

ಪಾಂಡವಪುರ: ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸರ್ಕಾರಿ ಸೇವೆಗಳು ನಿಮ್ಮನೆ ಬಾಗಿಲಿಗೆ, ಇದು ಸೇವೆಯಲ್ಲ ನಮ್ಮ ಕರ್ತವ್ಯ ಕಾರ್ಯಕ್ರಮ ಎರಡನೇ ದಿನವಾದ ಶುಕ್ರವಾರವೂ ಮುಂದುವರಿಯಿತು.
ತಾಲೂಕಿನ ಕೆನ್ನಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ನೂರಾರು ಜನರು ವಿವಿಧ ಇಲಾಖೆಗಳಿಗೆ ಅರ್ಜಿ ಸಲ್ಲಿಸಿದರು. ಕಂದಾಯ ಇಲಾಖೆಗೆ ಅತಿ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಸ್ಥಳದಲ್ಲಿ ಕಂದಾಯ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ರೇಷ್ಮೆ, ತೋಟಗಾರಿಕೆ, ಕೃಷಿ, ಕಾವೇರಿ ನಿರಾವರಿ ನಿಗಮ, ಕುಡಿಯುವ ನೀರು ಮತ್ತು ನೈರ್ಮಲ್ಯ, ಪಂಚಾಯತ್ ರಾಜ್ ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳು ಹಾಜರಿದ್ದು ಸಾರ್ವಜನಿಕರ ದೂರು ಆಲಿಸಲಿದ್ದಾರೆ. ಮೊದಲನೇ ದಿನವಾದ ಗುರುವಾರ ವಿವಿಧ ಇಲಾಖೆಗಳ ಅಡಿಯಲ್ಲಿ 81 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇವುಗಳ ಪೈಕಿ ಕೆಲವೊಂದನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲಾಗಿದೆ.
ಕಾರ್ಯಕ್ರಮದ ಯಶಸ್ಸಿಗಾಗಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕೆನ್ನಾಳು ಗ್ರಾಮದ ಪ್ರತಿ ಮನೆಗೂ ತೆರಳಿ ಕಾರ್ಯಕ್ರದ ಉದ್ದೇಶ ವಿವರಿಸಿ ಸರ್ಕಾರದಿಂದ ಸಿಗಬೇಕಾದ ಯಾವುದೇ ಸೌಲಭ್ಯಗಳನ್ನು ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕಾಗಿ ಯಾರೂ ಕಚೇರಿಗಳನ್ನು ಅಲೆಯಬೇಕಿಲ್ಲ. ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಂಪರ್ಕ ಸಾಧಿಸಿ ಎಲ್ಲ ಕೆಲಸಗಳನ್ನು ಖುದ್ದು ಮಾಡಿಕೊಡಲಿದ್ದಾರೆ. ಹೀಗಾಗಿ ಪ್ರತಿಯೊಬ್ಬರೂ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಆಟೋ ಪ್ರಚಾರದ ಮೂಲಕ ಜನರಿಗೆ ಅರಿವು ಮೂಡಿಸಲಾಯಿತು. ಈವರೆಗೂ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಸಾರ್ವಜನಿಕ ಸಮಸ್ಯೆಗಳಾದ ರಸ್ತೆ, ಚರಂಡಿ ನಿರ್ಮಾಣ, ಸ್ಮಶಾನ, ಬೀದಿ ಬದಿ ವಿದ್ಯುತ್ ದೀಪ, ಸ್ವಚ್ಛತೆೆಗೆ ಸಂಬಂಧಿಸಿವೆ.
