ನಿದ್ದೆಗೆಡಿಸಿದ ಒಂಟಿ ಆನೆ ಹಾವಳಿ!

nrp elephant
Published on

ಗ್ರಾಮಗಳ ಪಕ್ಕದಲ್ಲೇ ಸಂಚರಿಸಿ ಜನರಿಗೆ ಭೀತಿ ಹುಟ್ಟಿಸಿದ ಮಖ್ನಾ ಸೆರೆಗೆ ಸ್ಥಳೀಯ ಪಟ್ಟು

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಚಿಕ್ಕಮಣ್ಣುಗುಡ್ಡೆ ಟಸ್ಕರ್ ಮತ್ತು ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿರುವ ಮಖ್ನಾ ಒಂಟಿ ಆನೆ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಸಿಗದೆ ಪ್ರತಿದಿನ ಸುತ್ತಮುತ್ತಲ ಗ್ರಾಮಗಳ ಜನರಿಗೆ ನಿದ್ದೆಗೆಡಿಸುತ್ತ ಭಯ ತರಿಸಿದೆ.

ಒಂಟಿ ಆನೆಗಳು ಸುತ್ತಮುತ್ತಲ ಗ್ರಾಮಗಳಲ್ಲಿ ಸಂಚರಿಸುವುದು, ಬೆಳೆ ಹಾನಿ ಮಾಡುವುದು, ರಸ್ತೆಯಲ್ಲಿ ಕಾಣಿಸಿಕೊಂಡು ಜನರಲ್ಲಿ ಭೀತಿ ಹುಟ್ಟಿಸಿವೆ. ಜತೆಗೆ ದೊಡ್ಡ ದೊಡ್ಡ ಮರಗಳನ್ನೇ ನೆಲಕಚ್ಚಿಸುತ್ತಿವೆ.

ಟಸ್ಕರ್ ಆನೆ ಉಪಟಳ

ಚಿಕ್ಕಮಣ್ಣುಗುಡ್ಡೆ ಅರಣ್ಯದ ಒಂಟಿ ಟಸ್ಕರ್ ಆನೆ ಆರು ತಿಂಗಳಿಂದಲೂ ಹೆಚ್ಚಿನ ಉಪಟಳ ನೀಡುತ್ತಿದ್ದು, ಅಂಜನಾಪುರ, ವಿಭೂತಿಕೆರೆ ಭಾಗದಲ್ಲಿ ಸಂಚರಿಸಿ ತೆಂಗು, ಹಲಸು, ಮಾವು, ಕಬ್ಬಿಣ ಗೇಟ್, ಕಾಂಪೌಂಡ್, ದೊಡ್ಡ ದೊಡ್ಡ ಮರಗಳನ್ನೇ ಧರೆಗುರುಳಿಸಿ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಸೆಡ್ಡು ಹೊಡೆದಿದೆ.

ರಾತ್ರಿ ವೇಳೆ ಗ್ರಾಮಕ್ಕೆ ನುಗ್ಗುವುದು, ಹಗಲು ಮತ್ತು ಸಂಜೆ ದೇವರದೊಡ್ಡಿ, ತಿಮ್ಮಯ್ಯನದೊಡ್ಡಿ, ಕುಂಭಾಪುರ ಕಾಲನಿ, ವಿಭೂತಿಕೆರೆ, ಅಂಜನಾಪುರ ರಸ್ತೆಗಳಲ್ಲಿ ಕಾಣಿಸಿಕೊಂಡು ಸುತ್ತಮುತ್ತಲ ಗ್ರಾಮಗಳಲ್ಲಿ ಭಯದ ವಾತಾವರಣ ಮೂಡಿಸಿದೆ. ಸತತ ಮೂರ‌್ನಾಲ್ಕು ದಿನಗಳಿಂದ ಅಂಜನಾಪುರ, ವಿಭೂತಿಕೆರೆ ಗ್ರಾಮದ ಅಕ್ಕಪಕ್ಕವೇ ಓಡಾಡುತ್ತ ನಿವಾಸಿಗಳಲ್ಲಿ ಗಾಬರಿ ತರಿಸುತ್ತಿದೆ. ತೆಂಗಿನಕಲ್ಲು ಅರಣ್ಯದಲ್ಲಿರುವ ಒಂಟಿ ಮಖ್ನಾ ಆನೆ ಉಪಟಳ ಕೂಡ ಹೆಚ್ಚಾಗಿದೆ.

