ನಗರದ ಅತಿ ಉದ್ದದ ಮೆಟ್ರೋ ಮಾರ್ಗ!

metro
Published on

ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದು, ಇದೀಗ ನಗರದಲ್ಲಿ ವಿವಿಧ ಮೆಟ್ರೋ ಯೋಜನೆಗಳ ಕುರಿತು ಚರ್ಚೆ ಅಧಿಕವಾಗುತ್ತಿದೆ. ನಗರದಲ್ಲೇ ಅತಿ ಉದ್ದದ ಮಾರ್ಗವನ್ನು ನಿಮಾರ್ಣ ಮಾಡಲು ಬಿಎಂಆರ್​ಸಿಎಲ್​ ಯೋಜನೆ ರೂಪಿಸುತ್ತಿದೆ.

ಅದರಲ್ಲಿ ಪಿಂಕ್​ ಲೈನ್​ ಮೆಟ್ರೋ ಸುರಂಗ ಮಾರ್ಗದ ಶೇ.90 ರಷ್ಟು ಕಾಮಗಾರಿ ಮುಗಿದಿದ್ದು, ಆರು ಎಲಿವೇಟೆಡ್​ ಮೆಟ್ರೋ ಸ್ಟೇಷನ್​ಗಳನ್ನು ಮುಂದಿನ ವರ್ಷದಲ್ಲಿ ಲೋಕಾರ್ಪಣೆ ಮಾಡಲು ಬಿಎಂಆರ್​ಸಿಎಲ್​ ಯೋಚಿಸಿದೆ. ಇದೀಗ ಈ ಮಾರ್ಗವನ್ನು ಕಾಡುಗೋಡಿ ಟ್ರೀ ಪಾರ್ಕ್​ ವರೆಗೆ ವಿಸ್ತರಣೆ ಮಾಡಲು ಮುಂದಾಗಿದೆ. ಈ ಮಾರ್ಗ ಓಪನ್​ ಆದರೆ, ಬೆಂಗಳೂರಿನಲ್ಲೇ ಅತಿ ಉದ್ದದ ಮೆಟ್ರೋ ಮಾರ್ಗವಾಗಲಿದೆ.

ಪಿಂಕ್​ ಲೈನ್​ ಮೆಟ್ರೋ ಮಾರ್ಗವು ಕಾಳೇನ ಅಗ್ರಹಾರ (ಗೊಟ್ಟಿಗೆರೆ) ಜಿಗಣಿ, ಆನೇಕಲ್​, ಅತ್ತಿಬೆಲೆ, ಸರ್ಜಾಪುರ, ವರ್ತೂರು, ಕಾಡುಗೋಡಿ ಟ್ರೀ ಪಾರ್ಕ್​ (68 ಕಿ.ಮೀ.) ಮಾರ್ಗದಲ್ಲಿ ಸಂಚಾರ ಮಾಡಲಿದೆ. ಸದ್ಯ 21.3 ಕಿ. ಮೀ. ಕಾಳೇನ ಅಗ್ರಹಾರದಿಂದ ನಾಗವಾರದ ವರೆಗೆ ಕಾಮಗಾರಿ ನಡೆಯುತ್ತಿದ್ದು, ಪಿಂಕ್​ ಲೈನ್​ನ 2ನೇ ಹಂತದಲ್ಲಿ ಉಳಿದ ಕಾಮಗಾರಿಗಳು ನಡೆಯಲಿದೆ.

ಪ್ರಯಾಣ ದರ ಇಳಿಕೆಗೆ ಆಗ್ರಹ: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ 19.15 ಕಿ.ಮೀ. ಕಾರ್ಯಾಚರಣೆ ಇದ್ದು, ಗರಿಷ್ಠ ದರ 60 ರೂ. ಇದೆ. ಆದರೆ, ಸಂಚಾರ ಸಿಕ್ಕಿನ ದೊಡ್ಡ ಸಮಸ್ಯೆಗೆ ಹಳದಿ ಹಾದಿ ದಾರಿ ತೋರಿಸಿದ್ದರೂ ಪ್ರಯಾಣಿಕರು ಪ್ರಯಾಣ ದರ ದುಬಾರಿ ಎನ್ನುತ್ತಿದ್ದಾರೆ. ಹೆಚ್ಚಾಗಿ ಐಟಿ&ಬಿಟಿ ಕಂಪನಿ ಸಿಬ್ಬಂದಿ ಹಾಗೂ ವಿವಿಧ ಕೈಗಾರಿಕೆಗಳ ಬಡ ಕಾರ್ಮಿಕರು ಸಂಚರಿಸುವ ಈ ಮಾರ್ಗದಲ್ಲಿ ಗರಿಷ್ಠ ದರವನ್ನು 50ಕ್ಕೆ ಇಳಿಸಲು ಆಗ್ರಹಿಸಿದ್ದಾರೆ. ಈ ಬಗ್ಗೆ ಸಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net