ಲೋಕಾಯುಕ್ತರಿಗೆ ಸರ್ಕಾರಿ ಆಸ್ಪತ್ರೆಯ ನೈಜತೆಯ ದರ್ಶನ !

Dist. Hospital
Published on

ತುಮಕೂರು: ಭಷ್ಟ್ರಾಚಾರ ನಿಮೂರ್ಲನೆಗೆ ಕಂಕಣ ತೊಟ್ಟಿರುವ ಲೋಕಾಯುಕ್ತರು ಸರ್ಕಾರಿ ಕಚೇರಿ, ವಿದ್ಯಾರ್ಥಿನಿಲಯ, ಆಸ್ಪತ್ರೆಗೆ "ಚಿಕಿತ್ಸೆ' ನೀಡಲು ಮುಂದಾಗಿದ್ದಾರೆ. ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್​.ಪಾಟೀಲ್​ ಅಲ್ಲಿನ ಅನೈರ್ಮಲ್ಯತೆ ಕಂಡು ಕೆಂಡಾಮಂಡಲರಾದರು. ಅಪಘಾತ ತುರ್ತು ಚಿಕಿತ್ಸಾ ಕೇಂದ್ರ, ಡಯಾಲಿಸಿಸ್​ ಕೇಂದ್ರ, ಹೆರಿಗೆ ವಾರ್ಡ್​, ಮಕ್ಕಳ ವಾರ್ಡ್​, ತೀವ್ರ ನಿಗಾ ಘಟಕ ಸೇರಿದಂತೆ ವಿವಿಧ ವಾರ್ಡ್​ಗಳಿಗೆ ಭೇಟಿ ನೀಡಿದಾಗ "ಸರ್ಕಾರಿ ಆಸ್ಪತ್ರೆ'ಗಳ ವಾಸ್ತವ ದರ್ಶನ ಆಯಿತು.

ಆಸ್ಪತ್ರೆಯ ಆವರಣ, ಶೌಚಾಗೃಹ ಮತ್ತು ವಾರ್ಡ್​ಗಳಲ್ಲಿ ಸ್ವಚ್ಛತೆ ಇಲ್ಲದಿರುವುದನ್ನು ಕಂಡ ಬಿ.ಎಸ್​.ಪಾಟೀಲ್​ ಆಸ್ಪತ್ರೆಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಸ್ವಚ್ಛತೆ ನಿರ್ವಹಣೆಗಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಅನುದಾನ ನೀಡುತ್ತಿದ್ದು, ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವಂತೆ ತಾಕೀತು ಮಾಡಿದರು. ಇನ್ನೂ ಎಲ್ಲಾ ಔಷಧಗಳನ್ನು ಉಚಿತವಾಗಿ ಆಸ್ಪತ್ರೆಯಲ್ಲೇ ವಿತರಿಸಲಾಗುತ್ತಿದೆಯೇ ಎಂಬ ಬಗ್ಗೆ ರೋಗಿಗಳ ಸಂಬಂಧಿಕರ ಬಳಿ ಮಾಹಿತಿ ಪಡೆದು ಖಚಿತಪಡಿಸಿಕೊಂಡರು. ಮುಖ್ಯ ಔಷಧ ಉಗ್ರಾಣಕ್ಕೆ ಭೇಟಿ ನೀಡಿ ಔಷಧ ದಾಸ್ತಾನು, ವಿತರಣೆಗೆ ಸಂಬಂಧಿಸಿದಂತೆ ನೋಂದಣಿ ಪುಸ್ತಕಗಳನ್ನು ಖುದ್ದು ಪರಿಶೀಲಿಸಿದರು. ಒಂದು ವೇಳೆ ಔಷಧಗಳನ್ನು ಹೊರಗಡೆಯಿಂದ ತರಿಸಿದ ಪ್ರಕರಣಗಳು ಕಂಡುಬಂದಿದ್ದೇ ಆದಲ್ಲಿ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ಸಹ ನೀಡಿದರು.

ಕಟ್ಟಡ ರಿಪೇರಿ, ಸೋಲಾರ್​ ಅಳವಡಿಸಿ: ಇನ್ನೂ ಬಿ.ಎಚ್​.ರಸ್ತೆಯ ಮೆಟ್ರಿಕ್​ ನಂತರದ ಬಾಲಕಿಯರ ಟಿಸಿಎಚ್​/ಬಿ.ಇಡಿ., ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿದ ಲೋಕಾಯುಕ್ತ ನ್ಯಾ.ಬಿ.ಎಸ್​.ಪಾಟೀಲ್​ಗೆ ಅಲ್ಲಿ ವಿದ್ಯಾರ್ಥಿನಿಯರಿಂದ ಅಷ್ಟಾಗಿ ದೂರುಗಳು ಕೇಳಿಬರಲಿಲ್ಲ. ಊಟ, ಊಪಹಾರದ ಗುಣಮಟ್ಟದ ಬಗ್ಗೆ ವಿದ್ಯಾರ್ಥಿನಿಯರಿಂದಲೇ ಮಾಹಿತಿಪಡೆದರು. ಈ ವೇಳೆ ಹೆಣ್ಣುಮಕ್ಕಳಿಗೆ ಬಿಸಿನೀರಿನ ಸೌಲಭ್ಯಕ್ಕೆ ಸೋಲಾರ್​ ಅಳವಡಿಸಿ, ಇನ್ನೂ ಕಟ್ಟಡವನ್ನ ರಿಪೇರಿ ಮಾಡಿಸುವಂತೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪಗೆ ಸೂಚನೆ ನೀಡಿದರು. ಇನ್ನೂ ಸಂದರ್ಶನ ಪುಸ್ತಕದಲ್ಲಿ ಹೆಣ್ಣುಮಕ್ಕಳ ಮಾನಸಿಕ, ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗಾಭ್ಯಾಸ ಮಾಡಿಸಿ. ವ್ಯಕ್ತಿತ್ವ ನಿರ್ಮಾಣ, ಸಾಮಾಜಿಕ ಜವಾಬ್ದಾರಿ ಹೆಚ್ಚಿಸಲು ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ವಿಶೇಷ ಉಪನ್ಯಾಸಗಳನ್ನು ನೀಡುವಂತೆ ಸಲಹೆ ದಾಖಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net