್ಯ ಮಾಹಿತಿ ಆಧರಿಸಿ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಕಳೆದ ಜೂ.11ರಂದು ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯ ಬಿಟಿಎಂ 2ನೇ ಹಂತದಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿದ್ದರು. ಈ ವೇಳೆ 6 ಮಂದಿ ಯುವಕರು ಹಾಗೂ ಎಲ್ಎಸ್‌ಡಿ ಸ್ಟ್ರಿಪ್ಸ್, ಗಾಂಜಾ, ಎಂಡಿಎಂಎ, ಎಕ್ಸ್‌ಟೆಸಿ ಮಾತ್ರೆಗಳಿದ್ದವು ಎನ್ನಲಾದ ಬ್ಯಾಗ್ ಪಶಪಡಿಸಿಕೊಂಡಿದ್ದರು. 6 ಮಂದಿಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್ 20(ಬಿ), 8(ಸಿ), 22(ಬಿ), 22(ಸಿ) ಅಡಿಯಲ್ಲಿ ಪ್ರಕರಣ ದಾಖಲಿಸಿಸಲಾಗಿತ್ತು. ಆರೋಪಿಗಳ ಪೈಕಿ ಮೂವರು ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net