

ಕುಂದಾಪುರ: ಕುಂದಾಪುರ ಸಮೀಪದ ತಲ್ಲೂರು ಪ್ರವಾಸಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶನಿವಾರ ಬೆಳಗ್ಗೆ ಬೈಂದೂರಿನಿಂದ ಕುಂದಾಪುರಕ್ಕೆ ಬರುತ್ತಿದ್ದ ಖಾಸಗಿ ಬಸ್ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಸೇರಿ 12 ಮಂದಿ ಗಾಯಗೊಂಡಿದ್ದಾರೆ.
ಖಾಸಗಿ ಬಸ್ ಚಾಲಕ ತಲ್ಲೂರು ಸಮೀಪದ ಪ್ರವಾಸಿ ಪೆಟ್ರೋಲ್ ಬಂಕ್ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪ್ರಯಾಣಿಕರೊಬ್ಬರನ್ನು ಹತ್ತಿಸಿಕೊಂಡು ಚಲಿಸುತ್ತಿರುವಾಗ ಹಿಂದಿನಿಂದ ಸರಕು ತುಂಬಿಸಿಕೊಂಡು ಬರುತ್ತಿದ್ದ ಲಾರಿ ಬಸ್ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದು, ಬಸ್ ಹಿಂಭಾಗ ಮತ್ತು ಲಾರಿ ಮುಂಭಾಗ ನಜ್ಜುಗುಜ್ಜಾಗಿದೆ. ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿ ಪ್ರಸಾದ್ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದೇ ಶಾಲೆ ವಿದ್ಯಾರ್ಥಿಗಳಾದ ಶ್ರೇಯಸ್ ಪೂಜಾರಿ, ದೀಪಶ್ರೀ, ತನುಷ್, ಪ್ರೀತಮ್, ಕೋಟ ಆಶ್ರಿತಾ, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರಾದ ಅಶ್ಮಿತಾ ಹಾಗೂ ಅಶ್ವಿನಿ, ಇತರ ಪ್ರಯಾಣಿಕರಾದ ಶಿವರಾಂ, ವಿದ್ಯಾ, ಸತೀಶ್, ದೀಪ ಹಾಗೂ ಸುಕ್ರ ಎಂಬುವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.