ಪ್ರೇಯಸಿಗೆ ಮತಾಂತರಕ್ಕೆ ಒತ್ತಾಯಿಸಿದ ಪ್ರಿಯಕರ ಜೈಲಿಗೆ

Love Jihad
Published on

ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ಕೊನೆಗೆ ಯುವತಿಗೆ ಮತಾಂತರಕ್ಕೆ ಒತ್ತಾಯ ಮಾಡಿದ ಆರೋಪಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಜಯನಗರದ ಶಬಾಬ್ (25) ಬಂಧಿತ. 23 ವರ್ಷದ ಸಂತ್ರಸ್ತೆ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿರುವುದಾಗಿ ಜಯನಗರ ಪೊಲೀಸರು ತಿಳಿಸಿದ್ದಾರೆ.

ಶೆಲ್ ಪೆಟ್ರೋಲ್ ಬಂಕ್‌ನಲ್ಲಿ ಸಂತ್ರಸ್ತೆ ಕೆಲಸ ಮಾಡುತ್ತಿದ್ದಾಗ ಪೆಟ್ರೋಲ್ ತುಂಬಿಸಿಕೊಳ್ಳಲು ಬಂದ ಇಮ್ತಿಯಾಜ್ ಮತ್ತು ಶಬಾಬ್ ಆಕೆಯನ್ನು ಪರಿಚಯ ಮಾಡಿಕೊಂಡಿದ್ದರು. ಆಕೆಯ ಮೊಬೈಲ್​ಫೋನ್​ ನಂಬರ್ ಪಡೆದ ಶಬಾಬ್​ ವಾಟ್ಸ್‌ಆ್ಯಪ್ ಚಾಟ್, ಸಂಭಾಷಣೆ ನಡೆಸಿ ಪ್ರೀತಿಸುವುದಾಗಿ ಹೇಳಿದ್ದ. ಆನಂತರ ಮದುವೆ ಆಗುವುದಾಗಿ ನಂಬಿಸಿದ ಆರೋಪಿ, ಮಾರ್ಚ್ 21ರಂದು ಜಯನಗರ 3ನೇ ಬ್ಲಾಕ್‌ನಲ್ಲಿ ಇರುವ ಪ್ರೆಸಿಡೆಂಟ್​ ಹೋಟೆಲ್‌ಗೆ ಊಟಕ್ಕೆಂದು ಕರೆದುಕೊಂಡು ಹೋಗಿದ್ದಾನೆ. ರಾತ್ರಿ ಅಲ್ಲಿಂದ ಹೊರಡುವುದು ತಡವಾದ ಕಾರಣಕ್ಕೆ ಅಲ್ಲಿಯೇ ರೂಂ ಬುಕ್ ಮಾಡಿಕೊಂಡು ಇಬ್ಬರು ಉಳಿದುಕೊಂಡಿದ್ದಾರೆ. ಮತ್ತೆ ಮದುವೆ ಆಗುವುದಾಗಿ ಪುಸಲಾಯಿಸಿ ಯುವತಿ ಜತೆಗೆ ದೈಹಿಕ ಸಂಪರ್ಕ ಹೊಂದಿದ್ದಾನೆ.

ಇದಾದ ಮೇಲೆ ಎಲ್ಲೆಡೆ ಸುತ್ತಾಡಿದ್ದು, ಕೊನೆಗೆ ಮದುವೆ ಆಗುವಂತೆ ಯುವತಿ ಒತ್ತಾಯ ಮಾಡಿದಾಗ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುವಂತೆ ತಾಕೀತು ಮಾಡಿದ್ದಾನೆ. ಅದಕ್ಕೆ ಒಪ್ಪದೆ ಇದ್ದಾಗ ಮದುವೆ ಆಗುವುದಿಲ್ಲ ಎಂದು ಹೇಳಿ ಕಾಲ ಮುಂದೂಡಿದ್ದು, ಇದರ ನಡುವೆ ಶಬಾಬ್ ಸಹೋದರ ಪರಿಚಯ ಆಗಿದ್ದಾನೆ. ಆತನ ಬಳಿ ಸಂತ್ರಸ್ತೆ ತನ್ನ ಮೇಲಿನ ದೌರ್ಜನ್ಯ ವಂಚನೆ ವಿಷಯ ಪ್ರಸ್ತಾಪ ಮಾಡಿದಾಗ ಆತ ಸಹ ನಿಂದನೆ ಮಾಡಿದ್ದಾನೆ. ಕೊನೆಗೆ ದಿಕ್ಕು ತೋಚದ ಯುವತಿ, ಠಾಣೆಗೆ ಬಂದು ದೂರು ನೀಡಿದ್ದರು. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net