ಸೋತು ಗೆಲ್ಲುವುದರಿಂದ ಮೂಡುತ್ತದೆ ಆತ್ಮವಿಶ್ವಾಸ: ಎಂ.ಆರ್.ಪೂವಮ್ಮ ಅಭಿಪ್ರಾಯ

Bel_Sdm Sports
Published on

ಬೆಳ್ತಂಗಡಿ: ಸೋತು ಗೆಲ್ಲುವ ಸಾಧ್ಯತೆಗಳು ಅದಮ್ಯ ಆತ್ಮವಿಶ್ವಾಸವನ್ನು ಮೂಡಿಸಿ ಬದುಕನ್ನು ಸುಂದರಗೊಳಿಸುತ್ತದೆ ಎಂದು ಅರ್ಜುನ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು, ಒಲಿಂಪಿಯನ್ ಎಂ.ಆರ್.ಪೂವಮ್ಮ ಹೇಳಿದರು.

ಬುಧವಾರ ಉಜಿರೆ ಎಸ್‌ಡಿಎಂ ಕಾಲೇಜಿನ ವಾರ್ಷಿಕ ಕ್ರೀಡಾಕೂಟಕ್ಕೆ ಧ್ವಜಾರೋಹಣ ನಡೆಸಿ, ಕ್ರೀಡಾಜ್ಯೋತಿ ಸ್ವೀಕರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಸ್ಪರ್ಧೆಗಳಲ್ಲಿ ಸೋಲು-ಗೆಲುವು ಸಾಮಾನ್ಯ. ಹಿನ್ನಡೆಯನ್ನು ಸವಾಲಾಗಿ ತೆಗೆದುಕೊಂಡು ಸತತ ಪ್ರಯತ್ನಗಳ ಮೂಲಕ ಗೆಲುವಿನ ಹಾದಿಯಲ್ಲಿ ಸಾಗಬಹುದು. ರತ್ನವರ್ಮ ಕ್ರೀಡಾಂಗಣ ನನ್ನ ವೃತ್ತಿ ಜೀವನದಲ್ಲಿ ಮಹತ್ವದ ಸ್ಥಾನ ಹೊಂದಿದೆ. ಇಲ್ಲಿನ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡುವಂತಾಗಲಿ. ಕ್ರೀಡಾಜೀವನದ ಆರಂಭದಲ್ಲಿ ಸರಿಯಾದ ಮಾರ್ಗದರ್ಶನ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಗುರುಗಳಾದ ವಸಂತ್ ಹೆಗಡೆ ಮುಖ್ಯಪಾತ್ರ ವಹಿಸಿದ್ದಾರೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಮಾತನಾಡಿ, ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ದೃಢತೆಯನ್ನು ಕಾಯ್ದುಕೊಳ್ಳುವ ಮೂಲಕ ಬದುಕಿನ ಯಾವುದೇ ಸವಾಲುಗಳನ್ನು ಸುಲಭವಾಗಿ ಎದುರಿಸಬಹುದು ಎಂದರು.

ಪೂವಮ್ಮ ಅವರನ್ನು ಸನ್ಮಾನಿಸಲಾಯಿತು. ಪ್ರೊಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಕಾಲೇಜಿಗೆ ಕೀರ್ತಿ ತಂದಿರುವ ಗಗನ್ ಗೌಡ ಅವರನ್ನು ಗೌರವಿಸಲಾಯಿತು. ಕ್ರೀಡಾಕೂಟದ ಅಂಗವಾಗಿ ವಿದ್ಯಾರ್ಥಿಗಳಿಗೆ ಪಥಸಂಚಲನ ಸ್ಪರ್ಧೆ ನಡೆಯಿತು. ಅಂತಿಮ ಬಿ.ಕಾಂ ‘ಸಿ’ ವಿದ್ಯಾರ್ಥಿಗಳು ಪ್ರಥಮ ಬಹುಮಾನ, ಪ್ರಥಮ ಬಿಸಿಎ ‘ಬಿ’ ವಿದ್ಯಾರ್ಥಿಗಳು ದ್ವಿತೀಯ ಮತ್ತು ಬಿ.ವೋಕ್‌ನ ರೀಟೈಲ್ ಆಂಡ್ ಮ್ಯಾನೇಜ್ಮೇಂಟ್ ತೃತೀಯ ಬಹುಮಾನ ಪಡೆದುಕೊಂಡರು. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ರಮೇಶ್ ಎಚ್. ಉಪಸ್ಥಿತರಿದ್ದರು. ಡಾ.ಸುವೀರ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net