ಬಾಲಿವುಡ್​ ನಟ ಅರ್ಷದ್​ ವಾರ್ಸಿ ಚಾಲಕರಾಗಿ ಕೆಲಸ ಮಾಡಿದ್ದ ಬಿಗ್​ ಬಿ ಪುತ್ರ ಅಭಿಷೇಕ್​ ಬಚ್ಚನ್​

abhisekh bachchan
Published on

ನವದೆಹಲಿ: ಅವರು ಬಾಲಿವುಡ್​ ದಿಗ್ಗಜ ಅಮಿತಾಬ್​ ಬಚ್ಚನ್​ ಹಾಗೂ ಒಂದು ಕಾಲದ ಪ್ರಸಿದ್ಧ ನಟಿ ಜಯಾ ಬಚ್ಚನ್​ ಅವರ ಏಕೈಕ ಪುತ್ರ. ಹೆಸರು ಅಭಿಷೇಕ್​ ಬಚ್ಚನ್​. ಇದೀಗ ಇವರು 1994ರ ಮಿಸ್​ ವರ್ಲ್ಡ್​ ಐಶ್ವರ್ಯ ರೈ ಅವರನ್ನು ಮದುವೆಯಾಗಿದ್ದಾರೆ. ಬಾಲಿವುಡ್​ನಲ್ಲಿ ಹಲವು ಹಿಟ್​ ಸಿನಿಮಾಗಳನ್ನೂ ನೀಡಿದ್ದಾರೆ. ಆದರೆ, ಇವರಿಗೆ 2000ದಲ್ಲಿ ಕರೀನಾ ಕಪೂರ್​ ನಟಿಸಿರುವ ರೆಫ್ಯೂಜಿ ಚಿತ್ರದಲ್ಲಿ ಹೀರೋ ಆಗುವ ಅವಕಾಶ ದೊರೆಯುವ ಮೊದಲು ಏನೆಲ್ಲ ಮಾಡಿದ್ದರು ಗೊತ್ತೇ?

ಅದಾಗಲೇ ಬಾಲಿವುಡ್​ನಲ್ಲಿ ಸ್ವಲ್ಪ ಹೆಸರು ಮಾಡಿದ್ದ ಅರ್ಷದ್​ ವಾರ್ಸಿ ಎಂಬ ನಟನ ಕಾರಿನ ಚಾಲಕರಾಗಿ ಕೆಲಸ ಮಾಡಿದ್ದರು. ಸ್ಟುಡಿಯೋಗಳ ನೆಲವನ್ನು ಸ್ವಚ್ಛಗೊಳಿಸಿದ್ದರು. ಕ್ಲಾಪರ್​ ಬಾಯ್​ ಆಗಿ, ಪ್ರೊಡಕ್ಷನ್​ ಬಾಯ್​ ಆಗಿ ನಟರಿಗೆ ಚಹಾ ತಯಾರಿಸಿ ಕೊಡುವ ಕೆಲಸಗಳನ್ನು ಮಾಡಿದ್ದರು!

ಚಿತ್ರರಂಗದಲ್ಲಿ ಬಹುದೊಡ್ಡ ಹೆಸರು ಮಾಡಿರುವ ತಾರೆಯರ ಪುತ್ರ ಅಥವಾ ಪುತ್ರಿಯರೆಂದರೆ ಅವರಿಗೆ ಸಿನಿಮಾಗಳಲ್ಲಿ ಸಲೀಸಾಗಿ ಅವಕಾಶ ಸಿಕ್ಕಿಬಿಡುತ್ತದೆ. ಅವರ ಪಾಲಕರ ಪ್ರಭಾವಳಿಯೇ ಇದಕ್ಕೆ ಸಾಕಾಗುತ್ತದೆ ಎಂದು ಭಾವಿಸುವವರೇ ಹೆಚ್ಚು. ಆದರೆ, ತಮ್ಮ ವಿಷಯದಲ್ಲಿ ಹೀಗೆ ಆಗಿಲ್ಲ ಎಂದು ಬಿಎಎಫ್​ಟಿಎಗೆ 2010ರಲ್ಲಿ ನೀಡಿದ್ದ ಸಂದರ್ಶನದಲ್ಲಿ ಸ್ವತಃ ಅಭಿಷೇಕ್​ ಬಚ್ಚನ್​ ಹೇಳಿಕೊಂಡಿರುವುದು ಇದೀಗ ವೈರಲ್​ ಆಗಿದೆ.

