

ರಾಮನಗರ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಹೆಸರಲ್ಲಿ ವ್ಯಕ್ತಿಯೊಬ್ಬರಿಂದ ಬರೋಬ್ಬರಿ ಅರ್ಧ ಕೋಟಿ ಹಣವನ್ನು ದೋಚಿರುವ ಪ್ರಕರಣ ಕುಂಬಳಗೂಡು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಗೆರಾರ್ಡ್ ಬ್ರಿಟ್ಟೋ ಸ್ಟೇನ್ಲಿ ಹಣ ಕಳೆದುಕೊಂಡವರು. ಕೆಂಗೇರಿ ಬಳಿಯ ಕಂಬೀಪುರದ ಅಪಾರ್ಟ್‌ಮೆಂಟ್ ಒಂದರಲ್ಲಿ ಇರುವ ಇವರು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬಂದ ಜಾಹೀರಾತನ್ನು ನಂಬಿ ಷೇರು ಮಾರುಕಟ್ಟೆಗೆ ಸಂಬಂಧಿಸಿದ ಸಲಹೆ ನೀಡುವ ವಾಟ್ಸ್ ಆಫ್ ಗ್ರೂಪ್‌ಗೆ ಸೇರಿಕೊಂಡಿದ್ದಾರೆ.
ನಂತರ ಈ ಗ್ರೂಪ್‌ನಲ್ಲಿ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಹಣ ಹೂಡಿಕೆ ಮಾಡಿ ಹಣ ಗಳಿಸಿ ಎನ್ನುವ ಸಂದೇಶವನ್ನು ಸಂದೇಶವೊಂದು ಬಂದಿದ್ದು, ಇದನ್ನು ನಂಬಿ ಆ್ಯಪ್ ಡೌನ್‌ಲೌಡ್ ಮಾಡಿಕೊಂಡು ಹೂಡಿಕೆ ಮಾಡಿದ್ದಕ್ಕೆ ಮೊದಲು ಸಣ್ಣಪುಟ್ಟ ಹಣವನ್ನು ಡ್ರಾ ಮಾಡಿಕೊಳ್ಳಲು ಅವಕಾಶ ಮಾಡಿಕೊಂಡಿದ್ದಾರೆ. ನಂತರ 2024ರ ಮೇ.24ರಿಂದ ಜೂನ್.10ವರೆಗೆ ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ 50.55 ಲಕ್ಷ ರೂ ಆನ್‌ಲೈನ್ ಮೂಲಕವೇ ವರ್ಗಾವಣೆ ಮಾಡಿದ್ದಾರೆ.
ಆದರೆ, ಜೂ.24ರಂದು ವಾಟ್ಸ್ ಆಪ್ ಗ್ರೂಪ್ ನಿಕ್ಷ್ಕ್ರಿಯಗೊಂಡಿದ್ದು, ನಂತರ ಕಂಪನಿ ನಂಬರ್ ತೆಗೆದುಕೊಂಡು ಕರೆ ಮಾಡಿದಾಗ ಇತರಹದ ಯಾವುದೇ ವಾಟ್ಸ್ ಆಪ್ ಗ್ರೂಪ್ ರಚಿಸಿರುವುದಿಲ್ಲ ಎಂದು ತಿಳಿಸಿದ್ದಾರೆ. ನಂತರ ತಾವು ಮೋಸ ಹೋಗಿರುವುದು ಕಂಡು ತಿಳಿದ ಹಿನ್ನೆಲೆಯಲ್ಲಿ ಗೆರಾರ್ಡ್ ಬ್ರಿಟ್ಟೋ ಸ್ಟೇನ್ಲಿ ಕುಂಬಳಗೂಡು ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದಾರೆ.