

ವಿಜಯವಾಣಿ ಸುದ್ದಿಜಾಲ ಚನ್ನಪಟ್ಟಣ
ಪರಿಸರದ ಮೇಲಿನ ಕಾಳಜಿ ಹಾಗೂ ಪ್ರೀತಿ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಅದು ನಿತ್ಯ ನಿರಂತರವಾಗಿರಬೇಕು. ಆಗ ಮಾತ್ರ, ನಮ್ಮ ಮುಂದಿನ ಪೀಳಿಗೆ ಸುಭಿಕ್ಷವಾಗಿರಲಿದೆ ಎಂದು ಭಾರತ ವಿಕಾಸ್ ಪರಿಷತ್ ಕಣ್ವಶಾಖೆಯ ಪ್ರಾಂತ್ಯ ಉಪಾಧ್ಯಕ್ಷ ವಸಂತಕುಮಾರ್ ತಿಳಿಸಿದರು.
ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಭಾರತ ವಿಕಾಸ ಪರಿಷತ್, ಭಾರತ ಸೇವಾದಳ, ಲಯನ್ಸ್ ಸಂಸ್ಥೆ, ಎಸ್‌ಎಲ್ಎಂಎನ್ ಐಟಿಐ ಕಾಲೇಜು ಸಂಯುಕ್ತಾಶ್ರಯದಲ್ಲಿ ಅಪ್ಪಗೆರೆ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗಿಡನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಲವು ಕಾರಣಗಳಿಂದ ಈಗಾಗಲೇ ಪರಿಸರ ಸಾಕಷ್ಟು ಕಲುಷಿತಗೊಂಡಿದೆ. ಯುವ ಸಮುದಾಯಕ್ಕೆ ಪರಿಸರ ಪ್ರಜ್ಞೆ ಬೆಳೆಸುವಲ್ಲಿ ವಿಫಲಗೊಂಡಿರುವುದೇ ಇದಕ್ಕೆ ಕಾರಣ ಎನ್ನಬಹುದು. ನಗರೀಕರಣ ಸೇರಿ ಹಲವು ಕಾರಣಗಳಿಂದ ಪರಿಸರ ನಾಶ ಹೆಚ್ಚಾಗುತ್ತಿದೆ. ಇದು ಮುಂದುವರಿದರೆ ಭವಿಷ್ಯದಲ್ಲಿ ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪರಿಸರವನ್ನು ಉಳಿಸುವ ಹಾಗೂ ಬೆಳೆಸುವ ಕೆಲಸವಾಗಬೇಕು ಎಂದು ತಿಳಿಸಿದರು.
ಭಾರತ ಸೇವಾದಳದ ತಾಲೂಕು ಅಧ್ಯಕ್ಷ ಎಚ್. ಗೋವಿಂದಯ್ಯ ಮಾತನಾಡಿ, ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಅತೀವವಾದ ಕಾಳಜಿ ಇರಬೇಕು. ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವ ಜತೆಗೆ, ಗಿಡಮರಗಳನ್ನು ಬೆಳೆಸುವ ಪರಿಪಾಠ ಬೆಳೆಸಿಕೊಳ್ಳಬೇಕು. ಪ್ರಕೃತಿ ಸುಂದರವಾಗಿದ್ದರೆ, ಎಲ್ಲವೂ ಸುಂದರವಾಗಿರಲಿದೆ ಎಂದರು.
ನಿವೃತ್ತ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಬಿ.ಎನ್. ಕಾಡಯ್ಯ, ಭಾರತ ಸೇವಾದಳ ಜಿಲ್ಲಾ ಸಂಘಟಕ ಶಿವಕುಮಾರ್, ಪದಾಧಿಕಾರಿಗಳಾದ ಕರಿಯಪ್ಪ, ಕೂರಣಗೆರೆ ಕೃಷ್ಣಪ್ಪ, ಮುಖಂಡರಾದ ವೆಂಕಟಾಚಲಯ್ಯ, ಸಹ ಪ್ರಾಧ್ಯಾಪಕರಾದ ಕೆ. ಸುರೇಶ್, ಪ್ರದೀಪ್ ಇತರರು ಇದ್ದರು.