ಅಂಗನವಾಡಿ ಕಾರ್ಯಕರ್ತೆಯರು ಕೆನ್ನಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಪ್ರತಿ ಮನೆಗಳಿಗೆ ತೆರಳಿ ಲಭ್ಯವಿರುವ ಸರ್ಕಾರಿ ಸೇವೆಗಳ ವಿವರ ನೀಡಿ ಜನರಿಂದ ಮಾಹಿತಿ ಪಡೆದು ಸಂಬಂಧಪಟ್ಟ ಇಲಾಖೆಗಳಿಗೆ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಕಾರ್ಯಕರ್ತೆಯರು ನೀಡುವ ಮಾಹಿತಿ ಮೇರೆಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅವಶ್ಯಕತೆ ಇರುವ ಸೇವೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಇದರಲ್ಲಿ ವಿಧವಾ ವೇತನ, ಸಂಧ್ಯಾ ಸುರಕ್ಷಾ, ಅಂಗವಿಕಲತೆ, ಜನನ ಮತ್ತು ಮರಣ ಪತ್ರ, ಜಾತಿ ಹಗೂ ಆದಾಯ ದೃಢೀಕರಣ, ಪೌತಿ ಖಾತೆ, ಪಹಣಿ ತಿದ್ದುಪಡಿ, ಜಮೀನು ಸರ್ವೇ, ಹದ್ದುಬಸ್ತು, ಪೋಡಿ, ವಿಭಾಗ ಹಾಗೂ ಕೃಷಿ, ತೋಟಗಾರಿಕೆ, ರೇಷ್ಮೆ ಮುಂತಾದ ಹಲವು ಇಲಾಖೆಗಳಿಂದ ಸಿಗಬಹುದಾದ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಶುಕ್ರವಾರದಿಂದ ಮಾಹಿತಿ ಸಂಗ್ರಹ ನಡೆಸಲಾಗುತ್ತಿದ್ದು, ಮುಂದಿನ ಹದಿನೈದು ದಿನಗಳಲ್ಲಿ ಇಡೀ ಗ್ರಾಪಂ ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆ ಇರಬಾರದು ಎಂಬ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ.
ನೀರಾವರಿ, ಲೋಕೋಪಯೋಗಿ, ಜಿಲ್ಲಾ ಪಂಚಾಯತ್ ಇಲಾಖೆಗಳ ಮೂಲಕ ಅಗತ್ಯವಿರುವ ಕಡೆಗಳಲ್ಲಿ ರಸ್ತೆ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಸರ್ವೇ ಇಲಾಖೆ ಮುಖಾಂತರ ಸರ್ಕಾರಿ ಜಾಗಗಳ ಸರ್ವೇ ನಡೆಸಲಾಗುತ್ತಿದೆ. ಆರೋಗ್ಯ ಇಲಾಖೆ ಮೂಲಕ ಆರೋಗ್ಯ ತಪಾಸಣೆ ಜತೆಗೆ ಗ್ರಾಮದ ಜನರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಯನ್ನು ಗುರುತಿಸಿ ಸೂಕ್ತ ಮಾರ್ಗದರ್ಶನದೊಂದಿಗೆ ಚಿಕಿತ್ಸೆ ಕೊಡಿಸುವ ಬಗ್ಗೆಯೂ ಯೋಜನೆ ರೂಪಿಸಲಾಗಿದೆ.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಜನರಿಗೆ ಕಾರ್ಯಕ್ರಮದ ಬಗ್ಗೆ ಇನ್ನೂ ಅರಿವು ಮೂಡಿಲ್ಲ. ಇದರ ಬಗ್ಗೆ ಅಧಿಕಾರಿಗಳಿಗೂ ಗೊಂದಲ ಇದೆ. ಒಂದೇ ವಿಂಡೋ ಮಾದರಿಯಲ್ಲಿ ಯಾವ ರೀತಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂಬುದನ್ನು ಅಧಿಕಾರಿಗಳಿಗೆ ವಿವರಿಸಲಾಗಿದೆ. ಕಾರ್ಯಕ್ರಮ ಯಶಸ್ವಿಯಾದರೆ ಬಹುತೇಕ ಇಲಾಖೆಗಳ ಶೇ.80 ಕೆಲಸ ಕಡಿಮೆಯಾಗಿ ಅಧಿಕಾರಿಗಳ ಮೇಲಿನ ಒತ್ತಡ ತಗ್ಗುತ್ತದೆ. ಜತೆಗೆ ಜನ ಸರ್ಕಾರಿ ಕಚೇರಿಗಳನ್ನು ಅಲೆಯುವುದು ತಪ್ಪುತ್ತದೆ. ಇಡೀ ದೇಶದಲ್ಲೇ ಒತ್ತುವರಿ ಸಮಸ್ಯೆ ಇದೆ. ನಾವು ಅದನ್ನು ಸಾಧ್ಯವಾದಷ್ಟು ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ. ತಾಲೂಕು ಮಟ್ಟದ ಅಧಿಕಾರಿಗಳು ಇದಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.