ಪ್ರೀತಿಸಿ ಮತಾಂತರಗೊಂಡು ಮದುವೆಯಾದ ಮಹಿಳೆ ಲಾಡ್ಜ್ ಪಾಲು..!

Woman conversion
Published on

ಮಂಗಳೂರು: ಪ್ರೀತಿಸಿ ಮತಾಂತರಗೊಂಡು ಮದುವೆಯಾದ ಮಹಿಳೆಯೊಬ್ಬಳು ಇದೀಗ ಸರಿಯಾದ ನೆಲೆಯಿಲ್ಲದೇ ಲಾಡ್ಜ್ ಪಾಲಾಗಿರುವ ಘಟನೆ ದಕ್ಷಿಣ ಕನ್ನಡದಲ್ಲಿ ಬೆಳಕಿಗೆ ಬಂದಿದೆ.

ಕೇರಳ ಕಣ್ಣೂರಿನ ಪ್ರತಿಷ್ಠಿತ ಕುಟುಂಬದ ವಿವಾಹಿತ ಮಹಿಳೆ ಶಾಂತಿ ಜೂಬಿಗೂ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಇಬ್ರಾಹಿಂ ಖಲೀಲ್​ಗೂ ಫೇಸ್​ಬುಕ್ ಮೂಲಕ ಪರಿಚಯವಾಗಿತ್ತು. ನಂತರ ಇಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಮದುವೆ ವಿಚಾರ ಪ್ರಸ್ತಾಪವಾದಾಗ ವಿವಾಹಕ್ಕೂ ಮುನ್ನ ಮತಾಂತರ ಆಗಬೇಕೆಂಬ ಷರತ್ತನ್ನು ಖಲೀಲ್​ ವಿಧಿಸಿದ ಆರೋಪವಿದೆ.

ಅದರಂತೆಯೇ 2017ರಲ್ಲಿ ಶಾಂತಿ ಜೂಬಿ ಪತಿಯನ್ನು ಬಿಟ್ಟು, ಇಬ್ರಾಹಿಂ ಖಲೀಲ್ ಜತೆ ನಿಖಾ ಆಗಿದ್ದಳು. ಬೆಂಗಳೂರಿನಲ್ಲಿ ಇಬ್ಬರ ನಿಖಾ ನೆರವೇರಿತ್ತು. ಮತಾಂತರ ಬಳಿಕ ಶಾಂತಿ ಜೂಬಿ ಆಸಿಯಾ ಆಗಿ ಹೆಸರು ಬದಲಾಯಿಸಿಕೊಂಡಳು. ಬೆಂಗಳೂರಿನಲ್ಲೇ ಆಸಿಯಾ ವಾಸವಿದ್ದಳು. ಖಲೀಲ್​ ಸಹ ಬಂದು ಹೋಗುತ್ತಿದ್ದ. ಆಸಿಯಾ ಕೂಡ ಸುಳ್ಯಕ್ಕೆ ಹೋಗಿ ಬರುತ್ತಿದ್ದಳು. ಆರಂಭದಲ್ಲಿ ಸಂಸಾರದ ಬಂಡಿ ಸುಖವಾಗೇ ಸಾಗುತ್ತಿತ್ತು. ಆದರೆ, ಕಳೆದ ಏಳೆಂಟು ತಿಂಗಳಿಂದ ಪತಿ ಎಸ್ಕೇಪ್ ಆಗಿದ್ದಾನೆ.

ಖಲೀಲ್​ ಮನೆಯವರನ್ನು ಕೇಳಿದರೆ ಆತನನ್ನು ಬಿಟ್ಟುಬಿಡು ಎಂದು ಬೆದರಿಕೆ ಹಾಕುತ್ತಿದ್ದಾರೆಂದು ಆಸಿಯಾ ದೂರಿದ್ದಾರೆ. ಆತನನ್ನು ನಂಬಿ ಬೆಂಗಳೂರಿನ ವಿಜಯನಗರದಲ್ಲಿ ನಾಲ್ಕೈದು ಕೋಟಿ ಬೆಲೆಬಾಳುವ ಮನೆ, ತವರಿನ ಎಲ್ಲ ಆಸ್ತಿಯನ್ನು ಶಾಂತಿ ನೀಡಿದ್ದಳು. ಇತ್ತ ಖಲೀಲ್ ಮನೆಯವರು ಸಹ ಆಸಿಯಾಳನ್ನು ಹೊರಹಾಕಿದ್ದಾರೆ. ಸದ್ಯ ಲಾಕ್​ಡೌನ್​ನಿಂದ ಸುಳ್ಯದ ಲಾಡ್ಜ್​ನಲ್ಲಿ ವಾಸವಿದ್ದಾರೆ.

ನ್ಯಾಯಕ್ಕಾಗಿ ಮುಸ್ಲಿಂ ಸಂಘಟನೆ ಮೊರೆ ಹೋದ್ರು ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿದರು ಆಸಿಯಾ, ಶುಕ್ರವಾರದವರೆಗೂ ನೋಡಿ ಆಮೇಲೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಅಳಲು ತೋಡಿಕೊಂಡಿದ್ದಾರೆ. ಸದ್ಯ ಮಾನವ ಹಕ್ಕು ಸಂಘಟನೆಯ ಮೊರೆ ಹೋಗಿದ್ದು, ಪ್ರಕರಣ ಯಾವ ತಿರುವು ಪಡೆದುಕೊಳ್ಳುತ್ತದೆ ಕಾದು ನೋಡಬೇಕಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net