

ತುಮಕೂರು: ಆದಾಯಕ್ಕಿಂತ ಮೀರಿ ಅಕ್ರಮವಾಗಿ ಆಸ್ತಿ ಹೊಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬುಧವಾರ ಬಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ಜಿಲ್ಲೆಯ ಇಬ್ಬರು ಭ್ರಷ್ಟ ಅಧಿಕಾರಿಗಳ ಮನೆ, ಕಾಂಪ್ಲೆಕ್ಸ್ ಮೇಲೆ ದಾಳಿ ನಡೆಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್.ರವಿ ಬಳಿ ಬರೋಬ್ಬರಿ 4.27ಕೋಟಿ ರೂ. ಮೌಲ್ಯದ ಆಸ್ತಿ ಹಾಗೂ ಶಿರಾ ತಾಪಂ ಸಹಾಯಕ ಇಂಜಿನಿಯರ್ ಕೆ.ಬಿ.ಪುಟ್ಟರಾಜು ಬಳಿ 2.37ಕೋಟಿ ರೂ. ಆಸ್ತಿ ಪತ್ತೆಯಾಗಿದ್ದು ಇದು ಆದಾಯಕ್ಕಿಂತ ಶೇ.90ರಷ್ಟು ಹೆಚ್ಚಾಗಿದೆ.
ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ್ದು ವಿವಿಧ ಆಸ್ತಿಗೆ ಸಂಬಂಧಪಟ್ಟ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಸಹಾಯಕ ಇಂಜಿನಿಯರ್ ಪುಟ್ಟರಾಜು ತುಮಕೂರಿನ ಅಶೋಕನಗರದ ನಿವಾಸಿಯಾಗಿದ್ದು, ಅವರ ಮನೆಯಲ್ಲಿ ಲೋಕಾಯುಕ್ತರು ದಾಖಲಾತಿಗಳನ್ನು ಪರಿಶೀಲಿಸಿದಾಗ 2.37ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.
1.50ಕೋಟಿ ರೂ. ಸ್ಥಿರಾಸ್ತಿ ಜತೆಗೆ ಕಾರು, ಬೈಕ್, ಒಂದು ಕಾಲು ಕೆಜಿ ಚಿನ್ನದ ಆಭರಣ, ಬರೋಬ್ಬರಿ 8ಕೆಜಿ ಬೆಳ್ಳಿ, 43470ರೂ. ನಗದು, ಬ್ಯಾಂಕ್ ಖಾತೆಯಲ್ಲಿ 3.51 ಲಕ್ಷ ರೂ. ಹಾಗೂ 10 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿ ಒಟ್ಟು 2.37ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿವೆ.
ಅಧಿಕಾರಿಗಳ ಮತ್ತೊಂದು ತಂಡ ತುಮಕೂರು ಹೊರವಲಯದ ಯಲ್ಲಾಪುರದ ಮೂರು ಅಂತಸ್ಥಿನ ಕಮರ್ಷಿಯಲ್ ಕಾಂಪ್ಲೆಕ್ಸ್, ಡಿಸಿಸಿ ಬ್ಯಾಂಕ್ ಲಾಕರ್‌ಗಳು, ಶಿರಾ ಇಂಜಿನಿಯರಿಂಗ್ ಕಚೇರಿ, ಇನ್ನೊಂದು ತಂಡ ಭದ್ರಾವತಿಯ ಮನೆಯಲ್ಲೂ ಏಕಕಾಲದಲ್ಲಿ ಶೋಧನಾ ಕಾರ್ಯ ನಡೆಸಿತು. ವೇತನಕ್ಕಿಂತ ಶೇ.98ರಷ್ಟು ಆಸ್ತಿ ಹೊಂದಿರುವುದು ದಾಳಿ ವೇಳೆಯಲ್ಲಿ ಬಯಲಾಗಿದೆ.
ಜಂಟಿ ಕೃಷಿ ನಿರ್ದೇಶಕ ಕೆ.ಎಚ್.ರವಿ ಅವರ ರಾಮನಗರದ ಮನೆ, ಫಾರಂಹೌಸ್, ಕಾಂಪ್ಲೆಕ್ಸ್ ಹಾಗೂ ತುಮಕೂರಿನ ಆರ್.ಟಿ. ನಗರದ ಶಂಕರಪುರಂನಲ್ಲಿ ಬಾಡಿಗೆ ನಿವಾಸದ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲಾತಿಗಳ ಪರಿಶೀಲನೆಯಲ್ಲಿ ತೊಡಗಿದ್ದರು.
ಎರಡು ಕಾರಿನಲ್ಲಿ ಬಂದಿದ್ದ ಲೋಕಾಯುಕ್ತದ 6 ಅಧಿಕಾರಿಗಳ ತಂಡ ದಿನವಿಡೀ ತಪಾಸಣೆ ನಡೆಸಿತು. ಕಳೆದ 7 ತಿಂಗಳ ಹಿಂದೆಯಷ್ಟೇ ಕೆ.ಎಚ್.ರವಿ ಹಾಸನದಿಂದ ತುಮಕೂರು ಕೃಷಿ ಇಲಾಖೆಗೆ ವರ್ಗಾವಣೆಯಾಗಿ ಬಂದಿದ್ದರು.
ಲೋಕಾಯುಕ್ತ ಎಸ್ಪಿ ವಲಿಬಾಷಾ ನೇತೃತ್ವದ ತಂಡದಲ್ಲಿ ಡಿವೈಎಸ್ಪಿ ಮಂಜುನಾಥ್, ಹರೀಶ್ ಮತ್ತು ಸಿಬ್ಬಂದಿ ದಾಳಿಯಲ್ಲಿದ್ದರು.