ಸುರಿಯುವ ಜಡಿ ಮಳೆಯಲ್ಲಿ ನಿಂತ ಮಹಿಳೆಯರು

women's come to tahashildhar office
Published on

ಕಾರವಾರ: ಮನೆಯ ಯಜಮಾನಿಗೆ ಮಾಸಿಕ ತಲಾ 2 ಸಾವಿರ ರೂ. ನೀಡುವ ರಾಜ್ಯ ಕಾಂಗ್ರೆಸ್ ಸರ್ಕಾರದ ಯೋಜನೆಯ ಲಾಭ ಪಡೆಯಲು ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಗೃಹ ಲಕ್ಷ್ಮಿಯರು ಮುತ್ತಿಗೆ ಹಾಕಿದ್ದಾರೆ. ಆನ್‌ಲೈನ್ ನೋಂದಣಿಗಾಗಿ ದೊಡ್ಡ ಸರದಿ ಸಾಲು ಕಂಡುಬರುತ್ತಿದೆ.
ಇನ್ನೊಂದೆಡೆ ಗೃಹ ಲಕ್ಷ್ಮಿ ನೋಂದಣಿಗೆ ಹಲವು ಅಡಚಣೆಗಳು ಬರುತ್ತಿವೆ. ಇದರಿಂದ ರೇಶನ್ ಕಾರ್ಡ್ ಅಪ್‌ಡೇಟ್ ಮಾಡಲು ತಹಸೀಲ್ದಾರ್ ಕಚೇರಿಯಲ್ಲಿ ಉದ್ದದ ಸಾಲು ಕಂಡುಬರುತ್ತಿದೆ.

ಬುಧವಾರ ಕಾರವಾತ ತಹಸೀಲ್ದಾರ್ ಕಚೇರಿಯಲ್ಲಿ ರೇಶನ್ ಕಾರ್ಡ್ನಲ್ಲಿ ತಿದ್ದುಪಡಿಗಾಗಿ ಸುರಿಯುವ ಜಡಿ ಮಳೆಯ ನಡುವೆಯೂ 500 ಕ್ಕೂ ಅಧಿಕ ಜನ ಆಗಮಿಸಿದ್ದರು. ಸರತಿ ಸಾಲು ಕಚೇರಿಯ ಗೇಟ್ ದಾಟಿ ರಸ್ತೆಯಲ್ಲಿ ಮುಂದುವರಿದಿತ್ತು.

ಬೆಳಗ್ಗೆ 10 ಗಂಟೆಗೆ ಬಂದವರಿಗೆ 1 ಗಂಟೆಯವರೆಗೂ ಪಾಳಿ ಬಂದಿರಲಿಲ್ಲ. ನಂತರ ಹಲವರಿಗೆ ಟೋಕನ್ ಕೊಟ್ಟು ಮುಂದಿನ ದಿನಾಂಕಕ್ಕೆ ದಾಖಲೆ ಸಮೇತ ಬರುವಂತೆ ಸೂಚಿಸಲಾಯಿತು. ಇದೇ ಪರಿಸ್ಥಿತಿ ಜಿಲ್ಲೆಯ ಇತರೆಡೆಯೂ ಕಂಡುಬರುತ್ತಿದೆ.
ಅಪ್‌ಡೇಟ್ ಏಕೆ..?
ಎಪಿಎಲ್, ಬಿಪಿಎಲ್ ಎಲ್ಲ ರೀತಿಯ ರೇಶನ್ ಕಾರ್ಡ್ ಹೊಂದಿದವರಿಗೂ ಗೃಹ ಗೃಹ ಲಕ್ಷ್ಮಿ ಸೌಲಭ್ಯ ಸಿಗುತ್ತದೆ. ಅವರು ತಮ್ಮ ಆಧಾರ ಕಾರ್ಡ್, ರೇಶನ್ ಕಾರ್ಡ್ ಮಾಹಿತಿಯನ್ನು ಆನ್‌ಲೈನ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕಿದೆ.

ಆದರೆ, ಹಲವು ಎಪಿಎಲ್ ಕಾರ್ಡ್ಗಳು ಮೃತರ ಹೆಸರಿನಲ್ಲಿವೆ.ಕೆಲವು ರೇಶನ್ ಕಾರ್ಡ್ಗಳಲ್ಲಿ ಮಹಿಳೆಯರು ಮನೆಯ ಯಜಮಾನಿ ಎಂದು ಬದಲಾಗಿಲ್ಲ. ಹಲವು ವರ್ಷಗಳಿಂದ ಬಳಕೆಯಾಗದ ಕೆಲವು ರೇಶನ್ ಕಾರ್ಡ್ಗಳ ಸಂಖ್ಯೆಯನ್ನು ಪೋರ್ಟಲ್‌ನಲ್ಲಿ ನೋಂದಾಯಿತಿದರೆ ಊರ್ಚಿತವಿಲ್ಲ ಎಂದು ಸಂದೇಶ ಬರುತ್ತಿದೆ.

ಇಂಥ ಎಲ್ಲ ಸಮಸ್ಯೆ ಇದ್ದವರನ್ನು ರೇಶನ್ ಕಾರ್ಡ್ನಲ್ಲಿನ ಮಾಹಿತಿ ಬದಲಾವಣೆಗಾಗಿ ತಹಸೀಲ್ದಾರ್ ಕಚೇರಿಗೆ ಮಹಿಳೆಯರು ಬರುತ್ತಿದ್ದಾರೆ. ಕಾರವಾರ ತಾಲೂಕು ಒಂದರಲ್ಲೇ ಇಂಥ ದೋಷಗಳಿರುವ 3 ಸಾವಿರ ಪಡಿತರ ಚೀಟಿಗಳಿದ್ದು, ಜಿಲ್ಲೆಯಲ್ಲಿ 30 ಸಾವಿರಕ್ಕೂ ಅಽಕ ರೇಶನ್ ಕಾರ್ಡ್ಗಳು ಅಪ್‌ಡೇಟ್ ಆಗಬೇಕಿವೆ ಎನ್ನಲಾಗಿದೆ.
3.51 ಲಕ್ಷ ಯಜಮಾನಿಯರು:
ಜಿಲ್ಲೆಯಲ್ಲಿ 3.51 ಲಕ್ಷ ಗೃಹ ಲಕ್ಷ್ಮಿಯರು ಗುರುತಿಸಿಕೊಂಡಿದ್ದು, 52,560 ಜನ ಇದುವರೆಗೆ ನೋಂದಾಯಿಸಿಕೊಂಡಿದ್ದಾರೆ. ಇನ್ನು ಶೇ.80 ಕ್ಕೂ ಅಧಿಕ ಜನ ನೋಂದಾಯಿಸಿಕೊಳ್ಳುವುದು ಬಾಕಿ ಇದೆ. ನೋಂದಣಿಗಾಗಿ 207 ಗ್ರಾಮ ಒನ್, 229 ಬಾಪೂಜಿ ಸೇವಾ ಕೇಂದ್ರ 21 ಕರ್ನಾಟಕ ಒನ್ ಹಾಗೂ 11 ನಗರ ಸ್ಥಳೀಯ ಸಂಸ್ಥೆಗಳು, ಸಿಎಸ್‌ಸಿ ಸೇರಿ ಒಟ್ಟು 488 ಕೇಂದ್ರಗಳನ್ನು ತೆರೆಯಲಾಗಿದೆ. ನಗರಗಳಲ್ಲಿ ಸಂದೇಶ ಬರದೇ ಇದ್ದರೂ ನೋಂದಣಿ ಮಾಡಿಕೊಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net