

*ಅರ್ಕಾವತಿ ನದಿ ಬ್ರಿಡ್ಜ್‌ನಲ್ಲಿ ಬೆಳೆದ ವೃಕ್ಷಗಳು
* ಗಿಡ ಗಂಟಿ ತೆರವಿಗೆ ಆಗ್ರಹ
* ಶಾಶ್ವತ ಪರಿಹಾರ ಕಲ್ಪಿಸುವಂತೆ ಸಾರ್ವಜನಿಕರ ಪಟ್ಟು
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಸ್ಥಳೀಯ ಆಡಳಿತ ಸಮರ್ಪಕವಾಗಿ ನಿರ್ವಹಣೆ ಮಾಡದ ಪರಿಣಾಮ ಸೇತುವೆಗಳೇ ಮರಗಳು ಬೆಳೆಯುವ ಸ್ಥಾನಗಳಾಗಿ ಮಾರ್ಪಟ್ಟಿವೆ.
ಹೌದು.ರಾಮನಗರದ ಬಸ್ ನಿಲ್ದಾಣದಿಂದ ರೈಲು ನಿಲ್ದಾಣ ಮುಖ್ಯರಸ್ತೆಗೆ ಹೋಗುವ ಅರ್ಕಾವತಿ ನದಿ ಸೇತುವೆ ಮೇಲೆ ಬೆಳೆದಿರುವ ವೃಕ್ಷಗಳೇ ಇದಕ್ಕೆ ಸಾಕ್ಷಿ. ಸೇತುವೆಯ ಎರಡೂ ಬದಿ ಹಾಗೂ ಸೇತುವೆ ಮಧ್ಯ ಭಾಗ ಅರಳಿ ಮತ್ತಿತರ ಗಿಡಗಳು ಬೆಳೆದಿವೆ. ಕಳೆದ ಏಳೆಂಟು ತಿಂಗಳ ಹಿಂದಷ್ಟೇ ಗಿಡಗಳನ್ನು ಸಾರ್ವಜನಿಕರ ಆಗ್ರಹದ ಮೇಲೆ ನಗರಸಭೆ ತೆರವು ಮಾಡಿತ್ತು. ಆದರೆ, ಮತ್ತೆ ಬೆಳೆಯುತ್ತಿವೆ. ಸೇತುವೆ ಮಧ್ಯೆ ಬೆಳೆಯುತ್ತಿರುವ ಕಾರಣದಿಂದ ಇವುಗಳ ಬೇರು ದಪ್ಪವಾಗಿ ಸೇತುವೆಗೆ ಹಾನಿಯಾಗುವ ಸಾಧ್ಯತೆಯಿದೆ. ಆದ್ದರಿಂದ ಬೇರು ಸಮೇತ ಕಿತ್ತು ಗಿಡ ತೆರವು ಮಾಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಸೇತುವೆ ಸಿಮೆಂಟ್ ಸೀಳಿಕೊಂಡು ಸೇತುವೆಯುದ್ದಕ್ಕೂ ಅರಳಿ ವೃಕ್ಷಗಳು 10-15 ಅಡಿ ಉದ್ದ ಬೆಳೆದು ನಿಂತು ಸೇತುವೆಗೆ ಹಾನಿ ಮಾಡುತ್ತಿವೆ.
ಅರ್ಕಾವತಿ ನದಿ ಸೇತುವೆ ಸ್ವಾತಂತ್ರ್ಯ ಪೂರ್ವದ ಸೇತುವೆಯಾಗಿದ್ದು, ಬ್ರಿಟಿಷ್ ಮತ್ತು ಮೈಸೂರು ಮಹಾರಾಜರ ಆಳ್ವಿಕೆ ಕಾಲದಲ್ಲಿ ಕಟ್ಟಿದ ಸೇತುವೆ ಇದಾಗಿದೆ. ಬೆಂಗಳೂರು-ಮೈಸೂರು ಹೊಸ ರಸ್ತೆ ಆಗುವ ಮೊದಲು ಮೈಸೂರು - ಬೆಂಗಳೂರಿಗೆ ಇದೇ ಸೇತುವೆ ಮೇಲೆ ವಾಹನಗಳು ಓಡಾಟ ನಡೆಸುತ್ತಿದ್ದವು. ಮೈಸೂರು-ಬೆಂಗಳೂರಿಗೆ ಇದೇ ಸಂಪರ್ಕ ಕೊಂಡಿಯಾಗಿತ್ತು.
