ಸೋಮಣ್ಣಗಿಂತ ಪತ್ನಿ ಆಸ್ತಿವಂತೆ

Somanna_Asset
Published on

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ವಿ.ಸೋಮಣ್ಣ ಆಸ್ತಿ ವಿವರವನ್ನು ಘೋಷಿಸಿಕೊಂಡಿದ್ದಾರೆ.

ಮಾಜಿ ಸಚಿವ, ಬಿಜೆಪಿ ಅಭ್ಯರ್ಥಿ ಸೋಮಣ್ಣ ಕೋಟಿಕುಳವಾಗಿದ್ದು ಪತ್ನಿ ಶೈಲಜಾ ಹೆಸರಿನಲ್ಲಿರುವ ಚರ-ಸ್ಥಿರಾಸ್ತಿ ಸೇರಿ ಒಟ್ಟು ಮೌಲ್ಯ 60,78,15,285 ರೂ.! ಸೋಮಣ್ಣಗಿಂತ ಪತ್ನಿ ಶೈಲಜಾ ಆಸ್ತಿವಂತೆ. ಬೆಂಗಳೂರು ವಿ.ವಿ.ಪುರಂನ ವಿವಿ ಸಂಜೆ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದಿರುವ ಸೋಮಣ್ಣ ಹೆಸರಲ್ಲಿ 5,18,23,590 ರೂ., ಚರಾಸ್ತಿ ಇದ್ದರೆ ಪತ್ನಿ ಹೆಸರಲ್ಲಿ 4,38,91,625 ರೂ., ಚಿನ್ನಭಾರಣ ಇವೆ. ಸೋಮಣ್ಣ ಹೆಸರಲ್ಲಿ ಎರಡು ಇನ್ನೋವ, 1 ಕ್ವಾಲಿಸ್ ಕಾರಿದೆ.

ಪತ್ನಿ ಶೈಲಜಾ ಹೆಸರಲ್ಲಿ 38,65,00,000 ಸ್ಥಿರಾಸ್ತಿ ಇದೆ. ಬೆಂಗಳೂರಿನ ವಿಜಯನಗರ ಮತ್ತು ಎಂಆರ್‌ಸಿಆರ್ ಲೇಔಟ್ ನಲ್ಲಿ 8,06,00,000 ರೂ. ಮೌಲ್ಯದ ಎರಡು ವಸತಿ ಕಟ್ಟಡಗಳು ಸೇರಿ ಸೋಮಣ್ಣ ಹೆಸರಲ್ಲಿ 12.56 ಕೋ.ರೂ., ಮೌಲ್ಯದ ಸ್ಥಿರಾಸ್ತಿ ಇದೆ. ಇನ್ನೂ ಪತ್ನಿ ಶೈಲಜಾ ಹೆಸರಲ್ಲಿ ಚಿಕ್ಕಮಗಳೂರು ತಾಲೂಕು ಬಾಸಾಪುರ ಗ್ರಾಮದಲ್ಲಿ 4.50 ಕೋ.ರೂ., ಮೌಲ್ಯದ 68.01 ಎಕರೆ ಕೃಷಿ ಭೂಮಿ ಜತೆಗೆ ಬೆಂಗಳೂರಿನ ನಾಗದೇವನಹಳ್ಳಿಯಲ್ಲಿ 16 ಸಾವಿರ ಚ. ಅಡಿಯ ಅಳತೆಯ 10,25,00,000 ರೂ. ಮೌಲ್ಯದ ವಾಣಿಜ್ಯ ಕಟ್ಟಡಗಳು ಸೇರಿ ಒಟ್ಟು 38.65 ಕೋ.ರೂ., ಮೌಲ್ಯದ ಸ್ಥಿರಾಸ್ತಿ ಇದೆ.

ಶೈಲಜಾ ಹೆಸರಲ್ಲಿ 16.18 ಕೋ.ರೂ., ಸಾಲದ ಹೊರೆಯು ಇದೆ. 6.44 ಕೋ.ರೂ., ಸೋಮಣ್ಣ ಹೆಸರಲ್ಲಿ ಸಾಲ ಇದೆ. ಲೋಕಾಯುಕ್ತ ನ್ಯಾಯಾಲಯ, ಬೆಂಗಳೂರು ಸಿಟಿ ಕೋರ್ಟ್‌ನಲ್ಲಿ ಸೋಮಣ್ಣ ವಿರುದ್ಧ ಪ್ರಕರಣಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net