

ಹನೂರು: ತಾಲೂಕಿನ ನೆಲ್ಲೂರು ಗ್ರಾಮ ಸಮೀಪದ ಅರಣ್ಯ ಪ್ರದೇಶದ ಮಾರ್ಗದಲ್ಲಿ ಸೋಮವಾರ ಸಂಜೆ ಒಂಟಿ ಸಲಗವೊಂದು ಕಾಣಿಸಿಕೊಂಡು ವಾಹನ ಸವಾರರಲ್ಲಿ ಆತಂಕವನ್ನು ಉಂಟು ಮಾಡಿತು.
ಮಲೆಮಹದೇಶ್ವರ ವನ್ಯಜೀವಿ ವಲಯದ ಹೂಗ್ಯಂ ವಲಯ ಅರಣ್ಯ ವ್ಯಾಪ್ತಿಯಲ್ಲಿ ಆನೆಗಳಿವೆ. ಆದರೆ ರಸ್ತೆ ಸಮೀಪಕ್ಕೆ ಆಗಮಿಸುತ್ತಿರಲಿಲ್ಲ. ಸೋಮವಾರ ಸಂಜೆ ನೆಲ್ಲೂರು ಗ್ರಾಮದ ಬಳಿಯ ಅರಣ್ಯ ಪ್ರದೇಶದ ತಿರುವಿನಲ್ಲಿ ಒಂಟಿ ಸಲಗವೊಂದು ದಿಢೀರ್ ಪ್ರತ್ಯಕ್ಷವಾಗಿ ರಸ್ತೆಯನ್ನು ದಾಟುತ್ತಿತ್ತು. ಇದನ್ನು ಕಂಡ ಚಲಿಸುತ್ತಿದ್ದ ವಾಹನ ಸವಾರರು ಕೆಲಕಾಲ ಆತಂಕಗೊಂಡರು. ಇನ್ನು ಕೆಲವರು ಕುತೂಹಲದಿಂದ ವೀಕ್ಷಿಸಿ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದರು. ಸದ್ಯ ಆನೆ ಯಾವುದೇ ತೊಂದರೆ ನೀಡದೆ ಅರಣ್ಯ ಪ್ರದೇಶದೊಳಗೆ ತೆರಳಿದ್ದರಿಂದ ಸಾರ್ವಜನಿಕರು ನಿಟ್ಟುಸಿರು ಬಿಟ್ಟರು. ಕಾಡಾನೆಗಳಿಂದ ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಕೂಡಲೂರು ಗ್ರಾಮದ ವೆಂಕಟಾಚಲ ಒತ್ತಾಯಿಸಿದ್ದಾರೆ.