

ಬೆಂಗಳೂರು: ಎಚ್ಎಎಲ್ನ ಅನ್ನಸಂದ್ರಪಾಳ್ಯದಲ್ಲಿ ಅಡುಗೆ ಸಿಲಿಂಡರ್ನಿಂದ ಅನಿಲ ಸೋರಿಕೆಯಾಗಿ ಸ್ಪೋಟಗೊಂಡ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅನ್ನಸಂದ್ರಪಾಳ್ಯದ ನೀಲಮ್ಮ (60) ಹಾಗೂ ಸಂಬಂಧಿ ಚೇತನ್ (30) ಗಾಯಗೊಂಡವರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಭಾನುವಾರ ಬೆಳಗ್ಗೆ ಈ ದುರಂತ ಸಂಭವಿಸಿದೆ.
ಗಾಯಾಳುಗಳ ಜೀವನ್ಮರಣ ಹೋರಾಟ ಗಂಭೀರವಾಗಿ ಗಾಯಗೊಂಡಿರುವ ಇಬ್ಬರೂ ಜೀವ ನ್ಮರಣ ಹೋರಾಟ ನಡೆಸುತ್ತಿದ್ದಾರೆ. ನೀಲಮ್ಮ ದೇಹ ಶೇ.50 ಹಾಗೂ ಚೇತನ್ ದೇಹ ಶೇ.70 ಸುಟ್ಟಿದೆ.
ಎಚ್ಎಎಲ್ನಲ್ಲಿ ಎಲೆಕ್ಟ್ರೀಷಿಯನ್ ಆಗಿ ಅರೆಕಾಲಿಕ ಕೆಲಸ ಮಾಡುತ್ತಿರುವ ಹರೀಶ್ ಅನ್ನಸಂದ್ರಪಾಳ್ಯದಲ್ಲಿರುವ ಮೂರು ಮಹಡಿಯ ಕಟ್ಟಡದ ಮೊದಲ ಮಹಡಿಯಲ್ಲಿದ್ದ ಬಾಡಿಗೆ ಮನೆಯಲ್ಲಿ ಪತ್ನಿ ಹಾಗೂ ತಾಯಿ ನೀಲಮ್ಮ ಜತೆ ವಾಸಿಸುತ್ತಿದ್ದರು. ಪತ್ನಿ ಹೆರಿಗೆಗಾಗಿ ದಾವಣಗೆರೆಯ ತವರು ಮನೆಗೆ ಹೋಗಿದ್ದರು. ಹರೀಶ್ ಬಾಮೈದ ಚೇತನ್ ಕೆಲ ದಿನಗಳ ಹಿಂದೆ ಅಕ್ಕನ ಮನೆಗೆ ಬಂದು ವಾಸಿಸುತ್ತಿದ್ದರು. ಬೆಳಗ್ಗೆ 6.30ರಲ್ಲಿ ನೀಲಮ್ಮ ಉಪಹಾರ ತಯಾರಿಸಿ ಟಿಫನ್ ಬಾಕ್ಸ್ಗೆ ತುಂಬಿ ಹರೀಶ್ಗೆ ಕೊಟ್ಟಿದ್ದರು. ಹರೀಶ್ ಕೆಲಸಕ್ಕೆ ತೆರಳಿದ್ದರು.
ಇದನ್ನೂ ಓದಿ: ಬಾಲಿವುಡ್ನ ಸಂಗೀತ ನಿರ್ದೇಶಕ ವಾಜಿದ್ ಖಾನ್ ನಿಧನ
ಗ್ಯಾಸ್ ಸ್ಟೌನಲ್ಲಿ ಉರಿಯುತ್ತಿದ್ದ ಬೆಂಕಿ ಗಾಳಿಗೆ ನಂದಿತ್ತು. ಹಾಗಾಗಿ ಗ್ಯಾಸ್ ಸ್ಟೌ ಸ್ವಿಚ್ ಆಫ್ ಮಾಡುವುದನ್ನು ಮರೆತು 8 ಗಂಟೆವರೆಗೆ ಮಲಗಿದ್ದರು. ಗ್ಯಾಸ್ ಮನೆಯೆಲ್ಲಾ ತುಂಬಿಕೊಂಡಿತ್ತು. ಆದರೆ, ಇದು ನೀಲಮ್ಮ ಗಮನಕ್ಕೆ ಬಂದಿರಲಿಲ್ಲ. ಬೆಳಗ್ಗೆ 8.30ರಲ್ಲಿ ಮತ್ತೆ ಗ್ಯಾಸ್ ಸ್ಟೌಗೆ ಬೆಂಕಿ ಹಚ್ಚಲು ಮುಂದಾದಾಗ ಬೆಂಕಿ ಹೊತ್ತಿಕೊಂಡು ಸಿಲಿಂಡರ್ ಸ್ಪೋಟಗೊಂಡಿದೆ. ಪರಿಣಾಮ ಚೇತನ್ ಹಾಗೂ ನೀಲಮ್ಮ ದೇಹಕ್ಕೆ ಬೆಂಕಿ ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಪೋಟದ ತೀವ್ರತೆಗೆ ಮನೆಯ ಮುಂಭಾಗದ ಗೋಡೆ ಕುಸಿದಿದೆ.