ಪೆಟ್ರೋಲ್ ಎರಚಿ, ಬೆಂಕಿ ಹಚ್ಚಿದ ಘಟನೆ: ಕಡೆಗೂ ಚಿಕಿತ್ಸೆ ಫಲಿಸದೆ ಪ್ರಿಯತಮ ರಾಹುಲ್ ಸಾವು!

Untitled design (69)
Published on

ಮುದ್ದೇಬಿಹಾಳ: ಪ್ರೇಮ ಪ್ರಕರಣ ಹಿನ್ನೆಲೆ ಇಲ್ಲಿನ ಪುರಸಭೆ ಮಾಜಿ ಸದಸ್ಯ ರಾವುಜಪ್ಪ ಮದರಿ ಅವರ ಮನೆಯಲ್ಲಿ ಮೇ.26ರಂದು ಸಂಜೆ ಪೆಟ್ರೋಲ್ ಎರಚಿ ಕೊಲೆಗೆ ಯತ್ನಿಸಿದ ಘಟನೆಯಲ್ಲಿ ಶೇ.70 ರಷ್ಟು ಬೆಂದು ಹೋಗಿದ್ದ ಪ್ರಿಯಕರ ಢವಳಗಿ ಗ್ರಾಮದ ರಾಹುಲ್ ರಾಮನಗೌಡ ಬಿರಾದಾರ (25) ಅವರು ಇಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಕಳೆದ 12-13 ದಿನಗಳ‌ ಹಿಂದೆ ರವಿವಾರ ಸಂಜೆ 4ಗಂಟೆ ಆಸ್ಪತ್ರೆಗೆ ದಾಖಲಾದ ರಾಹುಲ್ ರಾಮನಗೌಡ ಸಾವನ್ನಪ್ಪಿದ್ದಾನೆ ಎಂದು ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ ದೃಢಪಡಿಸಿದ್ದಾರೆ. ರಾಹುಲ್ ಮದರಿ ಕುಟುಂಬದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಎರಡು ಮೂರು ವರ್ಷಗಳ ನಂತರ ಪ್ರೀತಿ ಮುರಿದುಬಿದ್ದು, ಯುವತಿ ರಾಹುಲ್​ನಿಂದ ದೂರವಾಗಿದ್ದಳು. ಇದನ್ನು ಸಹಿಸದ ರಾಹುಲ್ ಮೇ.26ರಂದು ಯುವತಿಯ ಮನೆಗೆ ಏಕಾಂಗಿಯಾಗಿ ಬಂದಿದ್ದಾಗ, ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ ಘಟನೆ ಸಂಭವಿಸಿತ್ತು.

ಘಟನೆಯಲ್ಲಿ ಯುವತಿಯ ಚಿಕ್ಕಪ್ಪ ಮುತ್ತು ಮದರಿ, ಕೆಲಸಗಾರ, ನೀಲಕಂಠ ಹರ್ನಾಳ ಕೂಡ ತೀವ್ರವಾಗಿ ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯುವತಿಯ ಚಿಕ್ಕಮ್ಮ, ಮುತ್ತು ಅವರ ಪತ್ನಿ ಸೀಮಾ ಸಕಾಲಿಕ ಚಿಕಿತ್ಸೆಯ ನಂತರ ಚೇತರಿಸಿಕೊಂಡಿದ್ದಾರೆ.

ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಯುವಕ ಮತ್ತು ಯುವತಿ ಇಬ್ಬರ ಕುಟುಂಬದವರಿಂದ ದೂರು ದಾಖಲಾಗಿದೆ. ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಗಳು ಮನೆಯವರೇ ಆದ್ದರಿಂದ ಇಲ್ಲಿ ತಪ್ಪು ಯಾರದ್ದು ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಈ ಹಿನ್ನೆಲೆ ಸದ್ಯ ಪೊಲೀಸರು ಯುವತಿಯ ತಂದೆಯನ್ನು ಬಂಧಿಸಿ, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net