ಪ್ರತಿನಿತ್ಯ ಸಾವಿರಾರು ವಾಹನಗಳು ಸೇತುವೆ ಮೇಲೆ ಸಂಚರಿಸುತ್ತವೆ. ರಾಮನಗರದ ನದಿ ದಂಡೆ ಎರಡೂ ಕಡೆ ಓಡಾಟಕ್ಕೆ ವಾಣಿಜ್ಯ ವಹಿವಾಟಿಗೆ ಸೇತುವೆ ಪ್ರಮುಖವಾಗಿದೆ. ಸೇತುವೆ ದಾಟಿದರೆ ಸಾಕು ನೂರಾರು ಅಂಗಡಿಗಳು ಕಾಣಸಿಗುತ್ತವೆ. ರೈಲು ನಿಲ್ದಾಣಕ್ಕೆ ಹೋಗಬೇಕಾದರೆ ಈ ಸೇತುವೆಯೇ ಪ್ರಮುಖ ಸಂಪರ್ಕ. ರಾಮನಗರದ ಶೇ.70 ಜನರು ಈ ಸೇತುವೆ ಬಳಸುತ್ತಾರೆ. ನಗರದ ಪ್ರಮುಖ ವಾಣಿಜ್ಯ ಕೇಂದ್ರ ಸಂಪರ್ಕದ ಸೇತುವೆಯಾಗಿದೆ.
ರಸ್ತೆ, ಚರಂಡಿ ಸೇರಿ ಹಲವು ಅಭಿವೃದ್ಧಿ ಕೈಗೊಂಡು ನಗರ ಸಮಗ್ರ ಅಭಿವೃದ್ಧಿಗೆ ಶ್ರಮಿಸುಲಾಗುತ್ತಿದೆ. ನಗರದ ಸೇತುವೆಗಳ ಸುರಕ್ಷತೆಗೂ ಹೆಚ್ಚಿನ ಗಮನ ನೀಡಲಾಗಿದೆ. ಅರ್ಕಾವತಿ ನದಿಗೆ ಕಸ ಕಡ್ಡಿ ಸೇರದಂತೆ ಸೇತುವೆ ಎರಡೂ ಬದಿಯಲ್ಲಿ ಜಾಲರಿ ಅಳವಡಿಸಿದೆ. ಸೇತುವೆ ಮಧ್ಯೆ ಬೆಳೆದಿರುವ ಗಿಡಗಳನ್ನು ಕೆಲವು ತಿಂಗಳ ಹಿಂದೆ ತೆರವು ಮಾಡಲಾಗಿತ್ತು. ಆದರೆ, ಮತ್ತೆ ಬೆಳೆದಿದ್ದು, ತೆರವು ಮಾಡಲು ಅಗತ್ಯಕ್ರಮ ಕೈಗೊಳ್ಳಲಾಗುತ್ತದೆ. ಕೆ.ಶೇಷಾದ್ರಿ, ಅಧ್ಯಕ್ಷರು ನಗರಸಭೆ ರಾಮನಗರ. ==ನಗರಸಭೆ ಕಳೆದಬಾರಿ ಸೇತುವೆ ಮೇಲೆ ಬೆಳೆದಿದ್ದ ಗಿಡ ತೆಗೆದು ಸಾರ್ವಜನಿಕರ ಪ್ರಶಂಸೆಗೂ ಪಾತ್ರವಾಗಿತ್ತು. ಆದರೆ, ಮತ್ತೆ ಗಿಡಗಳು ಬೆಳೆಯುತ್ತಿವೆ. ಮಳೆಗಾಲ ಪ್ರಾರಂಭವಾಗಿರುವ ಕಾರಣ ಹೆಚ್ಚಿನ ರೀತಿಯಲ್ಲಿ ಬೆಳವಣಿಗೆ ಕಾಣುತ್ತವೆ. ಕಾಂಡ ದಪ್ಪವಾಗುವ ಮುನ್ನ ಈಗಲೇ ಗಿಡ ತೆರವು ಮಾಡಲು ನಗರಸಭೆ ಮುಂದಾಗಬೇಕು. ರಾ.ಶಿ.ಬಸವರಾಜು, ರಾಮನಗರ.ಸೇತುವೆ ಮಧ್ಯೆ ಗಿಡಗಳು ಬೆಳೆದಿದ್ದ ಕಾರಣ ತೆರವು ಮಾಡಲು ನಗರಸಭೆ ಕ್ರೇನ್ ಮೂಲಕ ಮಾನವ ಸಂಪನ್ಮೂಲ ಬಳಸಿ ಗಿಡ ತೆರವು ಮಾಡಲಾಗಿತ್ತು. ಮತ್ತೆ ಗಿಡ ಬೆಳೆವಣಿಗೆ ಕಾಣುತ್ತಿರುವುದು ನಗರಸಭೆ ಗಮನಕ್ಕೆ ಬಂದಿದೆ. ಮಳೆ ಬರುತ್ತಿದ್ದು, ನದಿಯಲ್ಲಿ ನೀರು ಹರಿಯುತ್ತಿರುವ ಕಾರಣ ಗಿಡ ತೆರವಿಗೆ ಒಂದಷ್ಟು ಸಮಯ ಬೇಕಾಗಿದೆ. ಮಳೆ ಮತ್ತು ನದಿಯಲ್ಲಿ ನೀರು ಕಡಿಮೆಯಾದರೆ ನಗರಸಭೆ ಗಿಡ ತೆರವು ಮಾಡಲಿದೆ. ಡಾ ಜಯಣ್ಣ, ಪೌರಾಯುಕ್ತರು, ನಗರಸಭೆ, ರಾಮನಗರ.