

ಮಂಗಳೂರು: ನಗರದ 62 ವರ್ಷದ ವ್ಯಕ್ತಿಯೊಬ್ಬನನ್ನು ಅಪಹರಣ ಮಾಡಿ, ಅನ್ಯಕೋಮಿನ 22 ವರ್ಷದ ಯುವತಿಯೊಂದಿಗೆ ಬಲವಂತವಾಗಿ ಮದುವೆ ಮಾಡಿಸಿದ್ದಾರೆ ಎಂದು ವೃದ್ಧನ ಪತ್ನಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಪಕ್ರರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಬೋಳಾರ ಶಾದಿ ಮಹಲ್ ಸಮೀಪದ ನಿವಾಸಿ ಗಂಗಾಧರ ಎಂಬಾತ ನಾಪತ್ತೆಯಾಗಿದ್ದ. ಜನವರಿ ಕೊನೆಯ ವಾರದಿಂದ ಮನೆಗೆ ಬಂದಿಲ್ಲ. ಪತ್ನಿ ಯಶೋದಾ ಕರೆ ಮಾಡಿದಾಗ ಫೆ.8ರವರೆಗೂ ಕರೆ ಸ್ವೀಕರಿಸಿ ಮಾತನಾಡುತ್ತಿದ್ದರು. ಬಳಿಕ ಕರೆ ಸ್ವೀಕರಿಸಿರಲಿಲ್ಲ. ಗಂಡನಿಗೆ ಏನಾಯ್ತು ಎಂದು ಹುಡುಕಾಡುತ್ತಿದ್ದ ಯಶೋದಾಗೆ ಮಾ.15ರಂದು ಅವರ ಸ್ನೇಹಿತರೊಬ್ಬರ ಮೂಲಕ ಗಂಗಾಧರ್ ಮುಸ್ಲಿಂ ಯುವತಿ ಜತೆ ವಿವಾಹವಾದ ಫೋಟೋ ಸಿಕ್ಕಿತ್ತು. ಇದೊಂದು ಬಲವಂತದ ಮದುವೆ ಎಂದು ಯಶೋದಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇದನ್ನೂ ಓದಿರಿ ಅತ್ತ ತೋಟದಲ್ಲಿ ಪೂಜೆ ನಡೆಯುತ್ತಿತ್ತು, ಇತ್ತ ಮನೆಯಲ್ಲಿ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ!
ಇದು ಲವ್‌ಜಿಹಾದ್‌ನ ಇನ್ನೊಂದು ಮುಖ, ಮುಸ್ಲಿಂ ಮಹಿಳೆಯನ್ನು ಛೂಬಿಟ್ಟು 62 ವರ್ಷದ ವೃದ್ಧನನ್ನು ಮತಾಂತರಗೊಳಿಸಲಾಗಿದೆ ಎಂದೇ ಚಿತ್ರಿತವಾಗಿದ್ದ ಈ ಪ್ರಕರಣ ಮತ್ತೊಂದು ತಿರುವು ಪಡೆದಿದೆ. ಗಂಗಾಧರ ಮದುವೆಯಾಗಿದ್ದಾನೆ ಎನ್ನಲಾದ ಮುಸ್ಲಿಂ ಯುವತಿಯೇ ಕದ್ರಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ಕೇಸ್ ದಾಖಲಿಸಿದ್ದಾಳೆ. ಯುವತಿ ಮೂಲತಃ ಪುತ್ತೂರಿನವಳಾಗಿದ್ದು, ಈಗಾಗಲೇ ಮದುವೆ ಆಗಿ ಒಂದು ಮಗು ಇದೆ. ಗಂಡ ಸತ್ತಿದ್ದಾನೆ. ಗಂಗಾಧರ್ ಜತೆ ಎರಡನೇ ಮದುವೆ ಆಗಿದೆ. ಆದರೆ ಗಂಗಾಧರನಿಗೆ ಇದು ಮೂರನೇ ಮದ್ವೆಯಂತೆ!