ನಾನು ಪ್ರೊಡಕ್ಷನ್​ ಅಸಿಸ್ಟೆಂಟ್​ ಆಗಿ, ಚಾಲಕನಾಗಿ ಎರಡು ವರ್ಷ ಕೆಲಸ ಮಾಡಿದ ಬಳಿಕ 2000ದಲ್ಲಿ ಮೊದಲ ಚಿತ್ರ ರೆಫ್ಯೂಜಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು ಎಂದು ತಿಳಿಸಿದ್ದಾರೆ.

ಬಾಲಿವುಡ್​ನಲ್ಲಿ ಇವರು ಹೀರೋ ಆಗಿ ಕೆಲಸ ಮಾಡಲು ಆರಂಭಿಸಿದ ಮೂರು ವರ್ಷಗಳವರೆಗೆ ಅಭಿಷೇಕ್​ಗೆ ಹೇಳಿಕೊಳ್ಳುವಂಥ ಯಶಸ್ಸು ದಕ್ಕಲಿಲ್ಲ.

ಆಗ ನನ್ನ ಚಿತ್ರಗಳು ಒಂದಾದ ಮೇಲೆ ಒಂದರಂತೆ ಬಾಕ್ಸ್​ಆಫೀಸ್​ನಲ್ಲಿ ನೆಲಕಚ್ಚುತ್ತಿದ್ದವು. ಮನೆಯಿಂದ ಹೊರಹೋಗುವುದೇ ಬೇಡ ಎನಿಸುವಷ್ಟು ಹತಾಶೆ ನನ್ನನ್ನು ಕಾಡುತ್ತಿತ್ತು. ಹಾಗೆಂದು ಸುಮ್ಮನೆ ಕೂರಲಿಲ್ಲ. ನನ್ನ ನಟನೆಯ ಬಗ್ಗೆ ಟೀಕಾಕಾರರು ಮಾಡಿದ್ದ ಟಿಪ್ಪಣಿಯನ್ನು ಕನ್ನಡಿಗೆ ಅಂಟಿಸಿಕೊಂಡು, ನಟನಾ ಕೌಶಲ ಸುಧಾರಣೆ ಒತ್ತು ಕೊಟ್ಟೆ ಎಂದು ತಿಳಿಸಿದ್ದಾರೆ.

ಮಣಿರತ್ನಂ ಅವರ ಯುವ ಹಾಗೂ ಸಂಜಯ್​ ಗಾಡವಿ ಅವರ ಧೂಮ್​ ಚಿತ್ರಗಳು ಬಾಕ್ಸ್​ಆಫೀಸ್​ನಲ್ಲಿ ಗೆದ್ದ ನಂತರದಲ್ಲಿ ಅವಕಾಶಗಳು ನನ್ನನ್ನು ಹುಡುಕಿಕೊಂಡು ಬರಲಾರಂಭಿಸಿದವು. ಅದಾದ ಬಳಿಕ ಧೂಮ್​ನ ಸರಣಿ ಚಿತ್ರಗಳು, ಗುರು, ಬಂಟಿ ಔರ್​ ಬಬ್ಲಿ, ಪಾ ಮತ್ತು ಬೋಲ್​ ಬಚ್ಚನ್​ ಸಿನಿಮಾಗಳು ಗಲ್ಲಾಪೆಟ್ಟಿಗೆಯನ್ನು ತುಂಬಿಸಿ, ಯಶಸ್ವಿ ನಟ ಎಂಬ ಹೆಗ್ಗಳಿಕೆಯನ್ನು ತಂದುಕೊಟ್ಟಿದ್ದಾಗಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net