ನಷ್ಟದ ಸುಳಿಗೆ ಸಿಲುಕಿದ ಪಿಎಲ್‌ಡಿ ಬ್ಯಾಂಕ್‌ಗಳು

FotoJet
Published on

ಸಾಲ ಮರುಪಾವತಿಸಲು ಅಧ್ಯಕ್ಷ ಗೋವಿಂದನಹಳ್ಳಿ ನಾಗರಾಜು ಮನವಿ

ಚನ್ನಪಟ್ಟಣ: ರಾಜ್ಯದಲ್ಲಿರುವ ಬಹುತೇಕ ಪಿಎಲ್‌ಡಿ ಬ್ಯಾಂಕ್‌ಗಳು ನಷ್ಟದಲ್ಲಿದ್ದು, ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸುವ ಮೂಲಕ ಬ್ಯಾಂಕ್ ಉಳಿವಿಗೆ ಸಹಕರಿಸಬೇಕೆಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದನಹಳ್ಳಿ ನಾಗರಾಜು ಮನವಿ ಮಾಡಿದರು.ನಗರದ ಶತಮಾನೋತ್ಸವ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಬ್ಯಾಂಕಿಗೆ ನೂತನ ಸುಸಜ್ಜಿತ ಕಟ್ಟಡ ಕಟ್ಟಲು ಆಡಳಿತ ಮಂಡಳಿ ಉತ್ಸುಕವಾಗಿದೆ. ಇನ್ನೆರಡು ತಿಂಗಳಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.


ರಾಜ್ಯದಲ್ಲಿ ಬೆರಳೆಣಿಕೆಯಷ್ಟು ಪಿಎಲ್‌ಡಿ ಬ್ಯಾಂಕ್ ಬಿಟ್ಟು ಉಳಿದ ಎಲ್ಲ ಬ್ಯಾಂಕ್‌ಗಳು ನಷ್ಟದ ಹಾದಿಯಲ್ಲಿವೆ. ಬ್ಯಾಂಕ್‌ಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಹೊಣೆ ಸದಸ್ಯರ ಮೇಲಿದೆ. ಒಂದು ಕಾಲದಲ್ಲಿ ಬೇರೆ ಬ್ಯಾಂಕ್‌ಗಳೇ ಇಲ್ಲದ ಸಮಯದಲ್ಲಿ ನಮ್ಮ ಬ್ಯಾಂಕ್ ಸದಸ್ಯರಿಗೆ ಸಾಲ ನೀಡಿದೆ. ಸಾಲ ಪಡೆದವರೆಲ್ಲರೂ ಸಕಾಲಕ್ಕೆ ಮರುಪಾವತಿ ಮಾಡಿದ್ದರೆ ಎಲ್ಲ ಬ್ಯಾಂಕ್‌ಗಳಿಗಿಂತ ಬಲಿಷ್ಠವಾಗಿರುತ್ತಿತ್ತು. ಆದರೆ, ಸಹಕಾರಿ ಸಂಸ್ಥೆಯಾದ ಕಾರಣ ಕಠಿಣ ಕ್ರಮ ಆಗದೇ ಇಂದು ಈ ಪರಿಸ್ಥಿತಿಗೆ ಬಂದಿದೆ ಎಂದರು.


ನಮ್ಮ ಆಡಳಿತ ಮಂಡಳಿ ದುಂದುವೆಚ್ಚಗಳಿಗೆ ಆಸ್ಪದ ಕೊಡದ ಬ್ಯಾಂಕ್‌ನ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಎಲ್ಲ ಸದಸ್ಯರು ಹಾಗೂ ನಿರ್ದೇಶಕರು ಒಗ್ಗಟ್ಟಾಗಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ಆದಾಯ ತರುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಿದ್ದು, ಸದಸ್ಯರು ಕೈಜೋಡಿಸುವಂತೆ
ಮನವಿ ಮಾಡಿದರು.


ನಿರ್ದೇಶಕ ಮಾಗನೂರು ಗಂಗರಾಜು, ಕಳೆದ ಸಾಲಿನ ನಡಾವಳಿ ಪುಸ್ತಕ ಓದಿ ಸದಸ್ಯರ ಅನುಮೋದನೆ ಪಡೆದರು. ಮತ್ತೊರ್ವ ನಿರ್ದೇಶಕ ರಂಗರಾಜು ಪ್ರಸಕ್ತ ಸಾಲಿನ ಆಯವ್ಯಯ ಮಂಡಿಸಿದರು. ಸದಸ್ಯರು ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಸಾಲ ಪಡೆಯಲು ಇರುವ ದಾಖಲೆಗಳನ್ನು ಸರಳೀಕರಿಸುಂತೆ ಮನವಿ ಮಾಡಿದರು. ಬಹಳ ವರ್ಷಗಳ ಹಿಂದೆ ಕಿರುಸಾಲವನ್ನು ಬ್ಯಾಂಕ್ ನಿರ್ದೇಶಕರೇ ಭರಿಸಿ, ಬ್ಯಾಂಕ್‌ಗೆ ಸಹಾಯಧನ ಪಡೆದಿರುವ ಬಗ್ಗೆ ಸದಸ್ಯರು ಮೆಚ್ಚುಗೆ ಸೂಚಿಸಿದರು.


ನಿರ್ದೇಶಕರಾದ ಚಿಕ್ಕೇನಹಳ್ಳಿ ಮೋಹನ್, ರೇವಹೆಗ್ಗಡೆ, ರಂಗರಾಜು, ಜೆ.ಆರ್.ಷಣ್ಮುಂಗರಾವ್ ಸಾಲಂಕಿ, ಅಬ್ಬೂರುದೊಡ್ಡಿ ವೆಂಕಟೇಶ್, ಮದ್ದೂರಯ್ಯ, ಜಯಮ್ಮ, ಸಿದ್ದರಾಜು, ಈಶ್ವರಯ್ಯ, ಪ್ರಭಾರ ವ್ಯವಸ್ಥಾಪಕ ರಾಮು, ನಿವೃತ್ತ ವ್ಯವಸ್ಥಾಪಕ ರವಿಶಂಕರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net