ಕೆಲ ತಿಂಗಳ ಹಿಂದೆ ತನ್ನ ಮಿತ್ರರಾದ ಸೈಯದ್, ಶಬೀರ್ ಮತ್ತು ಮಹಮ್ಮದ್ ಎಂಬುವರೊಂದಿಗೆ ಗಂಗಾಧರ ಸಂಪರ್ಕಿಸಿ ತನ್ನ ಹೆಸರು ಮಹಮ್ಮದ್ ಅನೀಸ್ ಎಂದು ಪರಿಚಯಿಸಿಕೊಂಡಿದ್ದ. ಅನೀಸ್‌ಗೆ ತರಕಾರಿ ವ್ಯಾಪಾರ ಇದೆ, ಕುಟುಂಬದ ಜವಾಬ್ದಾರಿಯ ಒತ್ತಡದಿಂದ ಮದುವೆಯಾಗಿರಲಿಲ್ಲ. ಈಗ ವಿವಾಹವಾಗುತ್ತಿದ್ದಾನೆ, ನಿನ್ನ ಜೀವನವೂ ಒಳ್ಳಯದಾಗುತ್ತದೆ ಎಂದು ನನ್ನ ಸ್ನೇಹಿತರೂ ನಂಬಿಸಿದ್ದರು. ಅದರಂತೆ 2020ರ ಡಿಸೆಂಬರ್ 21ರಂದು ನಮ್ಮಿಬ್ಬರ ವಿವಾಹ ನಡೆದಿತ್ತು. ಕೆಲದಿನದ ಬಳಿಕ ಈತನ ಬಗ್ಗೆ ಯುವತಿಗೆ ಗೊತ್ತಾಗಿ ಅಂತರ ಕಾಯ್ದುಕೊಳ್ಳಲು ಯತ್ನಿಸಿದ್ದರೂ ನನ್ನ ಮೇಲೆ ಅತ್ಯಾಚಾರ ನಡೆಸಿದ. ಮಾತ್ರೆ ತಿನ್ನಿಸಿ ಗರ್ಭಪಾತ ಮಾಡಿಸಿದ ಎಂದು ಯುವತಿ ದೂರಿದ್ದಾಳೆ.
ಆದರೆ ಮಾ.23ರಂದು ಗಂಗಾಧರನ ಮೊದಲ ಪತ್ನಿ ಯಶೋದಾ ತನ್ನ ಗಂಡನನ್ನು ಯಾರೋ ಅಪಹರಿಸಿ ಬಲವಂತವಾಗಿ ಮತಾಂತರಗೊಳಿಸಿ ವಿವಾಹ ನಡೆಸಿದ್ದಾರೆ ಎಂಬ ದೂರು ನೀಡಿದ್ದರು. ಪೊಲೀಸರು ಗಂಗಾಧರನನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದಾಗ ವಿಚಾರ ಬಯಲಾಗಿವೆ. ಈತನ ವಿರುದ್ಧ ಅತ್ಯಾಚಾರ ಕೇಸ್ ದಾಖಲಾಗಿದ್ದು ದಸ್ತಗಿರಿ ಮಾಡಲಾಗಿದೆ.
ಸದ್ಯದ ಮಾಹಿತಿ ಪ್ರಕಾರ ಈತನಿಗೆ ಎರಡು ವಿವಾಹವಾಗಿದ್ದು, ಐವರು ಮಕ್ಕಳಿದ್ದಾರೆ. ಇನ್ನೂ ಕೆಲವರನ್ನು ವಂಚಿಸಿ ಮದುವೆಯಾದ ಬಗ್ಗೆ ಮಾಹಿತಿ ಸಿಕ್ಕಿದ್ದು, ತನಿಖೆ ನಡೆಸುವುದಾಗಿ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.