ಟಾರ್ಗೆಟ್

ತೆಂಗು, ಹಲಸಿನ ಮರಗಳೇ ಒಂಟಿ ಆನೆಗಳ ಟಾರ್ಗೆಟ್. 15ರಿಂದ 20 ವರ್ಷ ಬೆಳೆಸಿದ ತೆಂಗಿನಮರಗಳು, ಫಸಲಿಗೆ ಬಂದ ಹಲಸಿನ ದೊಡ್ಡ ಮರಗಳನ್ನೇ ನೆಲಕ್ಕುರುಳಿಸಿ ನಾಶ ಮಾಡುತ್ತಿದೆ. ಮಾವಿನಮರದ ರೆಂಬೆಕೊಂಬೆಗಳನ್ನು ಮುರಿದು ನಾಶಪಡಿಸುತ್ತಿದೆ. ಬೋರ್‌ವೆಲ್ ಸೇರಿ ಪಂಪ್‌ಸೆಟ್ ಪರಿಕರ ಹಾಳು ಮಾಡುತ್ತಿದೆ. ಕಾಂಪೌಂಡ್, ಕಬ್ಬಿಣದ ಗೇಟ್, ಕಲ್ಲಿನ ಕಂಬ, ಮುಳ್ಳುತಂತಿಬೇಲಿ ಇದಕ್ಕೆ ಲೆಕ್ಕವೇ ಇಲ್ಲ. ಇದು ರೈತರಿಗೆ ನುಂಗಲಾರದ ತುತ್ತಾಗಿದೆ. ಕಷ್ಟಪಟ್ಟು ಹತ್ತಾರು ವರ್ಷ ಬೆಳೆಸಿದ ತೆಂಗಿನಮರಗಳು ನಾಶವಾಗುತ್ತಿರುವುದು ರೈತರಲ್ಲಿ ಆತಂಕ ಹೆಚ್ಚಿಸಿದೆ ಎನ್ನುತ್ತಾರೆ ವಿಭೂತಿಕೆರೆ ರೈತ ಚಿಕ್ಕಣ್ಣ.

ಎರಡು ಆನೆ ಸೆರೆ

ಕಳೆದ ಏಳು ತಿಂಗಳ ಹಿಂದಷ್ಟೇ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿ ಸಾಕಾನೆಗಳ ನೆರವಿನಲ್ಲಿ ಎರಡು ಪುಂಡಾನೆಗಳನ್ನು ಸೆರೆ ಹಿಡಿದು ಆನೆ ಶಿಬಿರಕ್ಕೆ ಸೇರಿಸಲಾಗಿತ್ತು. ಆಗ ಉಳಿದ ಆನೆಗಳನ್ನು ತೆಂಗಿನಕಲ್ಲು ಅರಣ್ಯ ಸೇರಿ ಮತ್ತಿತರ ಕಡೆ ಬೃಹತ್ ಕಾರ್ಯಾಚರಣೆ ನಡೆಸಿ ಡ್ರೋಣ್ ಕ್ಯಾಮರಾ ಬಳಕೆ ಮಾಡಿಕೊಂಡು ಸ್ವಸ್ಥಾನ ಸೇರಿಸಲಾಗಿತ್ತು. ಆದರೆ, ಆನೆಗಳ ಜತೆ ಬಂದ ಒಂಟಿ ಆನೆಗಳು ಹಿಂಡಿನಿಂದ ಪ್ರತ್ಯೇಕವಾಗಿ ಭಯದ ವಾತಾವರಣ ಮೂಡಿಸಿವೆ.

ತೆಂಗಿನಕಲ್ಲು ಮತ್ತು ಚಿಕ್ಕಮಣ್ಣುಗುಡ್ಡೆ ಸೇರಿರುವ ಒಂಟಿ ಆನೆಗಳು ಗ್ರಾಮಕ್ಕೆ ನುಗ್ಗುತ್ತಿವೆ. ಅರಣ್ಯ ಇಲಾಖೆ ಒಂಟಿ ಆನೆಗಳ ಸೆರೆಗೆ ಮುಂದಾಗಬೇಕು. ಇಲ್ಲದಿದ್ದರೆ ಮುಂದೆ ಜನರ ಮೇಲೆರಗುತ್ತವೆಯೋ ಎಂಬ ಭಯ ಕಾಡುತ್ತಿದೆ. ರಮೇಶ್ದೇವರದೊಡ್ಡಿಚಿಕ್ಕಮಣ್ಣುಗುಡ್ಡೆ ತೆಂಗಿನಕಲ್ಲು ಅರಣ್ಯ ಪ್ರದೇಶದ ಒಂಟಿ ಆನೆಗಳು ಕಾರ್ಯಾಚರಣೆಗೆ ಸಿಗುತ್ತಿಲ್ಲ. ಅವುಗಳ ಚಲನವಲನ ಮತ್ತು ಓಡಾಟವನ್ನು ೆಟೋಗ್ರಫಿ ಮಾಡಿ ಹಿರಿಯ ಅರಣ್ಯ ಅಧಿಕಾರಿಗಳು ಮತ್ತು ರಾಮನಗರ-ಚನ್ನಪಟ್ಟಣ ಮಾನ್ಯ ಶಾಸಕರ ಗಮನಕ್ಕೂ ವಿಷಯ ತರಲಾಗಿದೆ. ಟಸ್ಕರ್ ಮತ್ತು ಮಖ್ನಾ ಆನೆ ಸೆರೆಹಿಡಿಯಲು ಅನುಮತಿ ನೀಡಬೇಕೆಂದು ಪತ್ರ ಮುಖೇನ ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗಿದೆ. ಎಂ. ರಾಮಕೃಷ್ಣಪ್ಪಡಿಎಫ್‌ಒ, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net